ಬೆಂಗಳೂರು: ರಾಷ್ಟ್ರೀಯ ಜನಗಣತಿ 2027 ಪ್ರಕ್ರಿಯೆಯು ನಿನ್ನೆಯಿಂದ (ಬುಧವಾರ) ಅಧಿಕೃತವಾಗಿ ಆರಂಭವಾಗಿದ್ದು, ರಾಜ್ಯದಲ್ಲಿ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಾರಿ ವಿಶೇಷವಾಗಿ ಸಾರ್ವಜನಿಕರಿಗೆ ಆನ್ಲೈನ್ ಮೂಲಕವೇ ಸ್ವಯಂ ಗಣತಿ (Self-Enumeration) ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಮೊದಲ ದಿನವೇ 12 ಸಾವಿರಕ್ಕೂ ಹೆಚ್ಚು ಜನರು ತಮ್ಮ ಮಾಹಿತಿಯನ್ನು ಆನ್ಲೈನ್ನಲ್ಲಿ ದಾಖಲಿಸಿದ್ದಾರೆ.
ಬುಧವಾರ ಮಧ್ಯಾಹ್ನ 3 ಗಂಟೆಯ ವೇಳೆಗೆ ಸುಮಾರು 23,000ಕ್ಕೂ ಹೆಚ್ಚು ಮಂದಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿದ್ದು, ಅದರಲ್ಲಿ 12,000ಕ್ಕೂ ಹೆಚ್ಚು ಮಂದಿ ಯಶಸ್ವಿಯಾಗಿ ಮಾಹಿತಿ ಸಲ್ಲಿಸಿದ್ದಾರೆ.
ಕರ್ನಾಟಕಕ್ಕೆ ಮೊದಲ ಸ್ಥಾನ: ಸ್ವಯಂ ಗಣತಿ ಆರಂಭವಾಗಿರುವ ಎಂಟು ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಅತಿ ಹೆಚ್ಚು ಜನರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ.
16 ಭಾಷೆಗಳಲ್ಲಿ ಲಭ್ಯ: ಸಾರ್ವಜನಿಕರ ಅನುಕೂಲಕ್ಕಾಗಿ ಅಧಿಕೃತ ವೆಬ್ಸೈಟ್ನಲ್ಲಿ ಕನ್ನಡ ಸೇರಿದಂತೆ ಒಟ್ಟು 16 ಭಾಷೆಗಳಲ್ಲಿ ಮಾಹಿತಿ ನೀಡಲು ಅವಕಾಶವಿದೆ. ಆನ್ಲೈನ್ ಮೂಲಕ ಸ್ವಯಂ ಗಣತಿ ಮಾಡಿಕೊಳ್ಳಲು ಈ ತಿಂಗಳ 15ರವರೆಗೆ ಕಾಲಾವಕಾಶ ನೀಡಲಾಗಿದೆ.
ಸ್ವಯಂ ಗಣತಿ ಮಾಡುವುದು ಹೇಗೆ?
ಸಾರ್ವಜನಿಕರು ಮೊದಲು ಅಧಿಕೃತ ವೆಬ್ಸೈಟ್ www.se.census.gov.in ಗೆ ಭೇಟಿ ನೀಡಬೇಕು.
ಅಲ್ಲಿ ರಾಜ್ಯವನ್ನು ಆಯ್ಕೆ ಮಾಡಿ, ಮನೆಯ ಯಜಮಾನನ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
ಮೊಬೈಲ್ಗೆ ಬರುವ ಒಟಿಪಿ (OTP) ದಾಖಲಿಸಿದ ನಂತರ ಮುಂದಿನ ಪ್ರಕ್ರಿಯೆ ಆರಂಭವಾಗುತ್ತದೆ.
ಜಿಲ್ಲೆ, ಪಿನ್ ಕೋಡ್ ಮತ್ತು ಸ್ಥಳದ ವಿವರಗಳನ್ನು ನೀಡಿದಾಗ ಜಿಪಿಎಸ್ ಆಧಾರಿತ ಮ್ಯಾಪ್ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಮನೆಯ ನಿಖರ ಸ್ಥಳವನ್ನು ಪಿನ್ ಮಾಡಬೇಕು.
ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿದ ನಂತರ ಒಂದು ಯುನಿಕ್ ಐಡಿ (Unique ID) ಸಂಖ್ಯೆ ದೊರೆಯುತ್ತದೆ. ಇದನ್ನು ಮೊಬೈಲ್ಗೆ ಸಂದೇಶದ ರೂಪದಲ್ಲಿ ಕಳುಹಿಸಲಾಗುತ್ತದೆ.








