ಬೆಂಗಳೂರು: ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ₹5 ಸಾವಿರ ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದಿದೆ’ ಎಂಬ ಆರೋಪ ಕುರಿತು ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.
ಮೂಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಕುಟುಂಬದ ನಂಟು ಇರುವ ಬಗ್ಗೆ ಆರೋಪಗಳು ಕೇಳಿಬಂದಿದ್ದು ಈ ವಿಚಾರದಲ್ಲಿ ರಾಜ್ಯ ರಾಜಕೀಯ ಪಕ್ಷಗಳ ನಡುವೆ ಜಟಾಪಟಿ ನಡೆಯುತ್ತಿದೆ. ಅದೇ ಹೊತ್ತಿಗೆ , ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಕಾರ್ಯದರ್ಶಿ ಬಿ.ಟಿ.ರಾಧಾಕೃಷ್ಣ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಬುಧವಾರ (ಜೂನ್ 03, 2024) ಮನವಿ ಸಲ್ಲಿಸಿದ್ದಾರೆ. ಜಿಂದಾಲ್ ಭೂ ಅಕ್ರಮದಲ್ಲಿ ಸಾರ್ವಜನಿಕ ಹಿತಾಸಕ್ತಿ ಧಾವೆ ಹೂಡಿ, ಆಗಿನ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ ರಾಜೀನಾಮೆಗೆ ಕಾರಣರಾಗಿದ್ದ ಕೆ.ಎ.ಪಾಲ್ ನೇತೃತ್ವದ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಇದೀಗ ಈಗಿನ ಸಿ.ಎಂ ಸಿದ್ದರಾಮಯ್ಯ ಕುಟುಂಬದ ವಿರುದ್ದದ ಮೂಡಾ ಹಗರಣದ ಬಗ್ಗೆಯೂ ಕಾನೂನು ಸಮರಕ್ಕೆ ಮುನ್ನುಡಿ ಬರೆದಿದೆ.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಹಿಂದಿನ ಸರ್ಕಾರದ ಅವಧಿಯ ಹಗರಣಗಳ ಬಗ್ಗೆ ಸೂಕ್ತ ತನಿಖೆಗೆ ಕೋರಿ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಸಲ್ಲಿಸಿದ್ದ ಮನವಿಗೆ ಸ್ಪಂಧಿಸಿ ಸರ್ಕಾರ ಸೂಕ್ತ ಕ್ರಮ ಕೈಗೊಂಡಿತ್ತು. ಇದೀಗ ಈ ಸರ್ಕಾರದ ಅವಧಿಯಲ್ಲೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಡಿ ಬರುವ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ರೂಪಾಯಿ ಅವ್ಯವಹಾರದ ತನಿಖೆ ಸಾಗಿದೆ. ಸಚಿವರಾಗಿದ್ದ ಬಿ.ನಾಗೇಂದ್ರ ಅವರು ರಾಜೀನಾಮೆ ಸಲ್ಲಿಸಿದ್ದು, ಈ ಹಗರಣ ಕುರಿತಂತೆ ಸಮರ್ಪಕ ತನಿಖೆ ನಡೆಯದೇ ಆರೋಪಿಗಳನ್ನು ರಕ್ಷಿಸಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕೆಂದು ಸಿ.ಆರ್.ಎಫ್ ಒತ್ತಾಯಿಸಿದೆ. ಇದರ ಜೊತೆಯಲ್ಲೇ ಮುಡಾ ತನಿಖೆ ಬಗ್ಗೆಯೂ ಒತ್ತಾಯ ಮುಂದಿಟ್ಟಿದೆ.
‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸುಮಾರು 5 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಭ್ರಷ್ಟಾಚಾರ ನಡೆದಿದೆ’ ಎಂದು ವಿಧಾನ ಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್ ಆರೋಪಿಸಿದ್ದಾರೆ. ಈ ಹಗರಣದಲ್ಲಿ ಸಚಿವರಾದ ಭೈರತಿ ಸುರೇಶ್, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಪುತ್ರರೂ ಆದ ಡಾ.ಯತೀಂದ್ರ, ಶಾಸಕ ಹರೀಶ್ ಗೌಡ, ರಾಕೇಶ್ ಪಾಪಣ್ಣ, ಮುಡಾದ ಹಾಲಿ ಅಧ್ಯಕ್ಷ ಮರಿಗೌಡ, ಹಿಂದಿನ ಅಧ್ಯಕ್ಷ ಎಚ್.ವಿ. ರಾಜೀವ್, ಹಿಂದಿನ ಆಯುಕ್ತ ನಟೇಶ್, ಈಗಿನ ಆಯುಕ್ತ ದಿನೇಶ್ ಹಾಗೂ ಅವರ ಮೈದುನ ತೇಜಸ್ ಗೌಡ, ಸುದೀಪ್, ದಲ್ಲಾಳಿಗಳಾದ ಉತ್ತಮ್ ಗೌಡ, ಮೋಹನ್ ಹೆಸರುಗಳನ್ನು ಉಲ್ಲೇಖಿಸಿ ಶಾಸಕ ಎಚ್.ವಿಶ್ವನಾಥ್ ಅವರು ಭ್ರಷ್ಟಾಚಾರ ಆರೋಪಗಳನ್ನು ಮಾಡಿದ್ದಾರೆ.
ಸಿಎಂ ಪತ್ನಿ ಹೆಸರಿಗೂ ಅಕ್ರಮವಾಗಿ ಪರಿಹಾರ ನೀಡಲಾಗಿದೆ ಎಂದೂ ಆರೋಪಿಸಿರುವ ಶಾಸಕರಾದ ಎಚ್.ವಿಶ್ವನಾಥ್ ಅವರು ದಿನಾಂಕ 30.06.2024ರಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಭಾರೀ ಮೊತ್ತದ ಹಗರಣವನ್ನು ಬಯಲು ಮಾಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಹಾಗೂ, ಮುಖ್ಯಮಂತ್ರಿ ಕುಟುಂಬ ಸದಸ್ಯರು ಮತ್ತು ಆಪ್ತರ ವಿರುದ್ಧವೇ ಆರೋಪಗಳು ಕೇಳಿಬಂದಿರುವ ಕಾರಣ ಈ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿ ಮಾನ್ಯ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕೆಂದು ಸಿ.ಆರ್.ಎಫ್. ಈ ಮನವಿಯಲ್ಲಿ ಆಗ್ರಹಿಸಿದೆ.
2019ರಲ್ಲಿ ಕಾಂತರಾಜು ಆಯುಕ್ತರಾಗಿದ್ದಾಗ ಮುಡಾ ಬಳಿ 9 ಸಾವಿರ ನಿವೇಶನ ಇತ್ತು. ಇದರಲ್ಲಿ 5 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಈಗಾಗಲೇ ಮಾರಿಕೊಳ್ಳಲಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಹಾಗೂ ಈಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸರ್ಕಾರದ ಸೂಚನೆಯನ್ನೂ ಮೀರಿ ಅಕ್ರಮವಾಗಿ ನಿವೇಶನಗಳನ್ನು ಹಂಚಲಾಗಿದೆ. ಮುಡಾದ ಈಗಿನ ಆಯುಕ್ತ ದಿನೇಶ್ ನೇರವಾಗಿ ಸಚಿವರ ಸಂಪರ್ಕದಲ್ಲಿ ಇದ್ದಾರೆ. ತಿಂಗಳಿಗೆ ಇಂತಿಷ್ಟು ಮಾಮೂಲಿ ತಲುಪಿಸಿ ಅದೇ ಹುದ್ದೆಯಲ್ಲಿ ಉಳಿದುಕೊಂಡಿದ್ದಾರೆ. ಮುಡಾ ಸಾಮಾನ್ಯ ಸಭೆಗಳಲ್ಲಿ ಯಾವುದೇ ವಿಷಯಗಳನ್ನು ಚರ್ಚೆಗೆ ತರುವುದಿಲ್ಲ. ಆದರೆ ದಾಖಲೆಗಳಲ್ಲಿ ಮಾತ್ರ ನಮೂದಾಗಿರುತ್ತದೆ’ ಎಂದು ವಿಶ್ವನಾಥ್ ಆರೋಪಿಸಿದ್ದರು.
ವಿಧಾನ ಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ, ಶಾಸಕ ಹರೀಶ್ ಗೌಡ, ರಾಕೇಶ್ ಪಾಪಣ್ಣ, ಮುಡಾದ ಹಾಲಿ ಅಧ್ಯಕ್ಷ ಮರಿಗೌಡ, ಹಿಂದಿನ ಅಧ್ಯಕ್ಷ ಎಚ್.ವಿ. ರಾಜೀವ್, ಹಿಂದಿನ ಆಯುಕ್ತ ನಟೇಶ್, ಈಗಿನ ಆಯುಕ್ತ ದಿನೇಶ್ ಹಾಗೂ ಅವರ ಮೈದುನ ತೇಜಸ್ ಗೌಡ, ಮರಿತಿಬ್ಬೇಗೌಡರ ಶಿಷ್ಯ ಸುದೀಪ್, ದಲ್ಲಾಳಿಗಳಾದ ಉತ್ತಮ್ ಗೌಡ, ಮೋಹನ್ ಸೇರಿದಂತೆ ಹಲವರು ಈ ಭ್ರಷ್ಟಾಚಾರದಲ್ಲಿ ಭಾಗಿ ಆಗಿದ್ದಾರೆ. ಹೊರಗುತ್ತಿಗೆ ನೌಕರರನ್ನು ಇಟ್ಟುಕೊಂಡು ದಾಖಲೆಗಳನ್ನು ತಿದ್ದಲಾಗುತ್ತಿದೆ’ ಎಂದು ಆರೋಪಿಸಿದ್ದರು.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಭಾನುವಾರ ಸಚಿವ ಭೈರತಿ ಸುರೇಶ್ ಮುಡಾದ ದಾಖಲೆಗಳನ್ನು ಒಂದು ಟ್ರಕ್‌ನಲ್ಲಿ ಬೆಂಗಳೂರಿಗೆ ತರಿಸಿಕೊಂಡಿದ್ದಾರೆ. ಅದರಲ್ಲಿ ಅದೇನು ತಿದ್ದುತ್ತಾರೋ ಎಂದು ಆತಂಕ ವ್ಯಕ್ತಪಡಿಸಿದ್ದ ವಿಶ್ವನಾಥ್, ಸಿ.ಎಂ. ಪತ್ನಿ ಹೆಸರಿಗೂ ಅಕ್ರಮವಾಗಿ ಪರಿಹಾರ ನೀಡಲಾಗಿದೆ ಎಂದು ದೂರಿದ್ದರು.
ಮೈಸೂರಿನ ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ರಲ್ಲಿ 3 ಎಕರೆ 16 ಗುಂಟೆ ಜಮೀನು ಇದ್ದು, ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಅವರ ಸೋದರ ಸಂಬಂಧಿ ಮಲ್ಲಣ್ಣ ಎಂಬುವರು 1992ರಲ್ಲಿ ಖರೀದಿ ಮಾಡಿದ್ದರು. ನಂತರದಲ್ಲಿ ಈ ಜಮೀನನ್ನು ಪಾರ್ವತಮ್ಮ ಹೆಸರಿಗೆ ದಾನಪತ್ರವಾಗಿ ನೀಡಿದ್ದರು. 1994ರಲ್ಲಿ ಇದರ ಭೂಸ್ವಾಧೀನಕ್ಕೆ ಮುಡಾ ಪ್ರಕಟಣೆ ಹೊರಡಿಸಿತ್ತು. 1998ರಲ್ಲಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದಾಗ ಇದನ್ನು ಡಿನೋಟಿಫೈ ಮಾಡಲಾಯಿತು. ಹೀಗಿದ್ದೂ ಮುಡಾ ಇದೇ ಜಮೀನಿಗೆ ಪರಿಹಾರ ವಿತರಿಸಿದೆ’ ಎಂದು ವಿಶ್ವನಾಥ್ ಆರೋಪಿಸಿದ್ದರು.
ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಬಕು ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಪ್ರಭಾವಿ ಸಚಿವರ ಪಾತ್ರ ಮತ್ತು ಮುಖ್ಯಮಂತ್ರಿ ಕುಟುಂಬ ಸದಸ್ಯರ ಹೆಸರೂ ಕೇಳಿಬಂದಿರುವುದರಿಂದ ಸರ್ಕಾರದ ಅಧೀನದ ಇಲಾಖೆಯಿಂದ ಸಮರ್ಪಕ ತನಿಖೆ ನಡೆಯುವುದು ಅನುಮಾನ ಎಂದು ಪ್ರತಿಪಾದಿಸಿರುವ ಸಿಟಿಜನ್ ರೈಟ್ಸ್ ಫೌಂಡೇಷನ್ ಪ್ರಮುಖರು ಈ ಅವ್ಯವಹಾರ ಬಗ್ಗೆ ಹೈಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ನಡೆಸಿ ಸಾರ್ವಜನಿಕರ ತೆರಿಗೆಯ ಹಣವನ್ನು ದುರುಪಯೋಗಪಡಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿದೆ.
UPDATE: ಮಂಗಳೂರಲ್ಲಿ ಮಣ್ಣು ಕುಸಿತ ಪ್ರಕರಣ : ಓರ್ವ ಕಾರ್ಮಿಕನ ರಕ್ಷಣೆ