ವಾಷಿಂಗ್ಟನ್/ತೆಹ್ರಾನ್: ವಿಶ್ವದ ಗಮನ ಸೆಳೆದಿರುವ ಪಶ್ಚಿಮ ಏಷ್ಯಾ (ವೆಸ್ಟ್ ಏಷ್ಯಾ) ಸಂಘರ್ಷಕ್ಕೆ ಅಂತ್ಯ ಹಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ. ಇರಾನ್‌ನೊಂದಿಗೆ ಯುದ್ಧದ ಭೀತಿ ಎದುರಾಗಿರುವ ಬೆನ್ನಲ್ಲೇ, ಟ್ರಂಪ್ ಆಡಳಿತವು 15 ಅಂಶಗಳ ಬೃಹತ್ ಶಾಂತಿ ಯೋಜನೆಯನ್ನು ಪಾಕಿಸ್ತಾನದ ಮೂಲಕ ತೆಹ್ರಾನ್‌ಗೆ ರವಾನಿಸಿದೆ. ಒಂದು ತಿಂಗಳ ಕದನ ವಿರಾಮ ಮತ್ತು ಅಣ್ವಸ್ತ್ರ ಮುಕ್ತ ಇರಾನ್ ಈ ಯೋಜನೆಯ ಪ್ರಮುಖ ಅಂಶಗಳಾಗಿವೆ.
ಅಂತರಾಷ್ಟ್ರೀಯ ಮಾಧ್ಯಮಗಳ ವರದಿಯ ಪ್ರಕಾರ, ಈ ಪ್ರಸ್ತಾವನೆಯಲ್ಲಿ ಅಮೆರಿಕವು ಕಠಿಣ ಮತ್ತು ಆಕರ್ಷಕ ಎರಡೂ ರೀತಿಯ ಷರತ್ತುಗಳನ್ನು ವಿಧಿಸಿದೆ:ತಕ್ಷಣವೇ ಜಾರಿಗೆ ಬರುವಂತೆ 30 ದಿನಗಳ ಕಾಲ ಉಭಯ ದೇಶಗಳ ನಡುವೆ ಯಾವುದೇ ದಾಳಿ ನಡೆಯಬಾರದು. ಇರಾನ್ ತನ್ನ ಯುರೇನಿಯಂ ಸಮೃದ್ಧಗೊಳಿಸುವಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಮತ್ತು ಅಣ್ವಸ್ತ್ರಗಳನ್ನು ತಯಾರಿಸುವುದಿಲ್ಲ ಎಂದು ಲಿಖಿತ ಭರವಸೆ ನೀಡಬೇಕು.ಜಾಗತಿಕ ತೈಲ ಪೂರೈಕೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಎಲ್ಲಾ ದೇಶಗಳ ಹಡಗು ಸಂಚಾರಕ್ಕೆ ಮುಕ್ತಗೊಳಿಸಬೇಕು.
ಇರಾನ್ ಈ ಷರತ್ತುಗಳನ್ನು ಒಪ್ಪಿಕೊಂಡರೆ, ಅಮೆರಿಕವು ಇರಾನ್ ಮೇಲೆ ಹೇರಿರುವ ಆರ್ಥಿಕ ನಿರ್ಬಂಧಗಳನ್ನು ಹಂತಹಂತವಾಗಿ ತೆಗೆದುಹಾಕಲಿದೆ.
ಇರಾನ್‌ನ ದೂರಗಾಮಿ ಕ್ಷಿಪಣಿಗಳ ವ್ಯಾಪ್ತಿಗೆ ಮಿತಿ ಹೇರುವುದು ಮತ್ತು ಪ್ರಾದೇಶಿಕ ಉಗ್ರ ಸಂಘಟನೆಗಳಿಗೆ ನೀಡುತ್ತಿರುವ ಬೆಂಬಲವನ್ನು ನಿಲ್ಲಿಸುವುದು.
ಇರಾನ್ ಪ್ರತಿಕ್ರಿಯೆ ಹೇಗಿದೆ?
ಟ್ರಂಪ್ ಅವರ ಈ ಆಫರ್‌ಗೆ ಇರಾನ್ ಮಿಶ್ರ ಪ್ರತಿಕ್ರಿಯೆ ನೀಡಿದೆ.
ಇರಾನ್‌ನ ಕೆಲವು ಹಿರಿಯ ಅಧಿಕಾರಿಗಳು ಇದನ್ನು “ಅತಿಯಾದ ಬೇಡಿಕೆ” ಎಂದು ಕರೆದಿದ್ದಾರೆ ಮತ್ತು ಅಮೆರಿಕ ಮೊದಲು ತನ್ನ ಸೈನ್ಯವನ್ನು ಈ ಭಾಗದಿಂದ ಹಿಂಪಡೆಯಲಿ ಎಂದು ಒತ್ತಾಯಿಸಿದ್ದಾರೆ.
ಸ್ವಂತ ಷರತ್ತುಗಳು: ಪ್ರತಿಯಾಗಿ ಇರಾನ್ ಕೂಡ 5 ಅಂಶಗಳ ಪ್ರಸ್ತಾವನೆಯನ್ನು ಮುಂದಿಟ್ಟಿದ್ದು, ಯುದ್ಧದ ನಷ್ಟ ಪರಿಹಾರ ಮತ್ತು ಇಸ್ರೇಲ್‌ನ ದಾಳಿಗಳನ್ನು ನಿಲ್ಲಿಸುವಂತೆ ಕೇಳಿದೆ ಎನ್ನಲಾಗಿದೆ.








