ಶಿವಮೊಗ್ಗ: ಸಾರಿಗೆ ಸಂಪರ್ಕ ದುಸ್ತರವಾಗಿರುವ ಮಲೆನಾಡಿನ ಗುಡ್ಡಗಾಡು ಪ್ರದೇಶಗಳ ಜನರಿಗೆ ಸಂಚಾರಿ ಆರೋಗ್ಯ ಘಟಕವು ಸಂಜೀವಿನಿಯಾಗಿ ಪರಿಣಮಿಸಿದೆ. ಸಾಗರ ಮತ್ತು ಹೊಸನಗರ ತಾಲ್ಲೂಕುಗಳ ವ್ಯಾಪ್ತಿಯ ನೂರಾರು ಹಳ್ಳಿಗಳಲ್ಲಿ ಈ ಘಟಕವು ಮನೆಬಾಗಿಲಿಗೆ ಆರೋಗ್ಯ ಸೇವೆಯನ್ನು ತಲುಪಿಸುತ್ತಿದೆ. ಈ ಸಂಚಾರಿ ಆರೋಗ್ಯ ಘಟಕ ವಾಹನಕ್ಕೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದಂತ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸಾಗರ ತಾಲ್ಲೂಕಿನ ಕಾರ್ಗಲ್ ಸಮೀಪದ ಚೆನ್ನಗೊಂಡ, ಭಾನುಕುಳಿ ಪಂಚಾಯಿತಿ ವ್ಯಾಪ್ತಿಯ ಸುಮಾರು 66 ಹಳ್ಳಿಗಳಿಗೆ ಹಾಗೂ ತುಮರಿ ಭಾಗದ ಕಟ್ಟಿನಕಾರು, ಬ್ಯಾಕೋಡು ಭಾಗದ ಹೊಸಕೊಪ್ಪ, ಕುದರೂರು, ಶಂಕನಶಾನುಭೋಗ ಪಂಚಾಯಿತಿಗಳಿಗೆ ಸಂಬಂಧಿಸಿದ 49 ಹಳ್ಳಿಗಳಿಗೆ ಈ ಘಟಕವು ನಿರಂತರ ಸೇವೆ ನೀಡುತ್ತಿದೆ ಎಂದರು.
ಅದೇ ರೀತಿ, ಹೊಸನಗರ ತಾಲ್ಲೂಕಿನ ಯಡೂರು, ಸಂಪೆಕಟ್ಟೆ ಮತ್ತು ನಿಟ್ಟೂರು ಭಾಗದ 46 ಹಳ್ಳಿಗಳ ಜನರು ಈ ಯೋಜನೆಯ ಸದುಪಯೋಗ ಪಡೆಯುತ್ತಿದ್ದಾರೆ. ಸಾರಿಗೆ ವ್ಯವಸ್ಥೆ ಸಮರ್ಪಕವಾಗಿಲ್ಲದ ಮತ್ತು ದುರ್ಗಮ ಹಾದಿಯ ಹಳ್ಳಿಗಳೇ ಈ ಘಟಕದ ಉದ್ದೇಶ ಆಗಿದೆ ಎಂದು ಹೇಳಿದರು.
ಲಭ್ಯವಿರುವ ಪ್ರಮುಖ ಚಿಕಿತ್ಸೆಗಳು
ಈ ಸಂಚಾರಿ ಆರೋಗ್ಯ ಘಟಕವು ಕೇವಲ ಪ್ರಾಥಮಿಕ ಚಿಕಿತ್ಸೆಯಷ್ಟೇ ಅಲ್ಲದೆ, ಗಂಭೀರ ಆರೋಗ್ಯ ಸಮಸ್ಯೆಗಳ ಮೇಲ್ವಿಚಾರಣೆಯನ್ನೂ ಮಾಡಲಿದೆ.
- ತಾಯಿ-ಮಗು ಆರೈಕೆ: ಗರ್ಭಿಣಿ ಮತ್ತು ಬಾಣಂತಿಯರ ತಪಾಸಣೆ ಹಾಗೂ ರಕ್ತಹೀನತೆ ತಡೆಗಟ್ಟಲು ಕಬ್ಬಿಣಾಂಶದ ಮಾತ್ರೆಗಳ ವಿತರಣೆ.
- ಅಸಾಂಕ್ರಾಮಿಕ ರೋಗಗಳ ಪತ್ತೆ: ಬಿಪಿ (ರಕ್ತದೊತ್ತಡ), ಮಧುಮೇಹ (ಶುಗರ್) ಮತ್ತು ಕ್ಯಾನ್ಸರ್‌ನಂತಹ ರೋಗಗಳ ಆರಂಭಿಕ ಪತ್ತೆ ಹಚ್ಚುವಿಕೆ.
- ಔಷಧ ವಿತರಣೆ: ಬಿಪಿ ಮತ್ತು ಶುಗರ್ ಕಾಯಿಲೆಗೆ ನಿಯಮಿತವಾಗಿ ಮಾತ್ರೆಗಳ ನೀಡುವಿಕೆ.
- ಸಾಂಕ್ರಾಮಿಕ ರೋಗಗಳ ನಿಯಂತ್ರಣ: ಕ್ಷಯ ರೋಗ ಪತ್ತೆಗೆ ಕಫ ಸಂಗ್ರಹಣೆ ಹಾಗೂ ಕುಷ್ಠರೋಗದ ತಪಾಸಣೆ.
- ಜಾಗೃತಿ: ಜನರಲ್ಲಿ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು.
ದಕ್ಷ ತಂಡದ ಕಾರ್ಯಾಚರಣೆ
ಈ ಘಟಕದಲ್ಲಿ ಒಬ್ಬರು ವೈದ್ಯರು, ಶುಶ್ರೂಷಕರು (ನರ್ಸ್) ಹಾಗೂ ಲ್ಯಾಬ್ ಟೆಕ್ನೀಷಿಯನ್ ಕಾರ್ಯನಿರ್ವಹಿಸುತ್ತಿದ್ದು, ಸುಸಜ್ಜಿತ ವಾಹನದ ಮೂಲಕ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಜನಸಾಮಾನ್ಯರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆಸ್ಪತ್ರೆಗೆ ಬರಲು ಸಾಧ್ಯವಾಗದ ವೃದ್ಧರು ಹಾಗೂ ರೋಗಿಗಳಿಗೆ ಈ ‘ಮನೆಬಾಗಿಲ ಸೇವೆ’ ದೊಡ್ಡ ಆಸರೆಯಾಗಿದೆ.
ಈ ವೇಳೆ ಸಾಗರ ಉಪವಿಭಾಗ ಅಧಿಕಾರಿ ವೀರೇಶ್ ಕುಮಾರ್, ಟಿ.ವಿ ಪಾಂಡುರಂಗ, ಕೆ.ಎನ್ ನಾಗೇಂದ್ರ, ನಾಗರಾಜ್ ಗುಡ್ಡೇಮನೆ, ದಿನೇಶ್, ವೈದ್ಯರಾದ ಡಾ.ಶಿವಯೋಗಿ, ಸ್ಟಾಫ್ ನರ್ಸ್ ಅನಸೂಯ, ಲ್ಯಾಬ್ ಟೆಕ್ನೀಷಿಯನ್ ಕೇಶವಮೂರ್ತಿ, THO ಡಾ.ಶ್ರೀನಿವಾಸ್ ಎಸ್.ಎ, AMO ಡಾ.ಸುರೇಶ್.ಎಸ್, ಟಿಹೆಚ್ ಓ ಆಫೀಸ್ ಸಿಬ್ಬಂದಿಗಳಾದ ಸುಮಾ ಪಾಟೀಲ್, ನಾಗರಾಜ್, ಪ್ರಕಾಶ್, ಧರ್ಮರಾಜ್, ಲಲಿತಾನಾಯಕ್, ಸತ್ಯಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…








