ಬೆಂಗಳೂರು: ರಾಜ್ಯದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಫೋನ್ ಬಳಕೆ ಮತ್ತು ಸಾಮಾಜಿಕ ಜಾಲತಾಣಗಳ (Social Media) ಬಳಕೆಯನ್ನು ನಿರ್ಬಂಧಿಸುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ಬಗ್ಗೆ ಪೋಷಕರು ಮತ್ತು ತಜ್ಞರೊಂದಿಗೆ ಸಮಗ್ರವಾಗಿ ಚರ್ಚಿಸಿದ ಬಳಿಕವಷ್ಟೇ ಅಂತಿಮ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ಬಿಜೆಪಿಯ ಪ್ರತಾಪಸಿಂಹ ನಾಯಕ್ ಮತ್ತು ಜೆಡಿಎಸ್ನ ಟಿ.ಎನ್. ಜವರಾಯಿಗೌಡ ಅವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.ಶಾಲಾ ಆವರಣದಲ್ಲಿ ಮೊಬೈಲ್ ನಿಷೇಧದ ಬಗ್ಗೆ ಈಗಾಗಲೇ ಆದೇಶಗಳಿವೆಯಾದರೂ, ಶಾಲೆಯ ಹೊರಗೆ ಮಕ್ಕಳ ಮೊಬೈಲ್ ಬಳಕೆಯನ್ನು ನಿಯಂತ್ರಿಸುವುದು ಸವಾಲಿನ ಕೆಲಸವಾಗಿದೆ. ಹೀಗಾಗಿ ಪೋಷಕರ ಅಭಿಪ್ರಾಯ ಬಹಳ ಮುಖ್ಯ ಎಂದು ಸಚಿವರು ಅಭಿಪ್ರಾಯಪಟ್ಟರು.
ವಯಸ್ಸಿನ ಮಿತಿ
ವಿಶೇಷವಾಗಿ 16 ವರ್ಷದೊಳಗಿನ ಮಕ್ಕಳ ಮೇಲೆ ಈ ನಿಯಮಗಳು ಕೇಂದ್ರೀಕೃತವಾಗಿರಲಿವೆ.ಇಂದಿನ ದಿನಗಳಲ್ಲಿ ಮೊಬೈಲ್ ಬಳಕೆ ಅನಿವಾರ್ಯವಾಗಿದೆ. ಆದರೆ, ಅದರಲ್ಲಿ ಒಳ್ಳೆಯದಕ್ಕಿಂತ ಹೆಚ್ಚಾಗಿ ಬೇಡದ ವಿಷಯಗಳೇ ಹೆಚ್ಚು ಸಿಗುತ್ತಿವೆ. ಇದು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿರುವುದನ್ನು ಸರ್ಕಾರ ಗಮನಿಸಿದೆ.
ಮಾದರಿ ನಿಯಮ
ಸ್ವಲ್ಪ ವಿಳಂಬವಾದರೂ ಪರವಾಗಿಲ್ಲ, ಇಡೀ ದೇಶಕ್ಕೇ ಮಾದರಿಯಾಗುವಂತಹ ಉತ್ತಮ ನಿಯಮವನ್ನು ರೂಪಿಸಲು ಸರ್ಕಾರ ಸಿದ್ಧವಿದೆ. ಸದನದಲ್ಲಿ ಕಾನೂನು ಮಂಡಿಸುವಾಗ ಸದಸ್ಯರು ನೀಡುವ ಸಲಹೆಗಳನ್ನೂ ಸ್ವೀಕರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.








