ಬೆಂಗಳೂರು: ನಿನ್ನೆ ರಾಜ್ಯದ ವಿಧಾನಪರಿಷತ್ತಿನಲ್ಲಿ ರಾಜ್ಯದ ಸಚಿವ ಪ್ರಿಯಾಂಕ್ ಖರ್ಗೆಯವರು ಕೇಂದ್ರ ಸಚಿವ ಅಮಿತ್ ಶಾ ಅವರ ಬಗ್ಗೆ ಅವಹೇಳಕಾರಿಯಾಗಿ ಮತ್ತು ಅಸಂಸದೀಯ ಪದಗಳನ್ನು ಬಳಸಿ ಮಾತನಾಡಿದ್ದನ್ನು ಖಂಡಿಸುತ್ತೇನೆ. ಈ ಕೂಡಲೇ ಸಚಿವ ಪ್ರಿಯಾಂಕ್ ಖರ್ಗೆ ಕ್ಷಮೆಯಾಚಿಸುವಂತೆ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಒತ್ತಾಯಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆಯವರು ಕೂಡಲೇ ಕ್ಷಮೆ ಕೇಳಬೇಕೆಂದು ಅವರು ಆಗ್ರಹಿಸಿದರು. ನಿನ್ನೆ ಕರ್ನಾಟಕ ಸರಕಾರವು ದ್ವೇಷ ಭಾಷಣ ನಿಯಂತ್ರಣ ಕಾನೂನನ್ನು ಎರಡೂ ಸದನಗಳಲ್ಲಿ ಮಂಡಿಸಿ ಒಪ್ಪಿಗೆ ಪಡೆದಿದೆ. ಆ ಕಾನೂನಿನಡಿ ಪ್ರಿಯಾಂಕ್ ಖರ್ಗೆ ಮೊದಲನೇ ಅಪರಾಧಿ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಉತ್ತರ ಕರ್ನಾಟಕದ ಬಿಜಾಪುರ, ರಾಯಚೂರು, ಗುಲ್ಬರ್ಗ, ಹೈದರಾಬಾದ್‍ನಲ್ಲಿ ಒಂದು ನಾಣ್ಣುಡಿ ಇದೆ. ಸಣ್ಣ ಬಾಯೊಳಗೆ ದೊಡ್ಡ ಮಾತು (ಚೋಟಿ ಮುಹ್, ಬಡೀ ಬಾತ್) ಎಂಬರ್ಥವನ್ನು ಇದು ಕೊಡುತ್ತದೆ. ಈ ನಾಣ್ಣುಡಿ ಪ್ರಿಯಾಂಕ್ ಸಲುವಾಗಿಯೇ ಇದ್ದಂತಿದೆ ಎಂದು ತಿಳಿಸಿದರು. ಪ್ರಿಯಾಂಕ್ ಅವರೇ ನಿಮ್ಮ ತಂದೆಯವರು ರಾಜ್ಯದಲ್ಲಿ 50 ವರ್ಷ ರಾಜಕಾರಣ ಮಾಡಿದ್ದಾರೆ. ಅವರನ್ನು ನೋಡಿ ನೀವು ಕಲಿಯಬೇಕಿತ್ತು ಎಂದು ಕಿವಿಮಾತು ಹೇಳಿದರು.
ಪ್ರಿಯಾಂಕ್ ತಂದೆಯವರ ಹೆಸರು ಮಲ್ಲಿಕಾರ್ಜುನ ಇರದೇ ಹೋಗಿದ್ದರೆ, ಪ್ರಿಯಾಂಕ್ ಖರ್ಗೆಯನ್ನು ಯಾವೂರ ದಾಸಯ್ಯ ಎಂದು ಯಾರೂ ಕೇಳುತ್ತಿರಲಿಲ್ಲ. ಅವರ ತಂದೆಯವರಿಗಾಗಿ ಅವರಿಗೆ ಗೌರವ ಸಿಕ್ಕಿದೆ ಎಂದು ತಿಳಿಸಿದರು. ಚಿಕ್ಕವರಾದರೂ ಅವರು ತಿದ್ದಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು. ಬಾಯ್ತಪ್ಪಿ ಮಾತನಾಡಿದ್ದರೆ ಕ್ಷಮೆ ಕೇಳಿ ಅದನ್ನು ಸರಿಪಡಿಸಿಕೊಳ್ಳುವುದನ್ನು ಕಲಿಯಲಿ ಎಂದರು.
ಆಡಳಿತ- ವಿಪಕ್ಷದ ನಡುವೆ ಟೀಕೆ ಟಿಪ್ಪಣಿ ನಡೆಯುವುದು ಪ್ರಜಾಪ್ರಭುತ್ವದ ಸೌಂದರ್ಯ. ಟೀಕೆ ಟಿಪ್ಪಣಿಗಳು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಇರಬೇಕು. ಜನರ ಕಲ್ಯಾಣಕ್ಕಾಗಿ ಇರಬೇಕು. ವೈಯಕ್ತಿಕ ದ್ವೇಷದಿಂದ ಹಿರಿಯರನ್ನು ಅಪಮಾನ ಮಾಡುವ ಶಬ್ದ ಬಳಸುವುದು ಯೋಗ್ಯವಲ್ಲ; ತರವಲ್ಲ ಎಂದು ತಿಳಿಸಿದರು.
ಮಾಜಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ರಾಜ್ಯ ವಕ್ತಾರ ವೆಂಕಟೇಶ ದೊಡ್ಡೇರಿ, ಎಸ್‍ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್ ಅವರು ಭಾಗವಹಿಸಿದ್ದರು.








