ಚೆನ್ನೈ: ತಮಿಳುನಾಡಿನ ಚುನಾವಣಾ ಅಖಾಡದಲ್ಲಿ ರಾಜಕೀಯ ಕಿಡಿ ಜೋರಾಗಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಯಂತ್ರಣದಲ್ಲಿದ್ದಾರೆ ಮತ್ತು ತಮಿಳುನಾಡಿನಲ್ಲಿ ಬಿಜೆಪಿ ತನ್ನದೇ ಆದ ‘ಕೈಗೊಂಬೆ’ ಮುಖ್ಯಮಂತ್ರಿಯನ್ನು ಕೂರಿಸಲು ಸಂಚು ರೂಪಿಸಿದೆ ಎಂದು ಅವರು ಆರೋಪಿಸಿದ್ದಾರೆ.
“ಭಾರತದ ಪ್ರಧಾನಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಯಂತ್ರಿಸುತ್ತಿದ್ದಾರೆ. ಮೋದಿಯವರು ಸ್ವತಂತ್ರವಾಗಿ ಕೆಲಸ ಮಾಡುತ್ತಿಲ್ಲ, ಬದಲಿಗೆ ಅಮೆರಿಕದ ಹಿತಾಸಕ್ತಿಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ” ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.
ತಮಿಳುನಾಡಿನ ಸಂಸ್ಕೃತಿ ಮತ್ತು ಇತಿಹಾಸವನ್ನು ಬಿಜೆಪಿ ಗೌರವಿಸುತ್ತಿಲ್ಲ. ತಮಿಳು ಜನರ ಮೇಲೆ ನಾಗ್ಪುರದ (RSS) ಸಿದ್ಧಾಂತವನ್ನು ಹೇರಲು ದೆಹಲಿಯಿಂದ ನಿಯಂತ್ರಿಸಲ್ಪಡುವ ‘ಕೈಗೊಂಬೆ’ ಸರ್ಕಾರವನ್ನು ತರಲು ಬಿಜೆಪಿ ಯತ್ನಿಸುತ್ತಿದೆ ಎಂದು ಅವರು ದೂರಿದ್ದಾರೆ.
“ತಮಿಳುನಾಡಿನ ಜನರು ತಮ್ಮ ಮುಖ್ಯಮಂತ್ರಿಯನ್ನು ತಾವೇ ಆಯ್ಕೆ ಮಾಡಬೇಕು, ದೆಹಲಿಯವರಲ್ಲ. ಆದರೆ ಬಿಜೆಪಿ ಇಲ್ಲಿನ ಆಡಳಿತವನ್ನು ಹೈಜಾಕ್ ಮಾಡಲು ಹೊರಟಿದೆ” ಎಂದು ಅವರು ಎಚ್ಚರಿಸಿದ್ದಾರೆ.








