ಲಾಹೋರ್: ಪಾಕಿಸ್ತಾನದ ಸ್ಟಾರ್ ವೇಗಿ ನಸೀಮ್ ಶಾ ಅವರು ರಾಜಕೀಯ ವಿವಾದವೊಂದರಲ್ಲಿ ಸಿಲುಕಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರ್ಯಮ್ ನವಾಜ್ ಅವರ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡಿದ್ದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅವರಿಗೆ ಭಾರಿ ಮೊತ್ತದ ದಂಡ ವಿಧಿಸಿದೆ. ಇದು ಪಾಕಿಸ್ತಾನ ಕ್ರಿಕೆಟ್ ಇತಿಹಾಸದಲ್ಲೇ ಆಟಗಾರನೊಬ್ಬನಿಗೆ ವಿಧಿಸಲಾದ ಅತಿದೊಡ್ಡ ದಂಡ ಎಂದು ಹೇಳಲಾಗಿದೆ.
ಇತ್ತೀಚೆಗೆ ಮರ್ಯಮ್ ನವಾಜ್ ಅವರ ರಾಜಕೀಯ ನಿರ್ಧಾರವೊಂದನ್ನು ಟೀಕಿಸಿ ನಸೀಮ್ ಶಾ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಇದು ಪಾಕಿಸ್ತಾನದ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು.
ಪಿಸಿಬಿ ತನ್ನ ಕೇಂದ್ರ ಒಪ್ಪಂದದ (Central Contract) ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಸೀಮ್ ಶಾಗೆ ಅವರ ಒಟ್ಟು ವಾರ್ಷಿಕ ಸಂಭಾವನೆಯ ಶೇ. 50ರಷ್ಟು ಅಂದರೆ ಸುಮಾರು 5 ಕೋಟಿ ಪಾಕಿಸ್ತಾನಿ ರೂಪಾಯಿ (PKR) ದಂಡ ವಿಧಿಸಿದೆ ಎಂದು ವರದಿಯಾಗಿದೆ.
ಕ್ರಿಕೆಟಿಗರು ಸಕ್ರಿಯ ಆಟಗಾರರಾಗಿದ್ದಾಗ ರಾಜಕೀಯ ವಿಷಯಗಳಲ್ಲಿ ಭಾಗಿಯಾಗಬಾರದು ಎಂಬ ನಿಯಮವನ್ನು ನಸೀಮ್ ಶಾ ಮೀರಿದ್ದಾರೆ ಎಂದು ಪಿಸಿಬಿ ಶಿಸ್ತು ಸಮಿತಿ ತಿಳಿಸಿದೆ. ದಂಡದ ಜೊತೆಗೆ ಭವಿಷ್ಯದಲ್ಲಿ ಇಂತಹ ವರ್ತನೆ ಮರುಕಳಿಸಿದರೆ ಅವರ ಕೇಂದ್ರ ಒಪ್ಪಂದವನ್ನು ರದ್ದುಗೊಳಿಸಿ, ತಂಡದಿಂದ ಅಮಾನತುಗೊಳಿಸುವುದಾಗಿ ಮಂಡಳಿಯು ಕಠಿಣ ಎಚ್ಚರಿಕೆ ನೀಡಿದೆ.








