ಬೆಂಗಳೂರು : ಶ್ರೀನಿವಾಸ ಪ್ರಸಾದ್‌ರವರ ನಿಧನಕ್ಕೆ ಗೌರವ ಸೂಚಕವಾಗಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ರಜೆ ಘೋಷಣೆ ಮಾಡಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಅಂತ್ಯಕ್ರಿಯೆ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ, ಶ್ರೀನಿವಾಸ ಪ್ರಸಾದ್‌ರವರ ನಿಧನಕ್ಕೆ ಗೌರವ ಸೂಚಕವಾಗಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ರಜೆ ಘೋಷಣೆ ಮಾಡಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಅಂತ್ಯಕ್ರಿಯೆ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
15 ದಿನಗಳ ಹಿಂದೆ ಭೇಟಿಯಾಗಿದ್ದಾಗ ರಾಜಕೀಯ ಮಾತನಾಡಿದೆವು. ಹೋರಾಟದ ಬದುಕಿನಲ್ಲಿ ಇರುವವರಿಗೆ ಸಂತೋಷದ ಕ್ಷಣಗಳು ಕಡಿಮೆ. ಬಹಳ ವರ್ಷಗಳ ನಂತರ ಭೇಟಿಯಾಗಿದ್ದ ಕಾರಣ ಸಂತೋಷವಾಗಿದ್ದೇನೆ ಎಂದು ನನ್ನ ಬಳಿ ಹೇಳಿದ್ದರು.ನಾನು ಮತ್ತು ಶ್ರೀನಿವಾಸ ಪ್ರಸಾದ್ ಅವರು ಜೊತೆಯಲ್ಲಿಯೇ ರಾಜಕಾರಣ ಮಾಡಿದವರು. ಜನತಾ ಪಕ್ಷ ಹಾಗೂ ಕಾಂಗ್ರೆಸ್ ನಲ್ಲಿ ಒಟ್ಟಿಗಿದ್ದವರನ್ನು ಕಳೆದುಕೊಂಡಾಗ ಬಹಳ ದುಃಖವಾಗುತ್ತದೆ ಎಂದರು.
ಶ್ರೀನಿವಾಸ ಪ್ರಸಾದ್ ಅವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿ ಅವರ ಕುಟುಂಬ ವರ್ಗದವರೊಂದಿಗೆ ಮಾತನಾಡಿದ್ದೆ. ಆದರೆ ಅಂಗಾಂಗ ವೈಫಲ್ಯದಿಂದಾಗಿ ಅವರ ನಿಧನವಾಗಿದೆ. ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ್ದೇನೆ. 2013 ರಲ್ಲಿ ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆಯಾಗಿ ಹಲವು ವರ್ಷಗಳ ಕಾಲ ಆರೋಗ್ಯವಾಗಿದ್ದರು.
ಶ್ರೀನಿವಾಸ ಪ್ರಸಾದ್ ಹಾಗೂ ನಾನು ಒಂದೇ ವಯೋಮಾನದವರು. ನೇರ ನುಡಿಯ ಶ್ರೀನಿವಾಸ ಪ್ರಸಾದ್ ಅವರು ಸಾಮಾಜಿಕ ಅಸಮಾನತೆಗಳ ವಿರುದ್ಧ ಹೋರಾಟ ನಡೆಸಿದವರು. ಡಾ. ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಯಾಗಿದ್ದರು. ದಮನಿತರ ಧ್ವನಿಯಾಗಿ ಅಂಬೇಡ್ಕರ್ ರವರ ತತ್ವಾದರ್ಶಗಳು ಹಾದಿಯಲ್ಲಿ ನಡೆದವರು. ಕೇಂದ್ರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ ಶ್ರೀನಿವಾಸ್ ಪ್ರಸಾದ್ ರವರು 50 ವರ್ಷಗಳ ತಮ್ಮ ರಾಜಕೀಯ ಜೀವನದಲ್ಲಿ ಸೋಲು ಹಾಗೂ ಗೆಲುವನ್ನು ಸಮನಾಗಿ ಕಂಡವರು. ಕಾರಣಾಂತರಗಳಿಂದ ಇತ್ತೀಚೆಗೆ ರಾಜಕೀಯ ಚಟುವಟಿಕೆಗಳಿಂದ ದೂರವಾಗಿದ್ದರು. 50 ವರ್ಷಗಳ ಕಾಲ ಸುದೀರ್ಘ ಹೋರಾಟದ ಬದುಕು ನಡೆಸಿದ ಅವರಂಥವರು ನಮ್ಮಮಧ್ಯೆ ಇಲ್ಲ ಎನ್ನುವುದು ನೋವಿನ ಸಂಗತಿ. ಅವರ ಸಾವಿನಿಂದ ನಾಡು ಬಡವಾಗಿದೆ ಎಂದರು.
ಒಬ್ಬ ಸ್ನೇಹಿತನನ್ನು ಕಳೆದುಕೊಂಡಿರುವುದು ಬಹಳ ದುಃಖ ತಂದಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.