ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಘಟಕ–08, ಯಶವಂತಪುರದಲ್ಲಿ ದಿನಾಂಕ 24-01-2026 ರಂದು ರಾಷ್ಟ್ರೀಯ ಚಾಲಕರ ದಿನಾಚರಣೆಯನ್ನು ಸಂಸ್ಥೆಯ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು. ಸಾರ್ವಜನಿಕ ಸಾರಿಗೆಯ ಪ್ರಮುಖ ಅಂಗವಾಗಿರುವ ಚಾಲಕರ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ನೂತನ ಅಧ್ಯಕ್ಷರಾದ ವಿ.ಎಸ್. ಆರಾಧ್ಯ, ವ್ಯವಸ್ಥಾಪಕ ನಿರ್ದೇಶಕರಾದ ಶಿವಕುಮಾರ್ ಕೆ.ಬಿ., ಭಾ.ಆ.ಸೇ., ಮುಖ್ಯ ಸಂಚಾರ ವ್ಯವಸ್ಥಾಪಕರಾದ ಜಿ.ಟಿ. ಪ್ರಭಾಕರ ರೆಡ್ಡಿ, ಹಾಗೂ ಉತ್ತರ ವಲಯದ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಚಂದ್ರಶೇಖರ್ ಎಸ್.ಆರ್. ರವರು ಉಪಸ್ಥಿತರಿದ್ದರು. ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ವಿ.ಎಸ್. ಆರಾಧ್ಯ ಅವರು, ಎಲ್ಲಾ ಚಾಲಕ ಮಿತ್ರರಿಗೆ ರಾಷ್ಟ್ರೀಯ ಚಾಲಕರ ದಿನಾಚರಣೆಯ ಶುಭಾಶಯಗಳನ್ನು ಸಲ್ಲಿಸಿದರು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಭಾರತದ ಇತಿಹಾಸದಲ್ಲಿಯೇ ಒಂದು ಮಾದರಿ ಮಹಾನಗರ ಸಾರಿಗೆ ಸಂಸ್ಥೆಯಾಗಿ ಗುರುತಿಸಿಕೊಂಡಿರುವುದು ಚಾಲಕರು ಹಾಗೂ ನಿರ್ವಾಹಕರ ಶಿಸ್ತು, ನಿಷ್ಠೆ ಮತ್ತು ಪ್ರಾಮಾಣಿಕ ಸೇವೆಯ ಫಲವಾಗಿದೆ ಎಂದು ಅವರು ತಿಳಿಸಿದರು. ಸಂಸ್ಥೆಯ ಬಸ್ ವ್ಯವಸ್ಥೆ ಸುಸಂಘಟಿತವಾಗಿದ್ದು, ಅಪಘಾತಗಳ ಸಂಖ್ಯೆಯೂ ಕಡಿಮೆಯಾಗಿದೆ. ಈ ಸಾಧನೆಯ ಹಿಂದೆ ಚಾಲಕರು ತಮ್ಮ ವೈಯಕ್ತಿಕ ಚಿಂತನೆಗಳನ್ನು ಬದಿಗಿಟ್ಟು, ಸ್ಟೇರಿಂಗ್ ಹಿಂದೆ ಕುಳಿತು ಸಾರ್ವಜನಿಕರ ಸೇವೆಯನ್ನು ಧ್ಯೇಯವನ್ನಾಗಿ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವೆಂದು ಹೇಳಿದರು.
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಶಿವಕುಮಾರ್ ಮಾತನಾಡಿ, ಚಾಲಕರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವುದು ಅತ್ಯಂತ ಅಗತ್ಯವೆಂದು ತಿಳಿಸಿದರು. ಚಾಲಕರ ಪ್ರಾಮಾಣಿಕ ದುಡಿಮೆ ಮತ್ತು ಜವಾಬ್ದಾರಿಯುತ ಸೇವೆಯೇ ಸಂಸ್ಥೆಯ ಬಲಿಷ್ಠ ಆಧಾರ ಸ್ತಂಭವಾಗಿದ್ದು, ಸಂಸ್ಥೆ ಹಾಗೂ ಸಿಬ್ಬಂದಿಯ ಸಮಗ್ರ ಹಿತಕ್ಕಾಗಿ ಎಲ್ಲರೂ ಶ್ರಮಿಸಬೇಕೆಂದು ಆಶಿಸಿದರು.
ಈ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಮಾನ್ಯ ಮುಖ್ಯಮಂತ್ರಿಗಳ ಚಿನ್ನದ ಪದಕ ವಿಜೇತ ಚಾಲಕರಾದ ಲೋಕೇಶ್ ಸಿ. (ಚಾಲಕ ಸಂಖ್ಯೆ 9539, 30 ವರ್ಷಗಳ ಸುದೀರ್ಘ ಸೇವೆ, 2015ರಲ್ಲಿ ಚಿನ್ನದ ಪದಕ ಪುರಸ್ಕೃತರು) ರವರು ಮಾತನಾಡಿ, ಅಪಘಾತ ರಹಿತ ಹಾಗೂ ಸುರಕ್ಷಿತ ಚಾಲನೆಯ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ಸುರಕ್ಷಿತ ಚಾಲನೆಯ ಮಹತ್ವ ಹಾಗೂ ಶಿಸ್ತು ಪಾಲನೆಯ ಅಗತ್ಯತೆಯನ್ನು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಎಲ್ಲಾ ಚಾಲಕರು ಹಾಗೂ ಚಾಲಕ–ನಿರ್ವಾಹಕರಿಗೆ ಮಾನ್ಯ ಅಧ್ಯಕ್ಷರು ಹಾಗೂ ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಹೂಗುಚ್ಚ ಮತ್ತು ಸಿಹಿ ಹಂಚುವ ಮೂಲಕ ಶುಭಾಶಯಗಳನ್ನು ಸಲ್ಲಿಸಿದರು. ಕಾರ್ಯಕ್ರಮವು ಸಂಸ್ಥೆಯ ಸಿಬ್ಬಂದಿಯಲ್ಲಿ ಆತ್ಮೀಯತೆ, ಗೌರವ ಮತ್ತು ಸೇವಾ ಬದ್ಧತೆಯನ್ನು ಮತ್ತಷ್ಟು ಬಲಪಡಿಸಿತು.
ಇನ್ಮುಂದೆ ಸರ್ಕಾರಿ ಅಧಿಕಾರಿಗಳು ‘ಜನಪ್ರತಿನಿಧಿ’ಗಳ ಪೋನ್ ಕಾಲ್ ಸ್ವೀಕರಿಸಲೇಬೇಕು: ರಾಜ್ಯ ಸರ್ಕಾರ ಖಡಕ್ ಆದೇಶ








