ನವದೆಹಲಿ:ರಾಜಸ್ಥಾನದ ಜೈಪುರ ಜಿಲ್ಲಾ ಗ್ರಾಹಕ ನ್ಯಾಯಾಲಯವು ನಟ ಸಲ್ಮಾನ್ ಖಾನ್ ವಿರುದ್ಧ ಹೊರಡಿಸಿದ್ದ ಜಾಮೀನು ಸಹಿತ ಬಂಧನ ವಾರಂಟ್ (Bailable Warrant) ಜಾರಿಗೆ ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ಆಯೋಗ (NCDRC) ತಡೆ ನೀಡಿದೆ. ‘ಮಿಸ್‌ಲೀಡಿಂಗ್ ಅಡ್ವರ್ಟೈಸ್‌ಮೆಂಟ್’ (ದಾರಿ ತಪ್ಪಿಸುವ ಜಾಹೀರಾತು) ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಈ ಮೂಲಕ ಕಾನೂನು ಹೋರಾಟದಲ್ಲಿ ತಾತ್ಕಾಲಿಕ ಜಯ ಸಾಧಿಸಿದ್ದಾರೆ.
ಸಲ್ಮಾನ್ ಖಾನ್ ರಾಯಭಾರಿಯಾಗಿದ್ದ ‘ರಾಜಶ್ರೀ ಇಲೈಚಿ’ (ಏಲಕ್ಕಿ) ಜಾಹೀರಾತು ವಾಸ್ತವವಾಗಿ ಪಾನ್ ಮಸಾಲಾ ಪ್ರಚಾರಕ್ಕೆ ಬಳಸಲಾಗುವ ‘ಸರೋಗೇಟ್’ ಜಾಹೀರಾತು ಎಂದು ಆರೋಪಿಸಿ ವಕೀಲ ಯೋಗೇಂದ್ರ ಸಿಂಗ್ ಎಂಬುವವರು ದೂರು ದಾಖಲಿಸಿದ್ದರು.
2026ರ ಜನವರಿಯಲ್ಲಿ ಈ ಜಾಹೀರಾತಿನ ಪ್ರಸಾರಕ್ಕೆ ಜಿಲ್ಲಾ ನ್ಯಾಯಾಲಯ ತಡೆ ನೀಡಿತ್ತು. ಆದರೂ ಕೋಟಾ ಕ್ರೀಡಾಂಗಣ ಸೇರಿದಂತೆ ಹಲವೆಡೆ ಜಾಹೀರಾತು ಪ್ರದರ್ಶನ ಮುಂದುವರಿದ ಕಾರಣ, ನ್ಯಾಯಾಲಯದ ಆದೇಶ ಉಲ್ಲಂಘನೆಯ ಆರೋಪದಡಿ ಸಲ್ಮಾನ್ ವಿರುದ್ಧ ವಾರಂಟ್ ಹೊರಡಿಸಲಾಗಿತ್ತು.
ಜಿಲ್ಲಾ ಮತ್ತು ರಾಜ್ಯ ಗ್ರಾಹಕ ನ್ಯಾಯಾಲಯಗಳ ಆದೇಶವನ್ನು ಪ್ರಶ್ನಿಸಿ ಸಲ್ಮಾನ್ ಖಾನ್ ರಾಷ್ಟ್ರೀಯ ಮಂಡಳಿಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಎನ್‌ಸಿಡಿಆರ್‌ಸಿ ಅಧ್ಯಕ್ಷ ನ್ಯಾ| ಎ.ಪಿ. ಸಾಹಿ ಅವರ ಪೀಠವು, ವಾರಂಟ್ ಜಾರಿಗೆ ತಡೆ ನೀಡಿ ಪ್ರಕರಣದ ಸಂಪೂರ್ಣ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದೆ.
“ನಾನು ಕೇವಲ ಏಲಕ್ಕಿ ಜಾಹೀರಾತಿನಲ್ಲಿ ನಟಿಸಿದ್ದೇನೆ, ಪಾನ್ ಮಸಾಲಾ ಪ್ರಚಾರ ಮಾಡಿಲ್ಲ” ಎಂದು ಸಲ್ಮಾನ್ ಖಾನ್ ನ್ಯಾಯಾಲಯದಲ್ಲಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಸೆಲೆಬ್ರಿಟಿಗಳ ಮೇಲೆ ಇಂತಹ ಕಠಿಣ ಕ್ರಮ ಜರುಗಿಸಲು ಜಿಲ್ಲಾ ನ್ಯಾಯಾಲಯಕ್ಕೆ ಅಧಿಕಾರವಿಲ್ಲ ಎಂದು ಅವರ ಪರ ವಕೀಲರು ವಾದಿಸಿದ್ದಾರೆ.








