ನವದೆಹಲಿ: 1975 ರಲ್ಲಿ ತುರ್ತು ಪರಿಸ್ಥಿತಿ ಹೇರಿದ ದಿನವಾದ ಜೂನ್ 25 ಅನ್ನು ‘ಸಂವಿಧಾನ್ ಹತ್ಯಾ ದಿವಸ್’ ಎಂದು ಘೋಷಿಸುವ ಕೇಂದ್ರದ ಕ್ರಮವನ್ನು ವಿರೋಧ ಪಕ್ಷಗಳು ಶುಕ್ರವಾರ ಟೀಕಿಸಿವೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಕ್ಸ್ ಚಾನೆಲ್ ನಲ್ಲಿ ಪೋಸ್ಟ್ ಮಾಡಿ, ಅಪನಗದೀಕರಣ, ದಲಿತರ ವಿರುದ್ಧ “ಬುಲ್ಡೋಜರ್ ನ್ಯಾಯ” – ಹೀಗೆ ಹಲವಾರು ವಿಷಯಗಳನ್ನು ಎತ್ತಿದರು ಮತ್ತು “ಕಳೆದ 10 ವರ್ಷಗಳಲ್ಲಿ, ನಿಮ್ಮ ಸರ್ಕಾರವು ಪ್ರತಿದಿನ ‘ಸಂವಿಧಾನ ಕೊಲೆ ದಿನ’ ಆಚರಿಸುತ್ತಿದೆ ಎಂದು ಮೋದಿಗೆ ಹೇಳಿದರು.
ಮಹಾತ್ಮಾ ಗಾಂಧಿ ಹತ್ಯೆಯಾದ ದಿನವಾದ ಜನವರಿ 30ನ್ನು ‘ಗಾಂಧಿ ಹತ್ಯಾ ದಿವಸ್’ ಎಂದು ಘೋಷಿಸುವಂತೆ ಆರ್ಜೆಡಿಯ ಮನೋಜ್ ಝಾ ಬಿಜೆಪಿ ಸರ್ಕಾರಕ್ಕೆ ಸಲಹೆ ನೀಡಿದರು.
ಈ ವರ್ಷದ ಜನವರಿ 30 ರಂದು “ಚಂಡೀಗಢದಲ್ಲಿ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಕ್ರಮ ನಡೆಸಿದೆ” ಮತ್ತು ಈ ದಿನವನ್ನು “ಲೋಕತಂತ್ರ (ಪ್ರಜಾಪ್ರಭುತ್ವ) ಹತ್ಯಾ ದಿವಸ್” ಎಂದು ಗುರುತಿಸಬೇಕು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ನೆನಪಿಸಿದರು.
ಪ್ರಧಾನಿಯನ್ನು ಗುರಿಯಾಗಿಸಿಕೊಂಡು ಟ್ವೀಟ್ ಮಾಡಿರುವ ಖರ್ಗೆ, “ನೀವು (ಮೋದಿ) ದೇಶದ ಪ್ರತಿ ಬಡ ಮತ್ತು ವಂಚಿತ ವರ್ಗದ ಸ್ವಾಭಿಮಾನವನ್ನು ಪ್ರತಿ ಕ್ಷಣವೂ ಕಸಿದುಕೊಂಡಿದ್ದೀರಿ. ಮಧ್ಯಪ್ರದೇಶದಲ್ಲಿ ಬಿಜೆಪಿ ನಾಯಕರೊಬ್ಬರು ಬುಡಕಟ್ಟು ಜನರ ಮೇಲೆ ಮೂತ್ರ ವಿಸರ್ಜನೆ ಮಾಡಿದಾಗ ಅಥವಾ ಉತ್ತರ ಪ್ರದೇಶದ ಹತ್ರಾಸ್ನ ದಲಿತ ಮಗಳನ್ನು ಪೊಲೀಸರು ಬಲವಂತವಾಗಿ ಅಂತ್ಯಕ್ರಿಯೆ ಮಾಡಿದಾಗ… ಇದು ಸಂವಿಧಾನದ ಕೊಲೆಯಲ್ಲದೆ ಮತ್ತೇನು? ” ಎಂದು ಪ್ರಶ್ನಿಸಿದ್ದಾರೆ.