ನವದೆಹಲಿ : ದೇಶದಲ್ಲಿ ಪ್ರತಿದಿನ ಸೈಬರ್ ಕ್ರೈಂ ಘಟನೆಗಳು ಹೆಚ್ಚುತ್ತಿವೆ. ಆದ್ರೆ, ಈಗ ಇದಕ್ಕೆ ಸಂಬಂಧಿಸಿದ ಅಚ್ಚರಿಯ ಅಂಕಿ-ಅಂಶ ಕೂಡ ಬೆಳಕಿಗೆ ಬಂದಿದೆ. ವಾಸ್ತವವಾಗಿ, 2020-2022ರ ನಡುವೆ ಎಲ್ಲಾ 28 ರಾಜ್ಯಗಳಲ್ಲಿ ದಾಖಲಾದ ಒಟ್ಟು 1.67 ಲಕ್ಷ ಪ್ರಕರಣಗಳಲ್ಲಿ ಕೇವಲ 2,706 ಜನರು (1.6%) ಮಾತ್ರ ಈ ಅಪರಾಧಗಳ ಅಡಿಯಲ್ಲಿ ಶಿಕ್ಷೆಗೊಳಗಾಗಿದ್ದಾರೆ. 2020 ಮತ್ತು 2022ರ ನಡುವೆ ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ಸೈಬರ್ ಅಪರಾಧಕ್ಕೆ ಸಂಬಂಧಿಸಿದ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ದತ್ತಾಂಶ ತೋರಿಸುತ್ತದೆ.
ಆದಾಗ್ಯೂ, ಈ ರಾಜ್ಯಗಳಲ್ಲಿ ಸಹ, ಸೈಬರ್ ಅಪರಾಧಗಳ ನೋಂದಾಯಿತ ಪ್ರಕರಣಗಳಿಗೆ ಹೋಲಿಸಿದರೆ ಶಿಕ್ಷೆಯ ಪ್ರಮಾಣವು ಶೇಕಡಾ 2 ಕ್ಕಿಂತ ಕಡಿಮೆಯಾಗಿದೆ. ದಿ ಟ್ರಿಬ್ಯೂನ್ ವರದಿಯ ಪ್ರಕಾರ, 2020 ರಲ್ಲಿ ಕೇಂದ್ರಾಡಳಿತ ಪ್ರದೇಶಗಳನ್ನ ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲಿ ಒಟ್ಟು 49,708 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕೇವಲ 1,109 ವ್ಯಕ್ತಿಗಳು ಅಂದರೆ ಶೇ.2ರಷ್ಟು ಮಂದಿ ಮಾತ್ರ ಶಿಕ್ಷೆಗೆ ಗುರಿಯಾಗಿದ್ದಾರೆ.
ಯುಪಿ, ಕರ್ನಾಟಕದಲ್ಲಿ ಅತಿ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು.!
2020ರಲ್ಲಿ ಉತ್ತರ ಪ್ರದೇಶದಲ್ಲಿ ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ ಒಟ್ಟು 11,000 ಪ್ರಕರಣಗಳು ದಾಖಲಾಗಿವೆ. ಆದರೆ 642 ಮಂದಿಗೆ ಮಾತ್ರ ಶಿಕ್ಷೆಯಾಗಿದೆ. ಕರ್ನಾಟಕದಲ್ಲಿ 10,741 ವಂಚನೆ ಪ್ರಕರಣಗಳು ದಾಖಲಾಗಿವೆ. ಆದರೆ ಇಬ್ಬರಿಗೆ ಮಾತ್ರ ಶಿಕ್ಷೆಯಾಗಿದೆ. 2020 ರಲ್ಲಿ 5,496 ಸೈಬರ್ ಅಪರಾಧ ಪ್ರಕರಣಗಳೊಂದಿಗೆ ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದೆ, ಆದರೆ ಕೇವಲ ಮೂವರಿಗೆ ಶಿಕ್ಷೆಯಾಗಿದೆ.
2021ರಲ್ಲಿ, ಎಲ್ಲಾ ರಾಜ್ಯಗಳಲ್ಲಿ ಒಟ್ಟು 52,430 ಪ್ರಕರಣಗಳು ದಾಖಲಾಗಿವೆ, ಅದರಲ್ಲಿ 490 ಜನರಿಗೆ ಮಾತ್ರ ಶಿಕ್ಷೆ ವಿಧಿಸಲಾಗಿದೆ. ಅಂದರೆ ಶೇ.0.93ರಷ್ಟು ಮಂದಿಗೆ ಮಾತ್ರ ಶಿಕ್ಷೆಯಾಗಿದೆ. ಇದರಲ್ಲಿ 10,300 ಪ್ರಕರಣಗಳೊಂದಿಗೆ ತೆಲಂಗಾಣ ಅತಿ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳನ್ನ ದಾಖಲಿಸಿದೆ. ಈ ಪೈಕಿ 19 ಮಂದಿಗೆ ಮಾತ್ರ ಶಿಕ್ಷೆಯಾಗಿದೆ. ಉತ್ತರ ಪ್ರದೇಶದಲ್ಲಿ 8,829 ಪ್ರಕರಣಗಳು ದಾಖಲಾಗಿವೆ, ಆದರೆ 292 ಜನರಿಗೆ ಮಾತ್ರ ಶಿಕ್ಷೆಯಾಗಿದೆ. ಕರ್ನಾಟಕ ಮೂರನೇ ಸ್ಥಾನದಲ್ಲಿದ್ದು, 8,136 ಪ್ರಕರಣಗಳು ದಾಖಲಾಗಿವೆ, ಆದರೆ 10 ಜನರಿಗೆ ಮಾತ್ರ ಶಿಕ್ಷೆಯಾಗಿದೆ.
ಅಮೆರಿಕಕ್ಕೆ ಭಾರತೀಯರ ಕಳ್ಳಸಾಗಣೆ : ಕೆನಡಾದ 200ಕ್ಕೂ ಹೆಚ್ಚು ಕಾಲೇಜುಗಳ ಕುರಿತು ‘ED’ ತನಿಖೆ