ಬೆಂಗಳೂರು: ರಾಜ್ಯದ ಶೈಕ್ಷಣಿಕ ಚಟುವಟಿಕೆಯ ಮಾದರಿಯಿಂದಾಗಿ ಪ್ರೌಢ ಶಾಲಾ ಶಿಕ್ಷಕರ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ. ವರ್ಷಕ್ಕೆ ಮೂರು ಬಾರಿ ಪರೀಕ್ಷೆ ಸೇರಿದಂತೆ ಹಲವು ಅವೈಜ್ಞಾನಿಕ ಶೈಕ್ಷಣಿಕ ವೇಳಾಪಟ್ಟಿಯಿಂದಾಗಿ ಶಿಕ್ಷಕರು ಒತ್ತಡದಲ್ಲೇ ಬೋಧನಾ ವೃತ್ತಿಯಲ್ಲಿ ತೊಡಗಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ಗಮನಿಸಿ ಸಮಸ್ಯೆ ನಿವಾರಿಸುತ್ತಾ ಎನ್ನುವ ಬಗ್ಗೆ ಮುಂದೆ ಓದಿ.
ಕನಿಷ್ಠ ಕಲಿಕಾಂಶಗಳ ಕಲಿಕೆ ಇಲ್ಲದೆ ಸ್ಪಷ್ಟವಾಗಿ ಓದಲು, ಶುದ್ಧವಾಗಿ ಬರೆಯಲು ಗಣಿತದ ಮೂಲ ಕಲಿಕಾಂಶಗಳು ಬಾರದ, ಮೂಲ ಸಾಮರ್ಥ್ಯಗಳ ಜ್ಞಾನವಿಲ್ಲದ ವಿದ್ಯಾರ್ಥಿಗಳು ಪ್ರೌಢ ಶಾಲೆಗೆ ದಾಖಲಾಗುತ್ತಿದ್ದಾರೆ. ಪ್ರೌಢಶಾಲೆಗಳಲ್ಲಿ ಸೇತುಬಂಧದ ಪೂರ್ವ ಪರೀಕ್ಷೆಯ ವಿಶ್ಲೇಷಣೆ ಗಮನಿಸಿದರೆ ಇದು ತಿಳಿಯುತ್ತದೆ. ಇಂಥ ವಿದ್ಯಾರ್ಥಿಗಳಿಗೆ 8 9ನೇ ತರಗತಿಯ ಪಠ್ಯ ವಸ್ತು ಬೋಧಿಸಬೇಕೋ ಅಥವಾ ವರ್ಣಮಾಲೆ, ಕಾಗುಣಿತ, ಒತ್ತಕ್ಷರಗಳು, ಓದುವುದು, ಬರೆಯುವುದು ಕಲಿಸಬೇಕೋ ಗೊತ್ತಾಗುತ್ತಿಲ್ಲ.
ಒಂದರಿಂದ ಎಂಟನೇ ತರಗತಿಯವರೆಗೆ ಕಲಿಯಬೇಕಾದ ಮೂಲ ಕಲಿಕಾಂಶಗಳನ್ನು ಸೇತುಬಂಧದ 15 ದಿನಗಳಲ್ಲಿ ಕಲಿಸಬೇಕು. ಈ 15 ದಿನಗಳಲ್ಲಿ ಕಲಿಯಲು ವಿಫಲನಾದರೆ ಅವರನ್ನು ಪರಿಹಾರ ಬೋಧನೆಗೆ ಒಳಪಡುವ ವಿಶೇಷ ಅಗತ್ಯವುಳ್ಳ ಮಕ್ಕಳು ಎಂದು ನಿರ್ಧರಿಸಿ , ವಿಶೇಷ ಬೋಧನೆಯನ್ನು ಮಾಡಬೇಕು. ಶೈಕ್ಷಣಿಕ ಮಾರ್ಗದರ್ಶಿ ಅನುಸಾರ ಆಯಾ ತಿಂಗಳಲ್ಲಿ ಸಂಬಂಧಿಸಿದ ತರಗತಿಗಳಿಗೆ ನಿಗದಿ ಪಡಿಸಿದ ಪಠ್ಯವಸ್ತುವಿನ ಬೋಧನೆ ಮುಗಿದಿರಬೇಕು.
ಎಲ್ಲಾ ಮೇಲಾಧಿಕಾರಿಗಳು ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಮಾನದಂಡವನ್ನಾಗಿ ಪರಿಗಣಿಸಿ ಪ್ರೌಢಶಾಲಾ ಶಿಕ್ಷಕರ ಮೇಲೆ ಇನ್ನಿಲ್ಲದ ಒತ್ತಡ ಹಾಕುತ್ತಿದ್ದಾರೆ. ಅಕ್ಷರಗಳು, ಕಾಗುಣಿತ, ಒತ್ತಕ್ಷರಗಳು, ಓದುವುದು, ಬರೆಯುವುದು, ಕೂಡುವುದು, ಕಳೆಯುವುದು,ಕಲಿಕಾಂಶಗಳು ಭಾಗಾಕಾರ, ಗುಣಾಕಾರ ಇತರೆ ಕನಿಷ್ಠ ಕಲಿಕಾಂಶಗಳು ಬಾರದ ವಿದ್ಯಾರ್ಥಿಗಳಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡಿ ಎಂದು ಕೇಳುವುದು ಸರಿಯೇ? ಎಂಬುದಾಗಿ ಅನೇಕ ಶಿಕ್ಷಕರು ಪ್ರಶ್ನಿಸುತ್ತಿದ್ದಾರೆ.
ಇಂತಹ ವಿದ್ಯಾರ್ಥಿಗಳಿಂದ 10ನೇ ತರಗತಿಯಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಲು ಹೇಗೆ ಸಾಧ್ಯ? ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ ಒಂದರಿಂದ ಎಂಟನೇ ತರಗತಿಗಳ ಅವಧಿಯಲ್ಲಿ ಕಲಿಕೆ ಆಗಿಲ್ಲವೆಂದು ಪ್ರೌಢಶಾಲೆಗಳಲ್ಲಿ ಒತ್ತಡ ಹೇರುತ್ತಿದ್ದಾರೆ ಎಂಬುದಾಗಿ ಕೆಲ ಶಿಕ್ಷಕರು ಅಸಮಾಧಾನ ಹೊರ ಹಾಕಿದ್ದಾರೆ.
ಪ್ರೌಢ ಶಾಲೆಗಳಲ್ಲಿ ನಿಗದಿಪಡಿಸಿದ ಬೋಧನಾ ಅವಧಿಗಳು-
ಪ್ರಥಮ ಭಾಷೆಗೆ ಆರು ಅವಧಿಗಳು
ದ್ವಿತೀಯ ಭಾಷೆಗೆ ಐದು ಅವಧಿಗಳು
ತೃತೀಯ ಭಾಷೆಗೆ ನಾಲ್ಕು ಅವಧಿಗಳು
ಗಣಿತ ವಿಷಯಕ್ಕೆ ಆರು ಅವಧಿಗಳು
ಸಾಮಾನ್ಯ ವಿಜ್ಞಾನ ವಿಷಯಕ್ಕೆ ಆರು ಅವಧಿಗಳು
ಸಮಾಜ ವಿಜ್ಞಾನ ಆರು ಅವಧಿಗಳು
ನಿಗದಿಯಾಗಿರುತ್ತವೆ.
ಆ ಅವಧಿಗಳ ಬೋಧನಾ ಸ್ತರಾನುಸಾರ ಪಠ್ಯ ವಸ್ತು ನಿಗದಿಯಾಗಿರುತ್ತದೆ. ಒಂದು ಶೈಕ್ಷಣಿಕ ವರ್ಷದಲ್ಲಿ ಲಭ್ಯವಾಗುವ ಬೋಧನಾ ಅವಧಿಗಳಲ್ಲಿ ನಿಗದಿತ ಪಠ್ಯ ವಸ್ತುವನ್ನು ಪೂರ್ಣವಾಗಿ ಬೋಧಿಸಿ ಅದಕ್ಕೆ ಸಂಬಂಧಿಸಿದ ಸಹಪಠ್ಯ ಚಟುವಟಿಕೆಗಳನ್ನು ಹಾಗೂ ಯೋಜನಾ ಕಾರ್ಯಗಳನ್ನು ವಿದ್ಯಾರ್ಥಿಗಳಿಂದ ಮಾಡಿಸಿ ಮೌಲ್ಯಂಕನ ಮಾಡಲು ಈ ಅವಧಿಗಳು ಸಾಲದು.
ಹಾಗಾಗಿ ಪ್ರೌಢಶಾಲಾ ಶಿಕ್ಷಕರು ಹಲವು ವರ್ಷಗಳಿಂದ ಸ್ವಯಂ ಪ್ರೇರಿತರಾಗಿ ಬೆಳಗಿನ ವಿಶೇಷ ತರಗತಿಗಳು, ಸಾಯಂಕಾಲದ ವಿಶೇಷ ತರಗತಿಗಳು, ಶನಿವಾರ ಭಾನುವಾರಗಳ ರಜಾ ಕಾಲದ ವಿಶೇಷ ತರಗತಿಗಳು, ದಸರಾ ರಜೆಯ ವಿಶೇಷ ತರಗತಿಗಳು ಈ ಬಿಡುವು ಪಡೆಯದೆ ಪಠ್ಯ ಬೋಧನೆ ಹಾಗೂ ಇತರೆ ಶೈಕ್ಷಣಿಕ ಕಾರ್ಯಗಳನ್ನು ಪೂರ್ಣಗೊಳಿಸುತ್ತಿದ್ದಾರೆ.
- ಘಟಕವಾರು ಪರೀಕ್ಷೆ ಮಾಡಬೇಕು.
- ಪರೀಕ್ಷಾ ಪಲಿತಾಂಶದ ವಿಶ್ಲೇಷಣೆ ಮಾಡಬೇಕು.
- ರೂಪಣಾತ್ಮಕ ಪರೀಕ್ಷೆಗಳು ಮಾಡಬೇಕು.
- ರೂಪಣಾತ್ಮಕ ಪರೀಕ್ಷೆಯ ಫಲಿತಾಂಶ ವಿಶ್ಲೇಷಣೆ ಮಾಡಬೇಕು.
- ಎಂಟು ಕ್ರಿಯಾ ಚಟುವಟಿಗಳನ್ನು ಮಾಡಿಸಬೇಕು.
- ರಸಪ್ರಶ್ನೆ ನಡೆಸಬೇಕು.
- ಗುಂಪು ಅಧ್ಯಯನ ಮಾಡಿಸಬೇಕು.
- ಮನೆ ಭೇಟಿ ನೀಡಬೇಕು.
- ವಿಶೇಷ ಅಗತ್ಯತೆಯುಳ್ಳ ವಿದ್ಯಾರ್ಥಿಗಳ ಪಟ್ಟಿ ಮಾಡಿ ಅವರನ್ನು ದತ್ತು ಪಡೆದು ವೈಯಕ್ತಿಕ ಗಮನ ಹರಿಸಬೇಕು.
- ಈ ಎಲ್ಲಾ ವಿಶೇಷ ಕಾರ್ಯಕ್ರಮಗಳಿಗೂ ದಾಖಲೆಗಳನ್ನು ನಿರ್ವಹಿಸಬೇಕು.
ಮೂಗಿಗಿಂತ ಮೂಗುತಿಯ ಭಾರ ಎನ್ನುವಂತೆ ಬೋಧನೆಗಿಂತ ದಾಖಲೆ ನಿರ್ವಹಣೆಯ ಜಾಸ್ತಿಯಾಗುತ್ತಿದೆ. ಇಷ್ಟೆಲ್ಲರ ನಡುವೆ ಮರುಸಿಂಚನ ಎಂಬ ಹೊಸ ಕಾರ್ಯಕ್ರಮವನ್ನು ನಿರ್ವಹಿಸಬೇಕು. ಈಗ ಮರು ಸಿಂಚನ ಮುಖಾಂತರ ಮತ್ತಷ್ಟು ಹೊರೆಯನ್ನು ಹೇರಲಾಗುತ್ತಿದೆ. ಸಮಸ್ಯೆ ಇರುವುದು ಒಂದು ಕಡೆ ಪರಿಹಾರ ನೀಡುತ್ತಿರುವುದು ಇನ್ನೊಂದು ಕಡೆ. ಪ್ರಾಯೋಗಿಕವಾಗಿ ಇದು ಸಾಧ್ಯವೇ? ಈಗಿರುವ ಕಾರ್ಯದ ಒತ್ತಡದಲ್ಲಿ ಪ್ರೌಢಶಾಲಾ ಶಿಕ್ಷಕರ ಸ್ವಾಸ್ಥ್ಯ ಹಾಳಾಗುತ್ತಿದೆ.
ಕಬ್ಬಿಣ ಕೊಟ್ಟರೆ ಆಯುಧ ಮಾಡಿಕೊಡುತ್ತೇವೆ. ಬಂಗಾರ ಕೊಟ್ಟರೆ ಆಭರಣ ಮಾಡಿಕೊಡುತ್ತೇವೆ. ಆದರೆ ನೀವು ಕಬ್ಬಿಣದಿಂದ ಆಭರಣ ಮಾಡಿ ಎಂದು ಹೇಳುತ್ತಿದ್ದೀರಾ.
ನಿಮಗಿದು ಸಮಂಜಸವೇ? ಎಂಬುದಾಗಿ ಪ್ರೌಢ ಶಾಲಾ ಶಿಕ್ಷಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಎಸ್ ಎಸ್ ಎಲ್ ಸಿ ಯ ಫಲಿತಾಂಶ ಆದರೆ ಕಲಾ ವಿಜ್ಞಾನ ವಾಣಿಜ್ಯ ತಾಂತ್ರಿಕ ಕೋರ್ಸ್ ಗಳಿಗೆ ಪ್ರವೇಶ ನೀಡಲಾಗುತ್ತದೆ. ಪದವಿ ಪೂರ್ವ ಪರೀಕ್ಷೆಯ ಅಥವಾ ಪ್ರವೇಶ ಪರೀಕ್ಷೆಯ ಪಲಿತಾಂಶವನ್ನಾಧರಿಸಿ ಪದವಿಗೆ ಪ್ರವೇಶ ನೀಡಲಾಗುತ್ತದೆ. ಕಲಿಕೆಯ ಯಾವ ಮಾನದಂಡವೂ ಇಲ್ಲದೆ ಪ್ರೌಢಶಾಲೆಗಳಿಗೆ ವಿದ್ಯಾರ್ಥಿಗಳು ಬರುತ್ತಾರೆ. ಅಂತಹ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಬೇಕು ಎಂದು ಪ್ರೌಢಶಾಲಾ ಶಿಕ್ಷಕರಿಗೆ ಒತ್ತಡ ಹೇರಲಾಗುತ್ತಿದೆ ಎಂಬುದಾಗಿ ಆರೋಪಿಸಿದ್ದಾರೆ.
ಅತಿಥಿ ಶಿಕ್ಷಕರ ಲಭ್ಯವಿಲ್ಲದ ಕಾರಣ ಹಾಗೂ ಶಿಕ್ಷಕರ ಕೊರತೆಯ ಕಾರಣ ಎರಡು ಶಾಲೆಗಳಲ್ಲಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗೆಯೇ ಮುಂದುವರೆದರೆ ಪ್ರೌಢಶಾಲಾ ಶಿಕ್ಷಕರು ತಮ್ಮ ಒತ್ತಡವನ್ನು ಸ್ಪೋಟಿಸುವುದಂತು ಖಂಡಿತ.
BIG NEWS: ಅ.3ರಿಂದ ಕಾವೇರಿ ಆರತಿ ಆರಂಭ: ಶ್ರೀರಂಗಪಟ್ಟಣದಲ್ಲಿ ಐದು ದಿನ ಪ್ರಾಯೋಗಿಕ ಆಚರಣೆ | Kaveri Aarti
ಅತ್ಯಾಚಾರ ಆರೋಪ ಪ್ರಕರಣ: ಶಾಸಕ ಮುನಿರತ್ನಗೆ ಸೇರಿದ 11 ಕಡೆ ‘SIT’ ದಾಳಿ, ಮಹತ್ವದ ದಾಖಲೆ ವಶಕ್ಕೆ