ಬೆಂಗಳೂರು: ಮುಸ್ಲಿಮರಿಗೆ ರಂಜಾನ್ ಕಿಟ್ ಘೋಷಣೆ ಮಾಡಿರುವ ಮೋದಿ ಅವ್ರೇ, ಹಿಂದೂಗಳಿಗೆ ಯುಗಾದಿ ಕಿಟ್ ಯಾವಾಗ ಕೊಡ್ತೀರೀ? ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನಿಸಿದ್ದಾರೆ.
ಸದಾ ಧರ್ಮದ ಆಧಾರದಲ್ಲಿ ರಾಜಕಾರಣ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮುಸ್ಲಿಮರಿಗೆ ರಂಜಾನ್ ಕಿಟ್ ಕೊಟ್ಟಿರುವುದಕ್ಕೆ ಸ್ವಾಗತ. ಅದೇ ರೀತಿ ದೇಶದಲ್ಲಿರುವ ಎಲ್ಲ ಹಿಂದೂಗಳು ಯುಗಾದಿ ಕಿಟ್ ನಿರೀಕ್ಷೆಯಲ್ಲಿದ್ದಾರೆ. ನೀವು ಆದಷ್ಟು ಬೇಗ ಯುಗಾದಿ ಕಿಟ್ ಘೋಷಣೆ ಮಾಡಿ ಬಹುಸಂಖ್ಯಾತ ಹಿಂದೂಗಳ ಹಬ್ಬದ ಸಂಭ್ರಮವನ್ನು ಹೆಚ್ಚಿಸಿ ಎಂದು ಸಲಹೆ ನೀಡಿದ್ದಾರೆ.
ಧರ್ಮದ ಆಧಾರದಲ್ಲಿ ಚುನಾವಣೆ ಎದುರಿಸುತ್ತಾ ಮುಸ್ಲಿಂ ದ್ವೇಷ ಕಾರುವ ಬಿಜೆಪಿ, ಈಗ ಕಿಟ್ ಕೊಟ್ಟು ಮುಸ್ಲಿಮರ ಓಲೈಕೆಗೆ ಮುಂದಾಗಿದೆ. ಅದೇ ರಾಜ್ಯದಲ್ಲಿ ಬಿಜೆಪಿ ನಾಯಕರು ರಾಜ್ಯ ಬಜೆಟ್ ಅನ್ನು ಹಲಾಲ್ ಬಜೆಟ್ ಎಂದು ಟೀಕೆ ಮಾಡ್ತಾರೆ. ಇಂತಹ ಡಬಲ್ ಸ್ಟಾಂಡರ್ಡ್ ಮನಸ್ಥಿತಿಯನ್ನು ಬಿಜೆಪಿ ನಾಯಕರು ಬಿಟ್ಟರೆ ಒಳ್ಳೆಯದು ಎಂದಿದ್ದಾರೆ.
ನಮ್ಮ ಸರಕಾರ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರು ಎಲ್ಲರ ಪರವಾಗಿ ಯೋಜನೆಗಳನ್ನು ರೂಪಿಸುತ್ತಿದೆ. ಇದನ್ನು ಸಹಿಸದ ಬಿಜೆಪಿ ನಾಯಕರು ನಮ್ಮ ಯೋಜನೆಗಳನ್ನು ಟೀಕೆ ಮಾಡ್ತಾರೆ. ಆದರೆ, ಒಂದು ಕಡೆ ಮುಸ್ಲಿಂ ದ್ವೇಷ ಹರಡುತ್ತಾರೆ. ಮತ್ತೊಂದು ಕಡೆ ಓಲೈಕೆ ಮಾಡ್ತಾರೆ. ಇಂತಹ ದ್ವಂದ್ವ ನೀತಿಯನ್ನು ಬಿಜೆಪಿ ದೇಶದಲ್ಲಿ ಬಿತ್ತುತ್ತಿದೆ ಎಂದು ಆರೋಪಿಸಿದ್ದಾರೆ.
ಪ್ರಧಾನಿ @narendramodi ಜೀ ಅವರು 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಈದ್ ಕಿಟ್ ನೀಡಲು ಘೋಷಿಸಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ.
ಪವಿತ್ರ ರಂಜಾನ್ ಸಮಯದಲ್ಲಿ ಮುಸ್ಲಿಂಮರಿಗೆ ಈದ್ ಕಿಟ್ ಕೊಡುತ್ತಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ, ಆದರೆ ಕಾಂಗ್ರೆಸ್ ನವರು ಇದನ್ನು ಮಾಡಿದ್ದರೆ, ತುಷ್ಠೀಕರಣ ರಾಜಕಾರಣ, ಒಂದು ಸಮುದಾಯವನ್ನು ಮಾತ್ರ… pic.twitter.com/8k2HKIH5Oi
— Ramalinga Reddy (@RLR_BTM) March 27, 2025
ಮುಸ್ಲಿಮರಿಗೆ ಹಬ್ಬದ ಕೊಡುಗೆ ನೀಡಿರುವ ಪ್ರಧಾನಿ ಮೋದಿ ಅವರು, ರಾಜ್ಯದ ಬಿಜೆಪಿ ನಾಯಕರಿಗೆ ಮುಸ್ಲಿಂ ದ್ವೇಷ ಬಿಡುವಂತೆ ಸಲಹೆ ನೀಡಲಿ, ಹಲಾಲ್ ಬಜೆಟ್ ಎಂದಿದ್ದಕ್ಕೆ ಬಿಜೆಪಿ ನಾಯಕರು ಕ್ಷಮೆ ಕೋರುವಂತೆ ಸೂಚನೆ ನೀಡಲಿ, ಹಾಗೆಯೇ ಹಿಂದೂಗಳಿಗೂ ಯುಗಾದಿ ಕಿಟ್ ಘೋಷಿಸಿ, ಹಿಂದೂಗಳು ಖುಷಿಯಿಂದ ಹಬ್ಬ ಆಚರಿಸುವಂತೆ ಮಾಡಲಿ ಎಂದು ಒತ್ತಾಯಿಸಿದ್ದಾರೆ.
ನರೇಂದ್ರ ಮೋದಿ ಅವರೇ, ನೀವು 2024 ರ ಲೋಕಸಭೆ ವೇಳೆ ಮಟನ್, ಮೊಘಲ್, ಮಂಗಳಸೂತ್ರ ಮತ್ತು ಮುಜ್ರಾ ಎಂಬುವ ಮೂಲಕ ಕೋಮುದ್ವೇಷ ಹರಡಿದ್ದನ್ನು ದೇಶದ ಜನತೆ ಮರೆತಿಲ್ಲ. ಮಾಂಸ ತಿನ್ನುವ ಬಹುಸಂಖ್ಯಾತ ಭಾರತೀಯರನ್ನು ಅವಮಾನಿಸಿ, ಎದುರಾಳಿ ಪಕ್ಷದವರನ್ನು ಮೊಘಲರ ಜತೆಗೆ ಹೋಲಿಕೆ ಮಾಡಿ, ಮುಸ್ಲಿಮರು ನಿಮ್ಮ ಮಂಗಳಸೂತ್ರವನ್ನು ಕಿತ್ತುಕೊಳ್ಳುತ್ತಾರೆ ಎಂಬ ಭಯವನ್ನು ಬಿತ್ತಿ, ಮುಜ್ರಾ ಮೂಲಕ ದಲಿತ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ ಕಿತ್ತು ಮುಸ್ಲೀಮರಿಗೆ ಕೊಡುತ್ತಾರೆ ಎಂದು ಸುಳ್ಳು ಹೇಳಿ ಗೆದ್ದಿರಿ. ಈಗ ಅದೇ ವರ್ಗದ ಓಲೈಕೆಗೆ ಕಿಟ್ ಕೊಡುತ್ತಿದ್ದೀರಿ, ಅದೇ ರೀತಿ ನಿಮ್ಮನ್ನು ನಂಬಿದ ಹಿಂದೂಗಳಿಗೂ ಯುಗಾದಿ ಹಬ್ಬಕ್ಕೆ ಕಿಟ್ ಕೊಡಿಸುವ ವ್ಯವಸ್ಥೆ ಮಾಡಿಸಿ ಎಂದು ಹೇಳಿದ್ದಾರೆ.
ಏ ಹಾಲಪ್ಪ 9,000 ಮುಳುಗಡೆ ರೈತರಿಗೆ ವಿಷ ಕೊಟ್ಟ ಪಾಪಿ ನೀನು: ಶಾಸಕ ಗೋಪಾಲಕೃಷ್ಣ ಬೇಳೂರು ವಾಗ್ಧಾಳಿ