ಬೆಂಗಳೂರು: ಭಾರತವನ್ನು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ವಿಕಸಿತ ಭಾರತವಾಗಿ ನೋಡುವ ನಿಟ್ಟಿನಲ್ಲಿ ನರೇಂದ್ರ ಮೋದಿಜೀ ಅವರು ಸಂಕಲ್ಪ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಅಭಿಪ್ರಾಯಪಟ್ಟರು.
ಬೆಳಗಾವಿಯಲ್ಲಿ ಇಂದು ಪ್ರಬುದ್ಧರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಲಕ್ಷಗಟ್ಟಲೆ ಹಳ್ಳಿಗಳಿಗೂ ನೀರು, ವಿದ್ಯುತ್ ಮತ್ತು ಮನೆಗಳ ವ್ಯವಸ್ಥೆಯನ್ನು ನರೇಂದ್ರ ಮೋದಿಜೀ ಅವರು ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು. ಹಿಂದೆ ಈ ಮೂಲಸೌಕರ್ಯಗಳು ಕೇವಲ ಕನಸಾಗಿದ್ದವು ಎಂದು ನುಡಿದರು.
2014ರಲ್ಲಿ ಬಿಜೆಪಿ ದೇಶದ ಅಧಿಕಾರ ವಹಿಸಿಕೊಂಡಾಗ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯ ಇರಲಿಲ್ಲ. ಕೇವಲ ಒಂದು ಸಾವಿರ ದಿನಗಳಲ್ಲಿ ಈ ಸೌಕರ್ಯ ನೀಡುವುದಾಗಿ ತಿಳಿಸಿದ ಪ್ರಧಾನಿ ಮೋದಿಯವರು ಅದನ್ನು ಸಕಾಲದಲ್ಲಿ ಈಡೇರಿಸಿದರು ಎಂದು ವಿವರಿಸಿದರು. ಲಕ್ಷಾಂತರ ಮನೆಗಳಿಗೂ ವಿದ್ಯುತ್ ಸೌಲಭ್ಯ ನೀಡಲಾಗಿದೆ ಎಂದರು.
ಜಲ್ ಜೀವನ್ ಯೋಜನೆಯಡಿ 11 ಕೋಟಿ ನಳ್ಳಿ ನೀರಿನ ಸಂಪರ್ಕ ಕೊಡಲಾಗಿದೆ. ಹಿಂದೆ ಮಹಿಳೆಯರು ಕಿಲೋಮೀಟರ್‍ಗಟ್ಟಲೆ ನಡೆದು ನೀರು ತರಬೇಕಿತ್ತು ಎಂದು ವಿವರಿಸಿದರು. ಶೌಚಕ್ರಿಯೆಗಾಗಿ ಮಹಿಳೆಯರು ಹಿಂದೆ ಸೂರ್ಯೋದಯಕ್ಕೆ ಮೊದಲು ಅಥವಾ ಸೂರ್ಯಾಸ್ತದ ಬಳಿಕ ಅರಣ್ಯ ಮತ್ತಿತರ ಕಡೆ ಹೊರಕ್ಕೆ ಹೋಗಬೇಕಿತ್ತು. ಮಹಿಳೆಯರಿಗೆ ಘನತೆ ಹೆಚ್ಚಿಸುವ ಉದ್ದೇಶದಿಂದ 12 ಕೋಟಿ ಶೌಚಾಲಯಗಳನ್ನು ಮೋದಿಜೀ ಅವರ ಸರಕಾರ ನಿರ್ಮಿಸಿ ಕೊಟ್ಟಿದೆ ಎಂದು ತಿಳಿಸಿದರು.
ಮಹಿಳೆಯರು ಹಿಂದೆ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಬೇಕಿತ್ತು. ಅದು ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿತ್ತು. ಆ ಸಮಸ್ಯೆಯನ್ನು ನಿವಾರಿಸಲಾಗಿದೆ ಎಂದು ತಿಳಿಸಿದರು. ಮೊಬೈಲ್ ಉತ್ಪಾದನೆ, ಸ್ಟಾರ್ಟಪ್, ಔಷಧಿ ರಫ್ತು, ರಕ್ಷಣಾ ಕ್ಷೇತ್ರದಲ್ಲಿನ ಉತ್ಪನ್ನಗಳ ರಫ್ತು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತದ ಅದ್ವಿತೀಯ ಸಾಧನೆಯನ್ನು ಅವರು ವಿವರಿಸಿದರು.
ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ, ನಾಡಿನ ಜನತೆ ಮತ್ತು ದೇಶದ ಜನತೆ ಬಿಜೆಪಿಯನ್ನು ಬೆಂಬಲಿಸುವುದು ಖಚಿತ; ಸೂರ್ಯ ಚಂದ್ರರಿರುವುದು ಎಷ್ಟು ಸತ್ಯವೋ ಬಿಜೆಪಿಯು ನರೇಂದ್ರ ಮೋದಿಜೀ ಅವರ ನೇತೃತ್ವದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಏರುವುದು ಅಷ್ಟೇ ಸತ್ಯ ಎಂದು ನುಡಿದರು.
ಪಕ್ಷದ ಮುಖಂಡರು, ಪಕ್ಷದ ಶಾಸಕರು ಹಾಗೂ ಪ್ರಮುಖರು, ವಿವಿಧ ಕ್ಷೇತ್ರಗಳ ಆಹ್ವಾನಿತರು ಉಪಸ್ಥಿತರಿದ್ದರು.
Watch Video: ‘ಬರಗಾಲ’ದಲ್ಲೂ ಖುಲಾಯಿಸಿದ ‘ರೈತ’ನ ಅದೃಷ್ಠ: ‘ಬೇಸಿಗೆ’ಯಲ್ಲೂ ಬೋರಲ್ಲಿ 45 ಅಡಿಗೆ ‘2.5 ಇಂಚು’ ನೀರು