ದಾವಣಗೆರೆ: ಬಳಕೆಯಾಗದೆ ಉಳಿದ ಸಿಎಸ್ ಆರ್ ನಿಧಿಗಳ ಕುರಿತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಮಾಹಿತಿ ಕೇಳಿದ್ದಾರೆ ಹಾಗೂ ಅವರ ಪ್ರಶ್ನೆಗೆ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಉತ್ತರ ನೀಡಿದೆ.
ಕಳೆದ 2022, 2023 ಮತ್ತು 2024 ರಲ್ಲಿ ದೇಶದಲ್ಲಿ ಬಳಕೆಯಾಗದೆ ಉಳಿದ ಸಿಎಸ್ಆರ್ ನಿಧಿಗಳು ಹಾಗೂ ಬಳಕೆಯಾಗದ ಸಿಎಸ್ಆರ್ ನಿಧಿಗೆ ಯಾವ ಕ್ರಮ ಕೈಗೊಳ್ಳಲಾಗಿದೆ, ಬಳಕೆಯಾಗದ ಸಿಎಸ್ಆರ್ ಖಾತೆಗೆ ವರ್ಗಾಯಿಸಲಾದ ಖರ್ಚು ಮಾಡದ ಸಿಎಸ್ಆರ್ ನಿಧಿಗಳ ಮೊತ್ತದ ವರ್ಷವಾರು ವಿವರ ಹಾಗೂ 2020 ರಿಂದ ಸಿಎಸ್ಆರ್ ವೆಚ್ಚದ ವಿವರಗಳು, ಸಿಎಸ್ಆರ್ ಕೊಡುಗೆಗಳ ಮೂಲಕ ಬೆಂಬಲಿತ ಸರ್ಕಾರಿ ಯೋಜನೆಗಳು ಮತ್ತು ದೇಶಾದ್ಯಂತ ರಾಜ್ಯವಾರು ನಿಧಿಯ ಸಮಾನ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಸಂಸದರೆ ಡಾ.ಪ್ರಭಾ ಮಲ್ಲಿಕಾರ್ಜುನ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಕೇಂದ್ರ ಸಚಿವಾಲಯ ಉತ್ತರ ನೀಡಿದ್ದು ಕಂಪನಿಗಳ ಕಾಯ್ದೆ, 2013ರ ಪ್ರಕಾರ ನಡೆಯುತ್ತಿರುವ ಯೋಜನೆಗಳ ಖರ್ಚು ಆಗದ ಸಿಎಸ್ ಆರ್ ಮೊತ್ತವನ್ನು 30 ದಿನಗಳಲ್ಲಿ ಬಳಕೆಯಾಗದ ಸಿಎಸ್ ಆರ್ ಅಕೌಂಟ್ ಗೆ ವರ್ಗಾಯಿಸಲಾಗಿದೆ. ಮುಂದಿನ 3 ವರ್ಷಗಳಲ್ಲಿ ಖರ್ಚು ಮಾಡಬೇಕು. 3 ವರ್ಷಗಳ ಬಳಿಕವೂ ಖರ್ಚಾಗದೇ ಇದ್ದರೆ, 30 ದಿನಗಳಲ್ಲಿ ಶೆಡ್ಯೂಲ್ VII ನಿಧಿಗೆ ವರ್ಗಾಯಿಸಬೇಕು. ನಡೆಯುತ್ತಿರುವ ಯೋಜನೆ ಅಲ್ಲದ ಸಿಎಸ್ ಆರ್ ಮೊತ್ತವನ್ನು 6 ತಿಂಗಳಲ್ಲಿ ಶೆಡ್ಯೂಲ್ VII ನಿಧಿಗೆ ವರ್ಗಾಯಿಸುವುದು ಕಡ್ಡಾಯವಾಗಿದೆ. ಸಿಎಸ್ ಆರ್ ಯೋಜನೆಗಳ ಯೋಜನೆ, ಅನುಷ್ಠಾನ, ಮೌಲ್ಯಮಾಪನ ಸಂಪೂರ್ಣವಾಗಿ ಸಿಎಸ್ ಆರ್ ಸಮಿತಿಯ ಜವಾಬ್ದಾರಿ. ಸರ್ಕಾರ ಕ್ಷೇತ್ರ/ಪ್ರದೇಶಕ್ಕೆ CSR ವೆಚ್ಚದ ನಿರ್ದೇಶನ ನೀಡುವುದಿಲ್ಲ. MCA21ನಲ್ಲಿ ಸಲ್ಲಿಸಿದ CSR ಮಾಹಿತಿ www.csr.gov.in ನಲ್ಲಿ ಸಾರ್ವಜನಿಕವಾಗಿ ಲಭ್ಯವಿದೆ ಎಂದು ಸಂಸದರ ಪ್ರಶ್ನೆಗೆ ಕೇಂದ್ರ ಉತ್ತರ ನೀಡಿದೆ.








