ಶಿವಮೊಗ್ಗ: ಮಾನವರಿಗೆ ಹೇಗೆ ಜೀವಿಸುವ ಹಕ್ಕಿದಿಯೋ ಹಾಗೆಯೇ ಮರ-ಗಿಡಗಳಿಗೂ ಜೀವಿಸುವ ಹಕ್ಕಿದ್ದು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರಾದ ಬಿ ಹೆಚ್ ಕೃಷ್ಣಪ್ಪ ನುಡಿದರು.
ಜೂ.5 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಆವರಣದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಹಕ್ಕುಗಳ ಉಲ್ಲಂಘನೆಯಾದಲ್ಲಿ ನ್ಯಾಯಾಲಯದಲ್ಲಿ ದಾವೆ ಹಾಕುತ್ತೇವೆ. ಹಾಗೆಯೇ ಪರಿಸರ ಸಂರಕ್ಷಣೆ ಕಾರ್ಯವನ್ನು ನಮ್ಮಗಳ ಕರ್ತವ್ಯಗಳಲ್ಲಿ ಒಂದೆಂದು ಮಾಡಬೇಕು. ಪರಿಸರ ರಕ್ಷಿಸುವುದು ಸಮಾಜದ ಪ್ರತಿ ನಾಗರೀಕನ ಜವಾಬ್ದಾರಿಯಾಗಿದೆ. ಪ್ರಾಕೃತಿಕ ಸಂಪನ್ಮೂಲಗಳಾದ ನೆಲ, ಜಲ, ವಾಯುವನ್ನು ಶುದ್ಧವಾಗಿ ಸೇವಿಸುವ, ಸಂಸ್ಕರಿಸುವ ಹಾಗೂ ಮುಂದಿನ ಪೀಳಿಗೆಗೆ ವರ್ಗಾಯಿಸುವ ಮಹತ್ತರ ಜವಾಬ್ದಾರಿ ನಮ್ಮಗಳ ಮೇಲಿದೆ. ಪರಿಸರ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿ ಮಾತ್ರ ಆಗಿರದೇ ಭೂಮಿಯ ಮೇಲೆ ಜೀವಿಸುವ ಪ್ರತಿಯೊಬ್ಬ ಮಾನವನ ಕರ್ತವ್ಯ ಕೂಡ ಆಗಿದೆ.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ನಿರೂಪಣಾಧಿಕಾರಿ ಡಾ.ಸಂತೋಷ್ ಕುಮಾರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಯುವಜನತೆ ತಮ್ಮ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಳ್ಳುತ್ತಿದ್ದಾರೆ. ಇದರ ಬದಲಾಗಿ ಪ್ರತಿಯೊಬ್ಬರೂ ತಮ್ಮ ಹುಟ್ಟಿದ ದಿನದ ಪ್ರಯುಕ್ತವಾಗಿ ಒಂದೊಂದು ಗಿಡವನ್ನು ನೆಡುವುದರ ಮೂಲಕ ಆಚರಿಸಿದರೆ ಅರ್ಥಪೂರ್ಣವಾಗುತ್ತದೆ. ಅರಣ್ಯ ಇಲಾಖೆಯ ಕಾಯ್ದೆ ಪ್ರಕಾರ ಭಾರತದ ಭೂಪ್ರದೇಶಕ್ಕೆ ಶೇಕಡಾ 33 ರಷ್ಟು ಅರಣ್ಯದ ಅವಶ್ಯಕತೆ ಇದೆ. ಆದರೆ ಒಂದು ವರದಿಯ ಪ್ರಕಾರ 21% ಮಾತ್ರ ಇರುವುದು ಖೇದಕರ. ಕಾಡನ್ನು ಉಳಿಸಿ ನಾಡನ್ನು ಬೆಳೆಸಿ ಎಂಬ ಘೋಷವಾಕ್ಯದ ಬದಲಾಗಿ ಕಾಡನ್ನು ಬೆಳೆಸಿ ಪ್ರಾಣವನ್ನು ಉಳಿಸಿ ಎಂಬ ಸ್ಥಿತಿಗೆ ತಲುಪಿದ್ದೇವೆ. ಹಾಗಾಗಿ ಪರಿಸರ ದಿನಾಚರಣೆ ಕೇವಲ ಈ ಒಂದು ದಿನಕ್ಕೆ ಸೀಮಿತವಾಗದೆ ವರ್ಷಪೂರ್ತಿ ಆಚರಣೆ ಆಗಲಿ ಎಂದು ಆಶಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ ಮಾತನಾಡಿ, ಪರಿಸರ ಎಂದರೆ ಕೇವಲ ಮರ ಗಿಡಗಳನ್ನು ಬೆಳೆಸುವುದು ಮಾತ್ರವಲ್ಲ ಇದರೊಂದಿಗೆ ತನ್ನ ಸುತ್ತಮುತ್ತಲಿನ ಪರಿಸರ, ಮನೆ ಕಛೇರಿ ತಾನು ವಾಸಿಸುತ್ತಿರುವ ಸ್ಥಳದ ಸುತ್ತಮುತ್ತ ಸ್ವಚ್ಚವಾಗಿಟ್ಟುಕೊಳ್ಳುವುದು. ಜಲ, ನೆಲ ವಾಯುವನ್ನು ಮಿತವಾಗಿ ಬಳಸುವುದು. ಅನಾವಶ್ಯಕವಾಗಿ ವಾಹನಗಳನ್ನು ಚಲಾಯಿಸದಿರುವುದು ಹಾಗೂ ತನ್ನ ನಡವಳಿಕೆಯಲ್ಲಿ ಕೂಡ ಅದನ್ನು ಶಾಶ್ವತವಾಗಿ ಅಳವಡಿಸಿಕೊಳ್ಳುವುದರ ಮೂಲಕ ಪರಿಸರವನ್ನು ಸಂರಕ್ಷಿಸಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲಾ ಅಧೀನ ಕಚೇರಿಗಳ ಸಿಬ್ಬಂದಿ ವರ್ಗದವರು ಭಾಗವಹಿಸಿ ಗಿಡ ನೀಡುವುದರ ಮೂಲಕ ಸಂಭ್ರಮದಿಂದ ಪರಿಸರ ದಿನಾಚರಣೆಯನ್ನು ಆಚರಿಸಿದರು.
ಓದುಗರೇ ಗಮನಿಸಿ: ಉಚಿತವಾಗಿ ‘ಆಧಾರ್ ಕಾರ್ಡ್’ ಅಪ್ ಡೇಟ್ ಮಾಡಲು ಇದೇ ಕೊನೆ ದಿನ….!
ವಿಧಾನಸಭೆಯಿಂದ ವಿಧಾನಪರಿಷತ್ತಿಗೆ 11 ಅಭ್ಯರ್ಥಿಗಳು ಅವಿರೋಧ ಆಯ್ಕೆ: ಎಂ.ಕೆ ವಿಶಾಲಾಕ್ಷಿ ಮಾಹಿತಿ