ಬೆಂಗಳೂರು: ಕೊಪ್ಪಳದ ಹಿಂದೂ ಕಾರ್ಯಕರ್ತ ಗವಿಸಿದ್ದಪ್ಪ ನಾಯಕ ಹತ್ಯೆಯನ್ನು ಖಂಡಿಸಿ ಬೃಹತ್ ಹೋರಾಟ ಕೈಗೊಳ್ಳುತ್ತೇವೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಕಾರ್ಯಕರ್ತರ ಹತ್ಯೆಗಳನ್ನು ಮುಚ್ಚಿಹಾಕುವ ಕೆಲಸ ನಡೆಯುತ್ತಿದೆ. ಸರ್ಕಾರವು ಮತಬ್ಯಾಂಕಿಗಾಗಿ ಮಾಡುತ್ತಿರುವ ಓಲೈಕೆಗಳು ರಾಜ್ಯದ ಜನರ ಪ್ರಾಣಗಳನ್ನು ತೆಗೆದುಕೊಳ್ಳುತ್ತಿವೆ. ಈ ಹಿನ್ನಲೆಯಲ್ಲಿ ರಾಜ್ಯದ ಪ್ರತಿಯೊಬ್ಬರು ಸರ್ಕಾರವನ್ನು ಪ್ರಶ್ನಿಸಬೇಕು. ಆದಕಾರಣ ಕೊಪ್ಪಳದಲ್ಲಿ ಶೀಘ್ರದಲ್ಲೇ ಮಾಜಿ ಸಚಿವ ಬಿ. ಶ್ರೀರಾಮುಲು ಅವರ ನೇತೃತ್ವದಲ್ಲಿ ದೊಡ್ಡ ಪ್ರಮಾಣದ ಹೋರಾಟ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಇನ್ನೂ ಎಷ್ಟು ಹಿಂದೂ ಕಾರ್ಯಕರ್ತರ ಕೊಲೆಗಳು ಆಗಬೇಕಾಗಿದೆ?; ಓಲೈಕೆ ರಾಜಕಾರಣ ಈ ರಾಜ್ಯವನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದೆ? ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಮತ್ತು ಹದಗೆಟ್ಟಿದೆ ಎಂದು ಹೇಳಿ ಬಹುಕಾಲ ಪ್ರಸ್ತಾಪವನ್ನು ಮಾಡುತ್ತಲೇ ಇದ್ದೇವೆ. ಆದರೂ ಕೂಡ ಸಿದ್ದರಾಮಯ್ಯನವರ ಎಮ್ಮೆ ಚರ್ಮದ ಸರ್ಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ ಎಂದು ಟೀಕಿಸಿದರು.
ಆಗಸ್ಟ್ 3 ರಂದು ಕೊಪ್ಪಳದಲ್ಲಿ ಸಂಜೆ 7.30 ಕ್ಕೆ ಪರಿಶಿಷ್ಟ ವರ್ಗಕ್ಕೆ ಸೇರಿದ ಗವಿಸಿದ್ದಪ್ಪ ನಾಯಕ ಎಂಬ ಹಿಂದೂ ಕಾರ್ಯಕರ್ತನನ್ನು ಸಾದಿಕ್ ಎಂಬ ಮುಸ್ಲಿಂ ಹುಡುಗ ಆತನ ಸಹಚರರು ಸೇರಿ ಮಸೀದಿಯ ಮುಂಭಾಗದಲ್ಲಿ ಹತ್ಯೆ ಮಾಡಿದ್ದಾರೆ. ಇದಕ್ಕೆ ಕಾರಣ ಏನು ಎಂದರೆ ಗವಿಸಿದ್ದಪ್ಪ ನಾಯಕ ಅಪ್ರಾಪ್ತ ವಯಸ್ಸಿನ ಮುಸ್ಲಿಂ ಹುಡುಗಿಯೊಬ್ಬಳನ್ನು ಪ್ರೀತಿ ಮಾಡಿ ಮನೆ ಬಿಟ್ಟು ಹೋಗಿದ್ದರು. ಆ ಹುಡುಗಿ ಅಪ್ರಾಪ್ತ ವಯಸ್ಕಳಾದ ಕಾರಣ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಇತ್ಯರ್ಥಪಡಿಸಿ ಕಳುಹಿಸಿದ್ದರು ಎಂದು ತಿಳಿಸಿದರು.
ನೆಪ ಹೇಳಿ ಪ್ರವಾಸ ರದ್ದುಪಡಿಸಿದ ಸಿಎಂ…
ಹಿಂದೂ ಕಾರ್ಯಕರ್ತರ ಹತ್ಯೆಗಳು ಬಹಳಷ್ಟು ಹೆಚ್ಚಾಗಿ ಕರಾವಳಿ ಭಾಗದಲ್ಲಿ ನಡೆಯುತಿತ್ತು. ಇಂದು ಬೀದರ್ ನಿಂದ ಶುರುವಾಗಿ ಅದು ಬೆಂಗಳೂರಿನವರೆಗೂ ವ್ಯಾಪಿಸಿಕೊಳ್ಳುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ಗವಿಸಿದ್ದಪ್ಪ ಹತ್ಯೆ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಪೊಲೀಸ್ ಇಲಾಖೆಯನ್ನು ಎಚ್ಚರಿಸುತ್ತಾರೆ. ಶಿಸ್ತಿನ ರೀತಿಯಲ್ಲಿ ಕ್ರಮ ಜರುಗಿಸುತ್ತಾರೆ ಎಂದು ನಾವು ತಿಳಿದುಕೊಂಡಿದ್ದೆವು. ಹತ್ಯೆ ಬಗ್ಗೆ ಜನರು ಪ್ರಶ್ನಿಸಿದಾಗ ಉತ್ತರವನ್ನು ನೀಡಲಾಗದೆ ಹವಾಮಾನ ಸರಿಯಿಲ್ಲ ಎಂದು ನೆಪ ಹೇಳಿ ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಪ್ರವಾಸಕ್ಕೆ ರದ್ದುಪಡಿಸಿದ್ದಾರೆ. ಈ ರೀತಿ ಪ್ರಕರಣಗಳು ಬಂದಾಗ ತಪ್ಪಿಸಿಕೊಂಡು ಪಲಾಯನ ಮಾಡುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಬಾರದು ಮೃತ ಕುಟುಂಬಕ್ಕೆ ರಕ್ಷಣೆ ಕೊಡಬೇಕು ಮತ್ತು ಆ ದಲಿತ ಕುಟುಂಬಕ್ಕೆ ನ್ಯಾಯ ಒದಗಿಸಲು ಅವರು ಆಗ್ರಹಿಸಿದರು.
ಸಾದಿಕ್ ಎಂಬುವವನು ಗ್ಯಾಂಗ್ ಕಟ್ಟಿಕೊಂಡು ಗವಿಸಿದ್ದಪ್ಪನನ್ನು ಮುಗಿಸುತ್ತೇನೆ ಎಂದು ಹೇಳಿಕೆ ನೀಡಿದ್ದು, ನಂತರ ಆಗಸ್ಟ್ 3 ರಂದು ಗವಿಸಿದ್ದಪ್ಪರನ್ನು ಕರೆಸಿ ಮಾತಿನ ಚಟುವಟಿಕೆಯಾಗಿ ನಡೆದು, ಕೊಪ್ಪಳ ಪಟ್ಟಣದ ಮಸೀದಿಯ ಮುಂಭಾಗದಲ್ಲಿ ತೆರಳುವಾಗ ಸಾದಿಕ್ ಮತ್ತು ಆತನ ಸಹಚರರು ತಲವಾರುಗಳಿಂದ ಹತ್ಯೆ ಮಾಡಿದ್ದಾರೆ ಎಂದು ವರದಿಸಿ ಸಲ್ಲಿಸಿದ್ದಾರೆ ಎಂದು ವಿವರಿಸಿದರು.
ಹತ್ಯೆಯಾದ ಸ್ಥಳದಲ್ಲಿ ಅಜಾನ್ ಕೂಗುವ ವಿಡಿಯೋ ಚಿತ್ರಣವನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದರು. ಸಾದಿಕ್ ಎಂಬಾತ ನಿಷೇಧಿತ ಪಿಎಫ್‍ಐನ ಸದಸ್ಯನಾಗಿರುವುದು ಕೂಡ ತಿಳಿದುಬಂದಿದೆ. ಇದು ಒಂದು ರೀತಿ ಸುಹಾಸ್ ಶೆಟ್ಟಿ ಕೊಲೆ ತರಹದ ಹತ್ಯೆ. ಹತ್ಯೆಯಾದ ಒಂದು ದಿನದ ಮುಂಚೆ ಸಾದಿಕ್ ತಲವಾರು ಹಿಡಿದಿರುವುದು, ಬೈಕ್ ವ್ಹೀಲಿಂಗ್ ಮಾಡಿರುವುದು ಮತ್ತು ಡ್ರಗ್ಸ್ ಸೇವಿಸಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾನೆ. ಆದರೆ, ಪೊಲೀಸ್ ಅಧಿಕಾರಿಗಳು ಇದೆಲ್ಲವನ್ನೂ ಗಮನಿಸಲಿಲ್ಲವೇ ಎಂದು ಪ್ರಶ್ನಿಸಿದರು.
ಗವಿಸಿದ್ದಪ್ಪ ಹತ್ಯೆಯ ನಂತರ ಪೊಲೀಸ್ ಅಧಿಕಾರಿಗಳು ಎಫ್‍ಐಆರ್ ಹಾಕಿರಲಿಲ್ಲ. ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನಗಳು ನಡೆಯುತ್ತಿದ್ದವು. ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಮತ್ತು ಅವರ ಜನಾಂಗದವರು ಹತ್ಯೆಯಾದ ವ್ಯಕ್ತಿಯ ಮನೆಗೆ ಹೋಗಿ ಬಂದ ನಂತರ ಮುಸ್ಲಿಂ ಧರ್ಮದ ಹುಡುಗರು ಒಬ್ಬ ಮಾಜಿ ಸಚಿವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್‍ಗಳನ್ನು ಹಾಕಿ ನಿಂದಿಸಿದ್ದಾರೆ. ಇದನ್ನು ಬಳಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ ಎಂದು ಆರೋಪಿಸಿದರು.
ಇದನ್ನೆಲ್ಲಾ ನೋಡಿರುವ ಪೊಲೀಸ್ ಅಧಿಕಾರಿಗಳು ಮಾಜಿ ಸಚಿವರ ನಿಂದಿಸಿರುವ ಕಾಮೆಂಟ್‍ಗಳನ್ನು ಗಮನಿಸದೆ ಕತ್ತೆ ಕಾಯುತ್ತಿದ್ದರೆ ಎಂದು ಪ್ರಶ್ನಿಸಿದರು.
ಜನರು ಮತ್ತು ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದರೆ ಪೊಲೀಸ್ ಇಲಾಖೆಯೇ ಒಂದು ಹೊಸ ವ್ಯವಸ್ಥೆಯನ್ನು ಮಾಡಿದೆ; ಧ್ವನಿ ಎತ್ತುವವರ ವಿರುದ್ಧ ಹತ್ಯೆ ಆರೋಪ ಕೇಸುಗಳನ್ನು ಹಾಕುತ್ತಾರೆ. ಆದರೆ, ಮಾಜಿ ಸಚಿವರನ್ನು ನಿಂದಿಸಿರುವುದು ಪೊಲೀಸ್ ಇಲಾಖೆಯ ಕಣ್ಣಿಗೆ ಕಾಣುವುದಿಲ್ಲವೇ ಎಂದು ಆಕ್ಷೇಪಿಸಿದರು.
ಫರೀದ್ ಮಲೆಕೊಪ್ಪ, “ಬಳ್ಳಾರಿ ಸಾಕಿದ ನಾಯಿ ಕೊಪ್ಪಳಕ್ಕೆ ಬಂದು ಬೊಗಳಿತು” ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು. ಅಂದರೆ ಈ ರೀತಿ ಹತ್ಯೆ ಮಾಡಿದರು ಯಾರೂ ಪ್ರಶ್ನಿಸಬಾರದು ಎಂಬ ಮನಸ್ಥಿತಿ ಇರುವವನನ್ನು ಪೊಲೀಸ್ ಅಧಿಕಾರಿಗಳು ಬಂಧಿಸಬೇಕು ಅಲ್ಲವೇ ಎಂದು ಕೇಳಿದರು.
6 ಜನ ಈ ಹತ್ಯೆ ಮಾಡಿದ್ದು, ಪೊಲೀಸ್ ಅಧಿಕಾರಿಗಳು 4 ಜನರನ್ನು ಬಂಧಿಸಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ಇದಕ್ಕೆಲ್ಲ ಕಾರಣಳಾದ ಮುಸ್ಲಿಂ ಹುಡುಗಿಯನ್ನು ಏಕೆ ಪೊಲೀಸ್ ಅಧಿಕಾರಿಗಳು ಬಂಧಿಸಿಲ್ಲ ಎಂದು ಪ್ರಶ್ನಿಸಿದರು. ಈ ಪ್ರಕರಣದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಏನನ್ನೂ ಮಾತನಾಡಿರುವುದಿಲ್ಲ ಹಾಗೂ ಹತ್ಯೆಯಾದ ಹಿಂದೂ ಹುಡುಗನ ಮನೆಗೆ ಭೇಟಿ ನೀಡಿಲ್ಲ ಎಂದು ಆಕ್ಷೇಪಿಸಿದರು.
ಅಲ್ಲಿನ ಶಾಸಕರು ಹತ್ಯೆಮಾಡಿದ ಎಲ್ಲರನ್ನು ರಕ್ಷಿಸುತ್ತಿದ್ದಾರೆ ಎಂದು ವರದಿಗಳು ಇದ್ದು, ಪೊಲೀಸ್ ಅಧಿಕಾರಿಗಳು ಸತ್ತಾಗ ಮಾತ್ರ ಸ್ಥಳ ಪರಿಶೀಲನೆ ಮಾಡಿದ್ದಾರೆ. ತನಿಖೆಯನ್ನು ಸರಿಯಾದ ರೀತಿ ನಡೆಸಿಲ್ಲ ಎಂದು ಆರೋಪಿಸಿದರು. ಪೊಲೀಸ್ ಅಧಿಕಾರಿಗಳು ಮಾಧ್ಯಮಗೋಷ್ಠಿಯಲ್ಲಿ ಒಬ್ಬನೇ ಒಬ್ಬ ಭಾಗಿಯಾಗಿದ್ದಾನೆ ಎಂದು ತಿಳಿಸಿದ್ದಾರೆ. ಹಾಗಿದ್ದಲ್ಲಿ 4 ಜನರನ್ನು ಯಾವ ಕಾರಣಕ್ಕೆ ಬಂಧಿಸಿದ್ದೀರಿ ಎಂದು ಪ್ರಶ್ನಿಸಿದರು.
ಸುಹಾಸ್ ಶೆಟ್ಟಿ ಹತ್ಯೆಯನ್ನೂ ಮುಚ್ಚಿ ಹಾಕುವ ಕೆಲಸವಾಗಿತ್ತು. ಯಾರು ಹತ್ಯೆಯನ್ನು ಮಾಡಿದ್ದರೋ ಅವರಿಗೆ ಶಿಕ್ಷೆಯನ್ನು ಕೊಡುವುದು ಬಿಟ್ಟು ಬಿಜೆಪಿ ಕಾರ್ಯಕರ್ತರು, ಆರ್‍ಎಸ್‍ಎಸ್ ಕಾರ್ಯಕರ್ತರು ಹಾಗೂ ಬಜರಂಗದಳ ಕಾರ್ಯಕರ್ತರ ಮನೆಗೆ ರಾತ್ರಿ ವೇಳೆ ಹೋಗಿ ಅವರನ್ನು ಹೆದರಿಸುವ ಕೆಲಸ ಶುರುವಾಗಿತ್ತು. ಆ ಕಾರಣ ಈ ಪ್ರಕರಣವನ್ನು ಎನ್‍ಐಎಗೆ ನೀಡಲಾಗಿದೆ. ನಂತರ ಸತ್ಯಾಂಶ ಹೊರಗಡೆ ಬಂದಿದೆ. ಇದೇ ರೀತಿ ಹಿಂದೂ ಕಾರ್ಯಕರ್ತರ ಹತ್ಯೆ ಉತ್ತರ ಕರ್ನಾಟಕಕ್ಕೆ ಹೋಗಬಾರದು ಎಂದರೆ ಸರ್ಕಾರ ಸ್ವಯಂಪ್ರೇರಣೆಯಿಂದ ಗವಿಸಿದ್ದಪ್ಪ ಹತ್ಯೆ ಪ್ರಕರಣವನ್ನು ಎನ್‍ಐಎಗೆ ವಹಿಸುವಂತೆ ಅವರು ಒತ್ತಾಯಿಸಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಎಸ್.ಟಿ. ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು, ರಾಜ್ಯ ವಕ್ತಾರ ಹೆಚ್.ಎನ್. ಚಂದ್ರಶೇಖರ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ರುದ್ರಪ್ಪ ಅವರು ಉಪಸ್ಥಿತರಿದ್ದರು.
ಧರ್ಮಸ್ಥಳದಲ್ಲಿ ಪತ್ರಕರ್ತರ ಮೇಲಿನ ಹಲ್ಲೆಗೆ ಸಿಪಿಐ(ಎಂ) ಕಾರ್ಯದರ್ಶಿ ಡಾ.ಕೆ.ಪ್ರಕಾಶ್ ಖಂಡನೆ
SHOCKING : ಅಂತರ್ಜಾತಿ ವಿವಾಹವಾಗಿದ್ದಕ್ಕೆ ಮಗಳ ಮುಂದೆಯೇ ಅಳಿಯನನ್ನ ಗುಂಡಿಕ್ಕಿ ಕೊಂದ ಮಾವ!