ಬೆಂಗಳೂರು: ರಾಹುಲ್ ಗಾಂಧಿಯವರ ನಡತೆ ಈ ದೇಶಕ್ಕೆ ಸರಿಹೊಂದುವುದಿಲ್ಲ. ಆದ್ದರಿಂದ ಅವರು ತಕ್ಷಣ ರಾಜೀನಾಮೆ ನೀಡಬೇಕೆಂದು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಒತ್ತಾಯಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಹುಲ್ ಗಾಂಧಿಯವರಿಂದ ಇಡೀ ದೇಶಕ್ಕೆ ಅಪಮಾನವಾಗುತ್ತಿದೆ. ಹೊರದೇಶಗಳಲ್ಲಿ ನಮ್ಮ ದೇಶದ ನಾಯಕತ್ವವನ್ನು ಕಂಡು ಬೇರೆಯವರು ನಮ್ಮನ್ನು ಅಣಕಿಸುವ ಕೆಲಸವಾಗುತ್ತಿದೆ. ಈ ರೀತಿ ನ್ಯಾಯಾಲಯದಿಂದ ಆದೇಶ ಬಂದಿದ್ದು, ಇವರಿಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ನೀಡಿ ಹೋಗಬೇಕಿತ್ತು ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರು ದೇಶದ ಸುಭದ್ರತೆಯನ್ನು ಪ್ರಶ್ನಿಸುವ ಕಾರ್ಯ ಮಾಡುತ್ತಿದ್ದಾರೆ. ದೇಶದ ಕಾನೂನು ಎಲ್ಲಿರಿಗೂ ಒಂದೇ. ಕಾನೂನಿನಡಿಯಲ್ಲಿ ನ್ಯಾಯಾಲಯಗಳು ನೀಡುವ ತೀರ್ಪುಗಳನ್ನೇ ಕಾಂಗ್ರೆಸ್ ಪ್ರಶ್ನಿಸುವಂತದ್ದು, ಎಷ್ಟು ಸರಿ?. ಇದು ಪ್ರಜಾಪ್ರಭುತ್ವ ವಿರೋಧಿ ಅಲ್ಲವೇ; ಸಂವಿಧಾನ ವಿರೋಧಿ ಅಲ್ಲವೇ? ಎಂದು ಕೇಳಿದರು. ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರ ಬಗ್ಗೆ ಪುಂಖಾನುಪುಂಖ ಭಾಷಣ ಮಾಡುತ್ತೀರಿ. ಅವರು ನೀಡಿರುವ ಸಂವಿಧಾನಕ್ಕೆ ಗೌರವ ಕೊಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆಯೇ ಎಂದು ಪ್ರಶ್ನಿಸಿದರು.
ದೇಶದ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರು ಮಾಡುತ್ತಿರುವ ಕೆಲಸವೇನು; ಅವರ ಅಪ್ಪರ್ ಚೇಂಬರ್ ಸರಿ ಇದೆಯೇ ಎಂದು ಒಂದು ಬಾರಿ ಪ್ರಶ್ನಿಸಿಕೊಳ್ಳಬೇಕು. ರಾಹುಲ್ ಗಾಂಧಿ ಅವರ ಹುಚ್ಚುತನಕ್ಕೆ ಅವರನ್ನು ಓಲೈಸುವ ನಾಯಕತ್ವ ಕಾಂಗ್ರೆಸ್ಸಿನಲ್ಲಿ ಉಳಿದಿದೆ ಎಂದು ಹೇಳಿದರು.
ಡಬಲ್ ಸ್ಟ್ಯಾಂಡರ್ಡ್ ರಾಜಕೀಯ…
ಕಾಂಗ್ರೆಸ್ಸಿನ ಅನಿಸಿಕೆಗೆ ಪರವಾಗಿ ನ್ಯಾಯಾಲಯಗಳಲ್ಲಿ ಆದೇಶ ಬಂದರೆ ಪ್ರಜಾಪ್ರಭುತ್ವಕ್ಕೆ ಶಕ್ತಿ ಬಂದಂತೆ; ನ್ಯಾಯಾಂಗವನ್ನು ಎತ್ತಿ ಹಿಡಿದಂತೆ ಎಂದು ಹೇಳುತ್ತಾರೆ. ಆದೇಶ ಇವರ ಮನಸ್ಥಿತಿಗೆ ವಿರುದ್ಧವಾಗಿ ಬಂದರೆ ಪ್ರಜಾಪ್ರಭುತ್ವ ಹಾಳಾದಂತೆ; ಸಂವಿಧಾನ ನಾಶÀವಾದಂತೆ ಎಂದು ಹೇಳುತ್ತಾರೆ. ಇಂತಹ ಡಬಲ್ ಸ್ಟ್ಯಾಂಡರ್ಡ್ ರಾಜಕೀಯ ಕಾಂಗ್ರೆಸ್ಸಿನವರು ಮಾತ್ರ ಮಾಡುವುದಕ್ಕೆ ಸಾಧ್ಯ; ಬೇರೆ ಯಾರೂ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಟೀಕಿಸಿದರು.
ರಾಹುಲ್ ಗಾಂಧಿಯವರನ್ನು ಬೆಂಬಲಿಸಿ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರು ನ್ಯಾಯಾಲಯಗಳನ್ನು ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದಾರೆ. ಕೇಸರಿ ಭಯೋತ್ಪಾಧನೆ ಪ್ರಕರಣದ ವಿಚಾರಕ್ಕೆ ನ್ಯಾಯಾಲಯದ ಆದೇಶದಲ್ಲಿ ವಿಶ್ವಾಸಾರ್ಹ ಹಾಗೂ ಬಲವಾದ ಪುರಾವೆಗಳಿಲ್ಲವೆಂದು ಪ್ರಕಣವನ್ನು ಖುಲಾಸೆ ಮಾಡಿದೆ. ಈ ಆದೇಶವನ್ನು ಪ್ರಿಯಾಂಕ ಖರ್ಗೆ ಅವರು ವಿರೋಧಿಸಿದ್ದಾರೆ. ಅಂದ ಮೇಲೆ ನ್ಯಾಯಾಂಗದ ವಿಚಾರದಲ್ಲಿ ಗೌರವವಿಲ್ಲ, ಸಂವಿಧಾನದ ಬಗ್ಗೆ ಗೌರವವಿಲ್ಲದೆ ನಮಗೆ ಪಾಠವನ್ನು ಹೇಳುತ್ತಾರೆ ಎಂದು ತಿಳಿಸಿದರು. ಆದ್ದರಿಂದ ಬಿ.ಕೆ ಹರಿಪ್ರಸಾದ್ ಮತ್ತು ಪ್ರಿಯಾಂಕ ಖರ್ಗೆ ಅವರು ದೇಶದ ಜನರ ಮುಂದೆ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಇವರು ನಾಯಕರಾಗಿ ಮುಂದುವರೆಯುವುದಕ್ಕೆ ಯೋಗ್ಯರಲ್ಲ ಎಂದು ತಿಳಿಸಿದರು.
ನ್ಯಾಯಾಲಯವು, ನೀವು ಈ ದೇಶದ ಪ್ರಜೆಯಾಗಿದ್ದರೆ ಇಂತಹ ಮಾತನ್ನು ಕೇಳುವುದು ಸರಿ ಇದೆಯೇ ಎಂದು ಪ್ರಶ್ನಿಸಿರುವುದು ಏಕೆ; ಈ ದೇಶದ ಚಟುವಟಿಕೆ ಸರ್ಕಾರಗಳಿಗೆ ಗೊತ್ತಿಲ್ಲದೆ ಇರುವುದು ರಾಹುಲ್ ಗಾಂಧಿಗೆ ತಿಳಿದಿದೆಯೇ ಎಂದು ಪ್ರಶ್ನಿಸಿದರು. ಚೀನಾವು ಈಗಾಗಲೇ 20,000 ಕಿ.ಲೋ ಮೀಟರ್ ಜಾಗವನ್ನು ಹೊಡೆದುಕೊಂಡಿದೆ. ಸರ್ಕಾರಕ್ಕೆ ಗೊತ್ತಿಲ್ಲ ಎಂದು ನಿಮಗೆ ಯಾರು ಹೇಳಿದರು ಎಂದು ಪ್ರಶ್ನಿಸಿದರು. ಅಲ್ಲಿನ ಪ್ರಧಾನಮಂತ್ರಿಗಳು ನಿಮಗೆ ತಿಳಿಸಿದ್ದಾರೆಯೇ; ಸುಳ್ಳುಗಳನ್ನು ಏಕೆ ಹಬ್ಬಿಸುತ್ತಿದ್ದೀರಿ. ಈ ದೇಶ ಒಡೆಯುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಮಾಡುತ್ತಾ ಬಂದಿದೆ. ಇದೇ ಕಾಂಗ್ರೆಸ್‍ನ ಪರಂಪರೆಯಾಗಿದೆ ಎಂದು ಟೀಕಿಸಿದರು.
ಮತಗಳ್ಳತ ಸಾಬೀತಾಗಿದೆ ಎಂಬ ನ್ಯಾಯಾಲಯದ ಆದೇಶವನ್ನೇ ಧಿಕ್ಕರಿಸಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಪರಂಪರೆ ಕಾಂಗ್ರೆಸ್ಸಿನದು. ಇಂದು ಅದೇ ರೀತಿಯ ಸುಳ್ಳುಗಳನ್ನು ಹೇಳಿಕೊಂಡು ಒಂದು ರೀತಿಯ ನಕಾರಾತ್ಮಕ ರಾಜಕೀಯ ಮಾಡಿ ಜನರನ್ನು ದಾರಿ ತಪ್ಪಿಸಿ ದೇಶಕ್ಕೆ ಕೆಟ್ಟು ಹೆಸರನ್ನು ತರುವಂತಹ ಕೆಲಸವನ್ನು ರಾಹುಲ್ ಗಾಂಧಿ ಅವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ…
ಸಾರಿಗೆ ನೌಕರರ ಬೇಡಿಕೆಯನ್ನು ಈಡೇರಿಸಿದರೆ ಮುಂದೆ ಸಮಸ್ಯೆ ಇರುವುದಿಲ್ಲ. ಕಾಂಗ್ರೆಸ್ ಸರ್ಕಾರವು, ವಾಸ್ತವವನ್ನು ಅರ್ಥ ಮಾಡಿಕೊಳ್ಳದೆ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಇಂತಹವುಗಳನ್ನು ಬಿಜೆಪಿ ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.
ಸಾರಿಗೆ ನೌಕರರ ಹಕ್ಕುಗಳಿಗಾಗಿ ಅವರು ಹೋರಾಟ ಮಾಡುತ್ತಿದ್ದಾರೆ. ಎಸ್ಮಾ ಜಾರಿ ಮಾಡುತ್ತೇವೆ, ಕೆಲಸದಿಂದ ತೆಗೆಯುತ್ತೇವೆ ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ತಪ್ಪಿರುವುದು ಸರ್ಕಾರದಲ್ಲಿ; ಕಾರ್ಮಿಕರಲ್ಲಲ್ಲ. ಕಾಂಗ್ರೆಸ್ ಸರ್ಕಾರ ನೆಪ ಹೇಳಿ ಬೇರೆಯವರ ಮೇಲೆ ತಮ್ಮ ತಪ್ಪುಗಳನ್ನು ಹೊರಿಸುವುದಕ್ಕೆ ಆರಂಭಿಸಿದ್ದಾರೆ ಎಂದು ಆರೋಪಿಸಿದರು. ಸಾರಿಗೆ ನೌಕರರು 38 ತಿಂಗಳ ವೇತನದ ಹಿಂಬಾಕಿಯನ್ನು ಕೇಳುತ್ತಿದ್ದಾರೆ. ಅದನ್ನು ನೀಡದೆ ಸರ್ಕಾರ ನೌಕರರ ಮೇಲೆ ಗೂಂಡಾ ವರ್ತನೆ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಆಕ್ಷೇಪಿಸಿದರು.
ಬಿಜೆಪಿ ಸರ್ಕಾರದ ತೀರ್ಮಾನಗಳನ್ನು ಮುಂದೆ ಬರುವ ಸರ್ಕಾರಗಳು ಮುಂದುವರೆಸಬೇಕೇ ಅಥವಾ ಅಲ್ಲಿಗೆ ಕೈಬಿಡಬೇಕೆ ಎಂದು ಪ್ರಶ್ನಿಸಿದರು. ಇಂದು ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ, ನಾಳೆ ಮತ್ತೊಂದು ಸರ್ಕಾರ ಬಂದಾಗ ಅವರ ತೀರ್ಮಾನಗಳನ್ನು ವಿರೋಧ ಮಾಡುವುದಕ್ಕೆ ಸರ್ಕಾರ ಬರಬೇಕೆ; ಕಾಂಗ್ರೆಸ್ ಸರ್ಕಾರ ಈ ಕೆಟ್ಟ ಪರಂಪರೆಯನ್ನು ಮಾಡುತ್ತಿದೆ ಎಂದು ಆರೋಪಿಸಿದರು.
ಒಳ ಮೀಸಲಾತಿಯ ಕುರಿತ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮೈಸೂರಿನ ಮಹಾರಾಜರು ಹಿಂದಿನ ಕಾಲಾವಧಿಯಲ್ಲಿ ಯಾರು ಕರ್ನಾಟಕದ ಪಕ್ಕ ಇರುತ್ತಾರೆ ಮತ್ತು ಯಾರು ವಲಸೆ ಬಂದಿದ್ದಾರೆ ಎನ್ನುವುದನ್ನು ಗುರುತಿಸುವುದಕ್ಕೆ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಇವುಗಳು ಜಾತಿಗಳಲ್ಲಿ ಜಾತಿ ಸೂಚಕಗಳನ್ನಾಗಿ ಮಾಡಲು ಬಳಸಿದ ಪದ ಪ್ರಯೋಗಗಳು ಎಂದು ತಿಳಿಸಿದರು.
ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಇವುಗಳು ಜಾತಿಗಳಾಗಿರಲಿಲ್ಲ. ಆದರೆ ಇತ್ತೀಚೆಗೆ ಬಹಳ ಸಂಘಟನೆಗಳು ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಇವುಗಳನ್ನು ಗುರುತಿಸಬಾರದು; ಅದನ್ನು ತೆಗೆಯಬೇಕು ಎಂದು ಮನವಿ ಮಾಡಿದ್ದರು ಹಾಗೂ ಆ ಜನಾಂಗಳನ್ನು ಕೂಡ ಮೂಲ ಜಾತಿಗಳಲ್ಲಿ ಸೇರ್ಪಡೆ ಮಾಡಬೇಕು ಎಂದು ಬೇಡಿಕೆಯನ್ನು ಇಟ್ಟಿದ್ದರು. ಆದರೆ ಆಯೋಗದ ವರದಿಯಲ್ಲಿ ಏನು ಇದೆ ಎಂಬುದು ಯಾರಿಗೂ ತಿಳಿದಿಲ್ಲ. ಆಯೋಗದ ವರದಿಯನ್ನು ಸರ್ಕಾರ ತೆಗೆದುಕೊಂಡಿದೆ. ವರದಿಯ ಸಾಧಕ ಬಾಧಕಗಳನ್ನು ನೋಡಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಸಾಗರದ ಆಸ್ಪತ್ರೆಯ ಜನರೇಟ್ ಕದ್ದವರ ವಿರುದ್ಧ ಸೂಕ್ತ ಕ್ರಮಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಖಡಕ್ ಸೂಚನೆ
‘POP ಗಣೇಶ ಮೂರ್ತಿ’ ತಯಾರಿಸುವವರ ಮೇಲೆ ಕೇಸ್: ಬಿಬಿಎಂಪಿ ಮುಖ್ಯ ಆಯುಕ್ತರ ವಾರ್ನಿಂಗ್
Watch Video: ಉತ್ತರಾಖಂಡ್ ಮೇಘಸ್ಫೋಟ: ಅವಶೇಷಗಳಿಂದ ತೆವಳುತ್ತಾ ಹೊರಬಂತ ವ್ಯಕ್ತಿ, ಮನ ಕಲಕುವ ವಿಡಿಯೋ ಇಲ್ಲಿದೆ