ಸ್ಯಾನ್ ಫ್ರಾನ್ಸಿಸ್ಕೋ: ಚಾಟ್-ಜಿಪಿಟಿ (ChatGPT) ಸೃಷ್ಟಿಕರ್ತ ಮತ್ತು ಓಪನ್‌ಎಐ ಸಂಸ್ಥೆಯ ಸಿಇಒ ಸ್ಯಾಮ್ ಆಲ್ಟ್‌ಮನ್ ಅವರ ಮನೆಯ ಮೇಲೆ ಕಿಡಿಗೇಡಿಯೊಬ್ಬ ಪೆಟ್ರೋಲ್ ಬಾಂಬ್ (Molotov Cocktail) ಎಸೆದು ಹತ್ಯೆಗೆ ಯತ್ನಿಸಿರುವ ಘಟನೆ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 20 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ (ಏಪ್ರಿಲ್ 10, 2026) ಮುಂಜಾನೆ ಸುಮಾರು 4 ಗಂಟೆಗೆ ಸ್ಯಾಮ್ ಆಲ್ಟ್‌ಮನ್ ಅವರ $65 ಮಿಲಿಯನ್ ಮೌಲ್ಯದ ಐಷಾರಾಮಿ ಬಂಗಲೆಗೆ ಬಂದ ಅಪರಿಚಿತ ಯುವಕ, ಮನೆಯ ಹೊರಗಿನ ಗೇಟ್‌ಗೆ ಉರಿಯುತ್ತಿರುವ ಪೆಟ್ರೋಲ್ ಬಾಂಬ್ ಎಸೆದಿದ್ದಾನೆ. ಇದರಿಂದ ಗೇಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ಮನೆಯ ಮೇಲೆ ದಾಳಿ ನಡೆಸಿದ ಕೇವಲ ಒಂದು ಗಂಟೆಯೊಳಗೆ, ಅದೇ ಆರೋಪಿಯು ಓಪನ್‌ಎಐ ಕಂಪನಿಯ ಪ್ರಧಾನ ಕಚೇರಿಗೂ ತೆರಳಿ, ಕಟ್ಟಡಕ್ಕೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಸ್ಯಾನ್ ಫ್ರಾನ್ಸಿಸ್ಕೋ ಪೊಲೀಸರು, ಕಚೇರಿ ಬಳಿ ಬೆದರಿಕೆ ಹಾಕುತ್ತಿದ್ದ ವ್ಯಕ್ತಿಯೇ ಆಲ್ಟ್‌ಮನ್ ಮನೆ ಮೇಲೆ ದಾಳಿ ಮಾಡಿದವನು ಎಂದು ಗುರುತಿಸಿ ತಕ್ಷಣವೇ ಬಂಧಿಸಿದ್ದಾರೆ.








