ಚಿಕ್ಕೋಡಿ : ಪ್ರತಿ ಬಾರಿ ರಾಜ್ಯಕ್ಕೆ ಬಂದಾಗಲೆಲ್ಲಾ ಮೋದಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ. ಹೆಣ್ಣುಮಕ್ಕಳ ತಾಳಿ, ಕೈಬಳೆ ಬಗ್ಗೆ ಸುಳ್ಳು ಹೇಳ್ಕೊಂಡು ತಿರುಗೋ ಮೋದಿಯಿಂದ ಪ್ರಧಾನಿ ಹುದ್ದೆಗೆ ಮರ್ಯಾದೆ ಬರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಪ್ರಿಯಾಂಕ ಜಾರಕಿಹೊಳಿ ಅವರ ಗೆಲುವಿನ ಸಂದೇಶ ನೀಡಲು ಸಂಘಟಿಸಿದ್ದ ಪ್ರಜಾಧ್ವನಿ-2 ಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಇಷ್ಟೊಂದು ಸುಳ್ಳು ಹೇಳೋ ಮೋದಿಗೆ ನಾಚಿಕೆನೂ ಆಗಲ್ಲ. ಇವರಿಗೆ ಮಾನ ಮರ್ಯಾದೆನೂ ಇಲ್ಲ. ಯಪ್ಪಾ ಯಪ್ಪಾ ಯಪ್ಪಾ ಈ ಮೋದಿ ಯಾವ ಮಟ್ಟದ ಸುಳ್ಳು ಸೃಷ್ಟಿ ಮಾಡ್ತಾರಲ್ಲಾ ನಾಚ್ಕೆನೂ ಆಗಲ್ಲ ಎಂದು ಮೋದಿ ಅವರ ಸುಳ್ಳುಗಳನ್ನು ಪಟ್ಟಿ ಮಾಡಿದ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ಮುಂದುವರೆಸಿದರು.
ಕಿತ್ತೂರು ರಾಣಿ ಜಯಂತಿ ಆಚರಣೆಗೆ ಆದೇಶಿಸಿದ್ದು ನಾವು: ಬೊಮ್ಮಾಯಿ ಮಾಡ್ಲಿಲ್ಲ, ಯಡಿಯೂರಪ್ಪ ಮಾಡ್ಲಿಲ್ಲ. ನಾವು ಯಾವತ್ತೂ ಶಿವಾಜಿ ಮಹಾರಾಜರನ್ನು ಅವಮಾನಿಸಿಲ್ಲ. ಆದರೆ ಈ ಮೋದಿ ಅದೇನು ಸುಳ್ಳು ಹೇಳ್ತಾರೆ ನೋಡಿ. ಕಾಂಗ್ರೆಸ್ ನವರು ರಾಣಿ ಚನ್ನಮ್ಮರಿಗೆ ಮತ್ತು ಶಿವಾಜಿ ಮಹಾರಾಜರಿಗೆ ಅವಮಾನ ಮಾಡಿದ್ದೀವಿ ಎಂದು ಸುಳ್ಳು ಹೇಳ್ತೀರಲ್ಲಾ , ಸುಳ್ಳಿಗೆ ಒಂದು ಮಿತಿಯಾದರೂ ಬೇಡ್ವಾ ಮೋದಿ ಎಂದರು.
ಈಗ ಮೋದಿ ಹಿಂದುಳಿದ ಜಾತಿ ಸಮುದಾಯಗಳನ್ನು ಮುಸ್ಲೀಮರ ವಿರುದ್ಧ ಎತ್ತಿಕಟ್ಟಲು ಭಯನಾಕ ಸುಳ್ಳು ಸೃಷ್ಟಿಸಿದ್ದಾರೆ. ಹಿಂದುಳಿದವರ ಮೀಸಲಾತಿ ಕಿತ್ತು ಮುಸ್ಲೀಮರಿಗೆ ಕೊಡ್ತಾರೆ ಎನ್ನುವ ಭತಾನಕ ಸುಳ್ಳು ಹೇಳಿದ ಮೋದಿಯವರಿಗೆ ನಾಚಿಕೆ ಅನ್ನೋದೇ ಇಲ್ಲ ಎಂದರು.
ಪ್ರತಿ ಭಾರತೀಯರ ಖಾತೆಗೆ 15 ಲಕ್ಷ ಹಾಕ್ತೀವಿ ಎಂದು ನಂಬಿಸಿ ಪ್ರತಿ ಭಾರತೀಯರ ಹಣೆಗೆ ಮೂರು ನಾಮ ತಿಕ್ಕಿದ್ರು. ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀವಿ ಎಂದು ನಂಬಿಸಿ ಕೆಲಸ ಕೇಳಿದ್ರೆ ಪಕೋಡ ಮಾರಿ ಅಂತೀರಿ. ಥೂ ನಿಮಗೆ ನಾಚಿಕೆನೇ ಆಗಲ್ವಾ ಎಂದು ಪ್ರಶ್ನಿಸಿದರು.
ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಸ್ತೀವಿ ಅಂದ್ರಿ, ಇಳಿಸಿದ್ರಾ? ಬೆಲೆ ಏರಿಕೆ ತಡಿತೀವಿ ಅಂದ್ರಿ. ತಡೆದ್ರಾ ? ಪ್ರತೀ ಬಾರಿ ರಾಜ್ಯಕ್ಕೆ ಬರೋದು ಹೊಸ ಹೊಸ ಸುಳ್ಳು ಹೇಳಿ ಹೋಗೋದು.
ಇನ್ನೂ ಎಷ್ಟು ವರ್ಷ ಹಿಂದುಳಿದ ಜಾತಿ-ಸಮುದಾಯಗಳನ್ನು ನಂಬಿಸಿ ವಂಚಿಸ್ತೀರಿ? ಸುಳ್ಳು ಹೇಳ್ಕೊಂಡು ತಿರುಗ್ತೀರಿ ಎಂದು ಕೇಳಿದರು.
ನಾವು ಭಾರತೀಯರ ಬದುಕಿನ ಬಗ್ಗೆ ಮಾತಾಡ್ತೀವಿ
ಬಿಜೆಪಿ ಭಾರತೀಯರ ಭಾವನೆಗಳ ಜೊತೆ ಚೆಲ್ಲಾಟ ಆಡ್ಕೊಂಡು ಲಾಭ ಮಾಡಿಕೊಳ್ತಾರೆ. ಆದರೆ ನಾವು ಕಾಂಗ್ರೆಸ್ಸಿವರು ಜನರ ಬದುಕಿನ ಸಂಕಷ್ಟಗಳನ್ನು ಕಡಿಮೆ ಮಾಡಲು ಕಾರ್ಯಕ್ರಮ ರೂಪಿಸಿ ಜಾರಿ ಮಾಡಿದ್ದೇವೆ. ನುಡಿದಂತೆ ನಡೆದಿದ್ದೇವೆ. ಜನರಿಗೆ ಕೊಟ್ಟ ಮಾತನ್ನು ಈಡೇರಿಸಿದ ನೈತಿಕತೆಯಿಂದ ನಾವು ನಿಮ್ಮ ಮುಂದೆ ಬಂದು ಮತ ಕೇಳುತ್ತಿದ್ದೇವೆ.
ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಪ್ರತೀ ವರ್ಷ ಮಹಿಳಾ ಯಜಮಾನಿಯ ಖಾತೆಗೆ ಒಂದು ಲಕ್ಷ ರೂಪಾಯಿ ಜಮೆ ಆಗತ್ತೆ.
ಇಡೀ ದೇಶದ ರೈತರ ಸಾಲ ಮನ್ನಾ ಆಗತ್ತೆ.
ನಿರುದ್ಯೋಗಿ ಯುವಕ ಯುವತಿಯರಿಗೆ ಲಕ್ಷ ರೂಪಾಯಿ ಸಿಗತ್ತೆ.
ಸ್ವಾಮಿನಾಥನ್ ವರದಿಯಂತೆ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಜಾರಿ ಆಗತ್ತೆ. ಇದಕ್ಕಾಗಿ ಕಾಯ್ದೆ ಮಾಡ್ತೀವಿ.
ಇಂತಹ 25 ಗ್ಯಾರಂಟಿಗಳಿಗೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಸಹಿ ಹಾಕಿದ್ದಾರೆ.
ಹೀಗಾಗಿ ಸುಳ್ಳುಗಳ ಮೂಲಕ ನಿಮಗೆ ಬಕ್ರಾ ಮಾಡುವ ಮೋದಿಗೆ ಮತ ಹಾಕ್ತೀರೋ, ನುಡಿದಂತೆ ನಡೆದ ನಮಗೆ ಮತ ಹಾಕ್ತೀರೋ ತೀರ್ಮಾನಿಸಿ ಎಂದು ಕರೆ ನೀಡಿದರು.
ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ , ಬೈರತಿ ಸುರೇಶ್, ಮಾಜಿ ಸಚಿವರಾದ ವಿನಯ್ ಕುಲಕರ್ಣಿ ಹಾಗೂ ಜಿಲ್ಲೆಯ ಶಾಸಕರು ಮತ್ತು ಮುಖಂಡರುಗಳು ಉಪಸ್ಥಿತರಿದ್ದರು.