ಮುಂಬೈ:ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ದಿಂಡೋರಿ ತಾಲೂಕಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದು ಇಡೀ ನಾಡನ್ನೇ ಕಂಬನಿ ಮಿಡಿಯುವಂತೆ ಮಾಡಿದೆ. ಶುಕ್ರವಾರ ತಡರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಆಳವಾದ ಬಾವಿಗೆ ಉರುಳಿ ಬಿದ್ದ ಪರಿಣಾಮ, ಮಕ್ಕಳು ಸೇರಿದಂತೆ ಒಂದೇ ಕುಟುಂಬದ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತಪಟ್ಟವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಖಾಸಗಿ ಶಾಲೆಯ ಸ್ನೇಹ ಸಮ್ಮೇಳನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದರು. ಈ ವೇಳೆ ದಿಂಡೋರಿ ರಸ್ತೆಯಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ನೀರು ತುಂಬಿದ್ದ ಬಾವಿಗೆ ಬಿದ್ದಿದೆ.
ಮೃತಪಟ್ಟವರಲ್ಲಿ ಏಳು ಮಂದಿ ವಿದ್ಯಾರ್ಥಿಗಳು ಮತ್ತು ಇಬ್ಬರು ಪೋಷಕರು ಸೇರಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಮೃತರನ್ನು ಇಂದೋರೆ ಗ್ರಾಮದ ದರಗುಡೆ ಕುಟುಂಬದ ಸದಸ್ಯರೆಂದು ಗುರುತಿಸಲಾಗಿದೆ.ಘಟನೆ ನಡೆದ ತಕ್ಷಣ ಸ್ಥಳೀಯರು ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಜೆಸಿಬಿ ಮತ್ತು ಕ್ರೇನ್ ಸಹಾಯದಿಂದ ಬಾವಿಯಿಂದ ಕಾರನ್ನು ಮೇಲೆತ್ತಲಾಯಿತು. ಅಷ್ಟರಲ್ಲಾಗಲೇ ಕಾರಿನಲ್ಲಿದ್ದವರೆಲ್ಲರೂ ಉಸಿರುಗಟ್ಟಿ ಸಾವನ್ನಪ್ಪಿದ್ದರು.








