ಮುಂಬೈ : ಸೌದಿ ಅರೇಬಿಯಾದ ಜಿದ್ದಾದಲ್ಲಿ ಭಾನುವಾರ ಮತ್ತು ಸೋಮವಾರ ನಡೆದ ಐಪಿಎಲ್ 18ನೇ ಆವೃತ್ತಿಯ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಬಲಿಷ್ಠ ತಂಡವನ್ನು ಆಯ್ಕೆ ಮಾಡಿದ ವಿಶ್ವಾಸ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ್ದಾಗಿದೆ. ಮೊದಲೇ ಐವರು ಪ್ರಮುಖ ಆಟಗಾರರನ್ನು ರಿಟೇನ್ ಮಾಡಿಕೊಂಡಿದ್ದ ಮುಂಬೈ ಇಂಡಿಯನ್ಸ್ ತಂಡ ಹರಾಜಿನಲ್ಲೂ ತನಗೆ ಬೇಕಾದ ಎಲ್ಲ ಆಟಗಾರರನ್ನು ಆರಿಸಿದ ಸಂತಸವನ್ನು ಹೊಂದಿದೆ.
‘ಹರಾಜಿನಲ್ಲಿ ನಾವು ಆಯ್ದುಕೊಂಡ ಆಟಗಾರರ ಬಗ್ಗೆ ತುಂಬಾ ಸಂತೋಷವಿದೆ. ಏಕೆಂದರೆ ನಾವು ಈಗ ನಮ್ಮ 12 ಬಲಿಷ್ಠ ಆಟಗಾರರನ್ನು ಲಾಕ್ ಮಾಡಿಕೊಂಡಿದ್ದೇವೆ. ಟಿ20 ಸ್ವರೂಪಕ್ಕೆ ಹೊಂದಿಕೊಳ್ಳುವಂಥ ಆಟಗಾರರನ್ನು ನಾವು ಖರೀದಿಸಲು ಬಯಸಿದ್ದೆವು. ನಾವು ಹರಾಜಿನಲ್ಲಿ ಪಡೆದುಕೊಂಡಿರುವ ಎಲ್ಲಾ ಆಟಗಾರರ ಬಗ್ಗೆ ಖುಷಿ ಇದೆ. ಮುಂಬೈ ಇಂಡಿಯನ್ಸ್‌ನ ಹಲವು ಮಾಜಿ ಆಟಗಾರರನ್ನು ಕಳೆದುಕೊಂಡಿದ್ದಕ್ಕೆ ಸಹಜವಾಗಿಯೇ ನಿರಾಸೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ನಾವು ನಿಜವಾಗಿಯೂ ಗೆಲುವಿನ ಹಾದಿಗೆ ಮರಳಬೇಕಾದ ಸಮತೋಲನ ಏನು ಎಂಬುದರ ಕುರಿತು ಸಾಕಷ್ಟು ಯೋಚಿಸಿದ್ದೇವೆ ಮತ್ತ ಆಟಗಾರರನ್ನು ಖರೀದಿಸುವ ಭಾವನಾತ್ಮಕ ಅಂಶ ಮತ್ತು ಟಿ20 ಆಟದಲ್ಲಿ ಅಗತ್ಯವಿರುವ ಕೌಶಲ್ಯಗಳನ್ನು ಸಮತೋಲನಗೊಳಿಸಬೇಕೆಂದು ಅರಿತಿದ್ದೇವೆ. ನಮಗೆ ಸಾಕಷ್ಟು ಯಶಸ್ಸನ್ನು ನೀಡಿದ ಹಲವಾರು ಮಾಜಿ ಎಂಐ ಆಟಗಾರರನ್ನು ಕಳೆದುಕೊಂಡ ಬಗ್ಗೆ ತುಂಬಾ ಬೇಸರವಾಗಿದೆ. ಅವರ ಹೊಸ ಫ್ರಾಂಚೈಸಿಗಳಲ್ಲಿ ಎಲ್ಲರಿಗೂ ಶುಭವಾಗಲಿ ಮತ್ತು ಎಂಐ ತಂಡದಲ್ಲಿ ಅವರು ಸಾಧಿಸಿದ ಸಾಧನೆಗಳ ಬಗ್ಗೆ ಸಂತೋಷವಿದೆ’ ಎಂದು ಮುಂಬೈ ಇಂಡಿಯನ್ಸ್ ಮಾಲೀಕ ಶ್ರೀ ಆಕಾಶ್ ಅಂಬಾನಿ ಅವರು ಐಪಿಎಲ್ ಹರಾಜು ಪ್ರಕ್ರಿಯೆಯ ಬಳಿಕ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ ಹರಾಜಿಗೆ ಮುನ್ನ ನಾಯಕ ಹಾರ್ದಿಕ್ ಪಾಂಡ್ಯ, ಮಾಜಿ ನಾಯಕ ರೋಹಿತ್ ಶರ್ಮ, ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್, ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ತಿಲಕ್ ವರ್ಮ ಅವರನ್ನು ರಿಟೇನ್ ಮಾಡಿಕೊಂಡಿತ್ತು.
ಬೌಲ್ಟ್-ಬುಮ್ರಾ ಜೋಡಿಯಾಗುವುದನ್ನು ಬಯಸಿದ್ದೆವು: ‘ಟ್ರೆಂಟ್ ಬೌಲ್ಟ್ ಮತ್ತು ಜಸ್ಪ್ರೀತ್ ಬುಮ್ರಾ ಜೊತೆಯಾಗುವುದನ್ನು ನಾವು ನಿಜವಾಗಿಯೂ ಬಯಸಿದ್ದೆವು. ಎಡಗೈ ವೇಗಿ ಬೌಲ್ಟ್ ಅವರು ಬುಮ್ರಾಗೆ ಉತ್ತಮ ಜತೆಗಾರರಾಗುವರು. ಈ ಜೋಡಿ ತಂಡಕ್ಕೆ ಸಾಕಷ್ಟು ಬಲ ತುಂಬಲಿದೆ. ಓರ್ವ ವ್ಯಕ್ತಿ ಮತ್ತು ಕೌಶಲದಿಂದಾಗಿ ಬೌಲ್ಟ್ ಅವರನ್ನು ಮರಳಿ ಪಡೆದುಕೊಂಡಿರುವುದು ತುಂಬ ಸಂತೋಷ ತಂದಿದೆ’ ಎಂದು ಆಕಾಶ್ ಅಂಬಾನಿ ಅವರು ತಿಳಿಸಿದ್ದಾರೆ.
ಘಜನ್ಫರ್, ರಿಕೆಲ್ಟನ್ ಬಲ ತುಂಬವರು: ಅಫ್ಘಾನಿಸ್ತಾನದ ಯುವ ಸ್ಪಿನ್ನರ್ ಅಲ್ಲಾ ಘಜನ್ಫರ್ ಆಯ್ಕೆಯ ಬಗ್ಗೆಯೂ ಆಕಾಶ್ ಅಂಬಾನಿ ಸಂತಸ ವ್ಯಕ್ತಪಡಿಸಿದ್ದಾರೆ. ‘ವಿದೇಶಿ ಸ್ಪಿನ್ನರ್ ಆಯ್ಕೆಯ ಬಗ್ಗೆ ನಾವು ಈ ಬಾರಿ ಒಲವು ತೋರಿದೆವು. ಅಲ್ಲಾ ಘಜನ್ಫರ್ ನಿಜವಾಗಿಯೂ ನಮ್ಮ ತಂಡಕ್ಕೆ ಉತ್ತಮ ಪ್ಯಾಕೇಜ್ ಆಟಗಾರ ಆಗಲಿದ್ದಾರೆ ಎಂಬ ವಿಶ್ವಾಸವಿದೆ’ ಎಂದು ಅವರು ಹೇಳಿದ್ದಾರೆ.
‘ನಾವು ಒಂದೆರಡು ವರ್ಷಗಳ ಹಿಂದೆ ಯುಕೆಯಲ್ಲಿ ನಮ್ಮ ಎಂಐ ಗ್ಲೋಬಲ್ ಆಟಗಾರರಿಗಾಗಿ ಬೇಸಿಗೆ ಶಿಬಿರವನ್ನು ಆಯೋಜಿಸಿದ್ದೆವು ಮತ್ತು ರಿಯಾನ್ ರಿಕೆಲ್ಟನ್ ಅಲ್ಲಿ ಸಾಕಷ್ಟು ರನ್ ಗಳಿಸಿದ್ದರು. ಎಸ್ಎ20ನಲ್ಲೂ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಐಪಿಎಲ್ ಮೂಲಕವೂ ಆ ನಿರಂತರತೆಯ ಅಂಶವನ್ನು ಹೊಂದಲು ನಾವು ಬಯಸಿದ್ದೇವೆ’ ಎಂದು ಆಕಾಶ್ ಅಂಬಾನಿ ಹೇಳಿದ್ದಾರೆ.
ರಾಬಿನ್ ಮಿಂಜ್ ವ್ಯತ್ಯಾಸ ತರಬಲ್ಲರು: ‘ಈ ಬಾರಿ ಹರಾಜಿನಲ್ಲಿ ನಾವು ಆರಿಸಿರುವ ಮತ್ತೋರ್ವ ಹೊಸ ಆಟಗಾರ ರಾಬಿನ್ ಮಿಂಜ್ ಕೂಡ ಎರಡು ವರ್ಷಗಳ ಹಿಂದೆ ನಮ್ಮ ಪ್ರತಿಭಾಶೋಧ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಳೆದ ವರ್ಷ ಅವರು ನಮ್ಮ ತಂಡಕ್ಕೆ ಸಿಗದ ಬಗ್ಗೆ ಬೇಸರಗೊಂಡಿದ್ದೆವು. ಏಕೆಂದರೆ ಅವರು ನಮ್ಮ ಪ್ರಮುಖ ಗುರಿಗಳಲ್ಲಿ ಒಬ್ಬರಾಗಿದ್ದರು. ಆದ್ದರಿಂದ ಈ ಬಾರಿ ಅವರನ್ನು ಹೊಂದಲು ನಿಜವಾಗಿಯೂ ಸಂತೋಷವಾಗುತ್ತಿದೆ. ನಮ್ಮ ತಂಡದಲ್ಲಿ ಅವರು ವ್ಯತ್ಯಾಸದ ಬಿಂದುವಾಗಲಿದ್ದಾರೆ ಮತ್ತು ಅವರ ಸೇವೆ ಪಡೆದುಕೊಂಡಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಆಕಾಶ್ ಅಂಬಾನಿ ಅವರು ವಿವರಿಸಿದ್ದಾರೆ.
ಐಪಿಎಲ್ 18ನೇ ಆವೃತ್ತಿ 2025ರ ಮಾರ್ಚ್ 14ರಿಂದ ಮೇ 25ರವರೆಗೆ ನಡೆಯಲಿದ್ದು, ಮುಂಬೈ ಇಂಡಿಯನ್ಸ್ ಈ ಬಾರಿ ಬಹುತೇಕ ಹೊಸ ತಂಡವಾಗಿ ಕಣಕ್ಕಿಳಿಯಲಿದೆ.
ಐಪಿಎಲ್-2025 ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಖರೀದಿಸಿದ ಆಟಗಾರರು:
1. ಟ್ರೆಂಟ್ ಬೌಲ್ಟ್ – 12.5 ಕೋಟಿ ರೂ
2. ನಮನ್ ಧೀರ್ – 5.25 ಕೋಟಿ ರೂ
3. ರಾಬಿನ್ ಮಿಂಜ್ – 65 ಲಕ್ಷ ರೂ
4. ಕರ್ಣ್ ಶರ್ಮ – 50 ಲಕ್ಷ ರೂ
5. ರಿಯಾನ್ ರಿಕೆಲ್ಟನ್ – 1 ಕೋಟಿ ರೂ
6. ದೀಪಕ್ ಚಹರ್ – 9.25 ಕೋಟಿ ರೂ
7. ಅಲ್ಲಾ ಘಜನ್ಫರ್ – 4.8 ಕೋಟಿ ರೂ
8. ವಿಲ್ ಜ್ಯಾಕ್ಸ್ – 5.25 ಕೋಟಿ ರೂ
9. ಅಶ್ವನಿ ಕುಮಾರ್ – 30 ಲಕ್ಷ ರೂ
10. ಮಿಚೆಲ್ ಸ್ಯಾಂಟ್ನರ್ – 2 ಕೋಟಿ ರೂ
11. ರೀಸ್ ಟೋಪ್ಲೆ – 75 ಲಕ್ಷ ರೂ
12. ಶ್ರೀಜಿತ್ ಕೃಷ್ಣನ್ – 30 ಲಕ್ಷ ರೂ
13. ರಾಜ್ ಅಂಗದ್ ಬಾವಾ – 30 ಲಕ್ಷ ರೂ
14. ಸತ್ಯನಾರಾಯಣ ರಾಜು – 30 ಲಕ್ಷ ರೂ
15. ಬೆವೊನ್ ಜೇಕಬ್ಸ್ – 30 ಲಕ್ಷ ರೂ
16. ಅರ್ಜುನ್ ತೆಂಡೂಲ್ಕರ್ – 30 ಲಕ್ಷ ರೂ
17. ಲಿಜಾಡ್ ವಿಲಿಯಮ್ಸ್ – 75 ಲಕ್ಷ ರೂ
18. ವಿಘ್ನೇಶ್ ಪುಥುರು – 30 ಲಕ್ಷ ರೂ
ರಿಟೇನ್ ಆಟಗಾರರು: ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ.