ಬೆಂಗಳೂರು: ಇತ್ತೀಚಿಗೆ ಕೆಲವು ಕಂಪನಿಗಳು ತಮ್ಮ ಹೂಡಿಕೆಯ ಶೇ.100ರಷ್ಟು ಮತ್ತು ಅದಕ್ಕಿಂತಲೂ ಹೆಚ್ಚು ಪ್ರಮಾಣದ ಸಬ್ಸಿಡಿ ಕೇಳುತ್ತಿವೆ. ಆದರೆ ಹೀಗೆ ಸಬ್ಸಿಡಿ ಕೊಡುವುದು ಕಾರ್ಯಸಾಧುವಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸೋಮವಾರ ಹೇಳಿದ್ದಾರೆ.
ರಾಜ್ಯ ಸರಕಾರವು ಖಾಸಗಿ ಹೂಡಿಕೆದಾರರಿಗೆ ಆಗಬಹುದಾದ ಅಪಾಯವನ್ನು ಕಡಿಮೆ ಮಾಡಲೆಂದು ಮತ್ತು ಯೋಜನೆಯ ಆರ್ಥಿಕ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವ ಉದ್ದೇಶಗಳಿಂದ ಮಾತ್ರ ಸಬ್ಸಿಡಿ ಕೊಡುತ್ತದೆ. ಯೋಜಿತ ಹೂಡಿಕೆಗಿಂತ ಹೆಚ್ಚು ಸಬ್ಸಿಡಿ ಕೊಡುತ್ತ ಹೋದರೆ ಕೈಗಾರಿಕಾ ಯೋಜನೆಗಳ ಆರ್ಥಿಕ ಕಾರ್ಯಸಾಧ್ಯತೆಯ ಬಗ್ಗೆಯೇ ಪ್ರಶ್ನೆಗಳು ಏಳುತ್ತವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಸರಕಾರವು ಕೈಗಾರಿಕಾಸ್ನೇಹಿ ವಾತಾವರಣ ಸೃಷ್ಟಿಸಲು ಆದ್ಯತೆ ಕೊಟ್ಟಿದ್ದು, ಖಾಸಗಿ ಉದ್ದಿಮೆಗಳನ್ನು ಮುಕ್ತವಾಗಿ ಸ್ವಾಗತಿಸಲಾಗುತ್ತಿದೆ. ಈ ಮೂಲಕ ಕರ್ನಾಟಕವು ನಾವೀನ್ಯತೆ ಮತ್ತು ಅವಕಾಶಗಳ ಆಡುಂಬೊಲವಾಗಿ ಇರುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಸರಕಾರ ಎಂದಮೇಲೆ ಎಲ್ಲವೂ ತೆರಿಗೆದಾರರ ಹಣವನ್ನೇ ಅವಲಂಬಿಸಿ ನಡೆಯುತ್ತದೆ. ಅವರ ಸಂಪನ್ಮೂಲಗಳ ಹಿತವನ್ನೂ ಕಾಯಬೇಕಾದ್ದು ನಮ್ಮ ಕೆಲಸವಾಗಿದೆ. ರಾಜ್ಯಕ್ಕೆ ದೀರ್ಘಾವಧಿ ಲಾಭ ತಂದುಕೊಡುವಂತಹ ನಿರ್ಧಾರಗಳನ್ನು ಕೈಗೊಳ್ಳಲು ನಾವು ಬದ್ಧರಾಗಿದ್ದೇವೆ. ಉದ್ಯಮಗಳ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿ, ಪಾರದರ್ಶಕ ವ್ಯವಸ್ಥೆ ಮತ್ತು ಸಕಾರಾತ್ಮಕ ಪರಿಸರ ನಿರ್ಮಾಣ ನಮ್ಮ ಗುರಿ ಎಂದು ಪಾಟೀಲ ಪ್ರತಿಪಾದಿಸಿದ್ದಾರೆ.