ಚಿತ್ರದುರ್ಗ: ಶುಭಸಮಾರಂಭ, ಧಾರ್ಮಿಕ ಕಾರ್ಯಗಳಿಗೆ ನೀತಿಸಂಹಿತೆ ಅಡ್ಡಿಯಾಗಲ್ಲ ಎಂಬುದಾಗಿ ಚುನಾವಣಾ ಆಯೋಗವು ಸ್ಪಷ್ಟ ಪಡಿಸಿದೆ. ಈ ಮೂಲಕ ಲೋಕಸಭಾ ಚುನಾವಣೆ ನೀತಿ ಸಂಹಿತೆ ಎಫೆಕ್ಟ್ ಆತಂಕದಲ್ಲಿದ್ದಂತ ಶುಭ ಸಮಾರಂಭ ನಡೆಸೋರಿಗೆ, ಧಾರ್ಮಿಕ ಕಾರ್ಯದಲ್ಲಿ ನಿರತರಾದವರಿಗೆ ಬಿಗ್ ರಿಲೀಫ್ ನೀಡಿದೆ.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಕುರಿತು ಮಾತನಾಡಿದಂತ ಚಿತ್ರದುರ್ಗ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಅವರು, ಮಾದರಿ ಚುನಾವಣೆ ನೀತಿ ಸಂಹಿತೆ ಎನ್ನುವುದು ರಾಜಯಕೀಯ ಪಕ್ಷಗಳು, ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು ಹಾಗೂ ಸರ್ಕಾರಿ ನೌಕರರಿಗೆ ಅನ್ವಯಿಸುತ್ತದೆ. ಸಾರ್ವಜನಿಕರರಿಗೆ ಯಾವುದೇ ನಿರ್ಬಂಧವಿಲ್ಲ. ಮದುವೆ ಸೇರಿದಂತೆ ಯಾವುದೇ ಕೌಟುಂಬಿಕ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲು ಚುನಾವಣಾಧಿಕಾರಿಗಳ ಅನುಮತಿ ಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.
ಯಾವುದೇ ಧಾರ್ಮಿಕ ಆಚಾರ-ವಿಚಾರ, ಸಂಪ್ರದಾಯಗಳಿಗೆ ಮಾದರಿ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಇದಕ್ಕೆ ಅನುಮತಿ ಪಡೆಯುವ ಅಗತ್ಯವೂ ಇಲ್ಲ. ಆದರೆ ಧಾರ್ಮಿಕ ಆಚರಣೆಗಳು ರಾಜಕೀಯ ಕಾರ್ಯಕ್ರಮಗಳಾಗಿ ಪರಿವರ್ತನೆಯಾಗಬಾರದು. ರಾಜಕೀಯ ಕಾರ್ಯಕ್ರಮವಾಗಿ ಪರಿವರ್ತನೆಯಾದರೆ ಅದು ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ ಎಂದು ಹೇಳಿದರು.
ಚುನಾವಣಾ ಕಾರ್ಯ ಜೊತೆಗೆ ಚುನಾವಣಾ ನೀತಿ ನಿಯಮಗಳಿಗೆ ಬದ್ಧವಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗದಂತೆ ಹಾಗೂ ಜಿಲ್ಲೆಯ ಬರ ಪರಿಹಾರ ಕಾರ್ಯವನ್ನೂ ನಿರ್ವಹಿಸಬೇಕಿದೆ ಎಂದರು.
ಮಾದರಿ ನೀತಿ ಸಂಹಿತೆ ಜಾರಿಗೆ ಸಂಬಂಧಪಟ್ಟಂತೆ ಈಗಾಗಲೇ ಮಾರ್ಚ್ 16 ರಿಂದಲೇ ಪ್ರಚಾರಕ್ಕೆ ಬಳಸಿದಂತಹ ಪೋಸ್ಟರ್ಸ್, ಬ್ಯಾನರ್ಸ್, ಬಂಟಿಂಗ್ಸ್‍ಗಳನ್ನು ಇತ್ಯಾದಿಗಳನ್ನು ತೆರವುಗೊಳಿಸಲಾಗಿದೆ. ಇದಕ್ಕಾಗಿ ಎಫ್‍ಎಸ್‍ಟಿ, ಎಸ್‍ಎಸ್‍ಟಿ, ವಿವಿಟಿ ಸೇರಿದಂತೆ ಬೇರೆ ಬೇರೆ ತಂಡಗಳನ್ನು ರಚನೆ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಪ್ರತಿ ತಾಲ್ಲೂಕಿಗೆ ತಾ.ಪಂ ಇಒ ಹಂತದಲ್ಲಿ ನೋಡಲ್ ಅಧಿಕಾರಿಗಳಾಗಿ, ನಗರ ವ್ಯಾಪ್ತಿಯಲ್ಲಿ ನಗರಸಭೆ, ಮುಖ್ಯಾಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ, ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗುತ್ತಿದೆ. ಇದರ ಜೊತೆಗೆ ಜಿಲ್ಲೆಯಾದ್ಯಂತ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದ ಅವರು, ಮಾದರಿ ನೀತಿ ಸಂಹಿತೆ ಜಾರಿ ಜತೆ ಜತೆಗೆ ಚುನಾವಣಾ ಕಾರ್ಯವನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಹೇಳಿದರು.
87 ಪ್ರಕರಣ ದಾಖಲು
ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ 87 ಪ್ರಕರಣಗಳನ್ನು ದಾಖಲಿಸಲಾಗಿದೆ. ಉಚಿತ ಕೊಡುಗೆ, ಮಾದರಿ ನೀತಿ ಸಂಹಿತೆ ಉಲಂಘನೆ, ಹಣ ಜಪ್ತಿಯ ತಲಾ ಒಂದು ಪ್ರಕರಣ ಹೊರತು ಪಡಿಸಿದರೆ ಹೆಚ್ಚಿನ ಪ್ರಕರಣಗಳು ಅಬಕಾರಿ ಇಲಾಖೆಗೆ ಸಂಬಂಧಿಸಿವೆ. ಬುಧವಾರ ಮೊಳಕಾಲ್ಮೂರು ತಾಲ್ಲೂಕಿನಲ್ಲಿ ರೂ.1.60 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ದಾಖಲಾತಿ ಇಲ್ಲದೆ ಹಣವನ್ನು ಮಾತ್ರ ವಶಪಡಿಸಿಕೊಳ್ಳಲಾಗುವುದು. ಈ ರೀತಿ ವಶಪಡಿಸಿಕೊಂಡ ಹಣವನ್ನು ಜಿ.ಪಂ.ಸಿಇಓ ಅಧ್ಯಕ್ಷತೆಯಲ್ಲಿನ ಹಣ ಜಪ್ತಿ ಸಮಿತಿ ಸುಪರ್ಧಿಗೆ ನೀಡಲಾಗುವುದು. ಹಣದ ಮೂಲದ ಬಗ್ಗೆ ಸೂಕ್ತ ದಾಖಲೆಯನ್ನು ಪ್ರಸ್ತುತ ಪಡಿಸಿದರೆ ಹಣವನ್ನು ಹಿಂದಿರುಗಿಸಲಾಗುವುದು. ಯಾವುದೇ ದಾಖಲೆ ನೀಡಲು ವಿಫಲವಾದರೆ ಸರ್ಕಾರಕ್ಕೆ ಹಣ ಹೋಗುತ್ತದೆ ಎಂದು ತಿಳಿಸಿದರು.
ಮತದಾನ ಬಹಿಷ್ಕರಿಸದೆ, ಹಕ್ಕು ಚಲಾಯಿಸಲು ಮನವಿ
ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಯಾರು ಕೂಡ ಮತದಾನ ಬಹಿಷ್ಕಾರ ಮಾಡಬಾರದು. ಮತದಾನ ಬಹಿಷ್ಕರಿಸದೇ, ಹಕ್ಕು ಚಲಾಯಿಸಬೇಕು. ಮತದಾನ ಬಹಿಷ್ಕಾರ ಮಾಡಿ, ತಮ್ಮ ಹಕ್ಕನ್ನು ಮೊಟಕುಗೊಳಿಸಬಾರದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಜಿಲ್ಲೆಯ ಜನತೆಗೆ ಮನವಿ ಮಾಡಿದರು.
ಜಿಲ್ಲೆಯ ಯಾವುದೇ ಗ್ರಾಮದಲ್ಲಿಯೂ ಸಹ ಮತದಾನ ಬಹಿಷ್ಕಾರ ಕಾರ್ಯಕ್ಕೆ ಮುಂದಾಗಬಾರದು. ಮತದಾನದಿಂದ ಯಾರೂ ವಂಚಿತರಾಗಬಾರದು. ಪ್ರತಿಯೊಬ್ಬ ಅರ್ಹ ಮತದಾರರು ತಮ್ಮ ತಮ್ಮ ಹಕ್ಕನ್ನು ಚಲಾವಣೆ ಮಾಡುವುದರ ಮೂಲಕ ಪ್ರಜಾಪ್ರಭುತ್ವವನ್ನು ಸದೃಢಗೊಳಿಸಬೇಕು ಎಂದು ಹೇಳಿದರು.
ತುರ್ತ ಸ್ಪಂದನೆ ಸಹಾಯವಾಣಿ 112 ಕರೆ ಮಾಡಿ
ಗ್ರಾಮೀಣ ಭಾಗದಲ್ಲಿ ಬೀಟ್ ಪೊಲೀಸ್ ಕಾನ್ಸೆಟೇಬಲ್‍ಗಳು ವಾರದಲ್ಲಿ ಎರೆಡು ದಿನ ಬೀಟ್ ಸದಸ್ಯರ ಸಭೆ ಮಾಡುತ್ತಾರೆ. ಇದರ ಹೊರತಾಗಿಯೂ ಯಾವುದೇ ತುರ್ತ ಸಂದರ್ಭದಲ್ಲಿ ಸಹಾಯವಾಣಿ 112 ಕರೆ ಮಾಡಬಹುದು. 12 ನಿಮಿಷದ ಅವಧಿಯಲ್ಲಿ ಪೊಲೀಸರು ನೆರವಿಗೆ ಧಾವಿಸುತ್ತಾರೆ. ಜಿಲ್ಲೆಯ ಎಲ್ಲಾ ಚೆಕ್ ಪೊಸ್ಟ್‍ಗಳಲ್ಲಿ ಚುನಾವಣೆ ಆಯೋಗದ ನಿರ್ದೇಶನದಂತೆ ತಪಾಸಣೆ ಕಾರ್ಯ ನಡೆಸಲಾಗುತ್ತಿದೆ. ಸಾರ್ವಜನಿಕರು ತಮ್ಮ ವಾಹನಗಳನ್ನು ತಪಾಸಣೆ ಮಾಡುವುದನ್ನು ಅವಮಾನ ಎಂದು ಕೊಳ್ಳಬಾರದು. ಸಿಬ್ಬಂದಿಯೊಂದಿಗೆ ಸಹನೆಯಿಂದ ವರ್ತಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಾರ್ತಾಧಿಕಾರಿ ಆರ್.ಮಾರುತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ದಿನೇಶ ಗೌಡಗೆರೆ, ಪ್ರಧಾನ ಕಾರ್ಯದರ್ಶಿ ಎಸ್.ಸಿದ್ದರಾಜು ಸೇರಿದಂತೆ ಸ್ಥಳಿಯ,ಪ್ರಾದೇಶಿಕಪತ್ರಿಕೆಗಳ ಸಂಪಾದಕರು,ರಾಜ್ಯಮಟ್ಟದ ಪತ್ರಿಕೆಗಳ ಜಿಲ್ಲಾ ಹಾಗು ತಾಲ್ಲೂಕು ವರದಿಗಾರರು,ಛಾಯಾಗ್ರಾಹಕರು ಸಂವಾದದಲ್ಲಿ ಭಾಗಿಯಾಗಿದ್ದರು.