ಉತ್ತರ ಕನ್ನಡ: 2015ರ ನಂತರ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ನಿವೃತ್ತಿ, ಮರಣ ಮತ್ತು ರಾಜೀನಾಮೆಯಿಂದ ತೆರವಾದ ಹುದ್ದೆಗಳನ್ನು ಕೂಡಲೇ ತುಂಬಿಕೊಳ್ಳಲು ಅನುಮತಿ ನೀಡಬೇಕೆಂದು ವಿಧಾನಪರಿಷತ್ತಿನ ಶಾಸಕರಾದ ಎಸ್ .ವಿ .ಸಂಕನೂರ್ ಇವರು ಸರಕಾರವನ್ನು ಒತ್ತಾಯಿಸಿದರು .
ಅವರು ಎಂ.ಪಿ.ಇ ಸೊಸೈಟಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಭಾಂಗಣದಲ್ಲಿ ಜರುಗಿದ ಕರ್ನಾಟಕ ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘ(ರಿ) ಧಾರವಾಡ ಇದರ ಘಟಕವಾದ ಕಾರವಾರ ಶೈಕ್ಷಣಿಕ ಜಿಲ್ಲಾ ಪದವಿ ಪೂರ್ವ ನೌಕರರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು .ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಅನುದಾನಿತ ಶಿಕ್ಷಕರ ಕೊರತೆಯಿಂದಾಗಿ ಶಿಕ್ಷಣ ಸಂಸ್ಥೆಗಳು ಸಂಕಷ್ಟದಲ್ಲಿದೆ. ಈ ಹಿಂದೆ ಅನುದಾನಕ್ಕೆ ಒಳಪಟ್ಟ ಪದವಿ ಕಾಲೇಜಿನಿಂದ ಬೇರ್ಪಟ್ಟ ಪದವಿಪೂರ್ವ ಕಾಲೇಜುಗಳಿಗೆ ಅನುದಾನಿತ ಹುದ್ದೆಯನ್ನು ಹೊಸದಾಗಿ ಸೃಜಿಸದೆ ಇಂತಹ ಕಾಲೇಜುಗಳು ಸಂಕಷ್ಟಕ್ಕೆ ಒಳಗಾಗಿದ್ದು ಶೀಘ್ರವಾಗಿ ಅಗತ್ಯ ಇರುವ ಹುದ್ದೆಗಳನ್ನು ತುಂಬಬೇಕು ಹಾಗೂ ಅನುದಾನಕ್ಕೆ ಒಳಪಡಿಸುವುದಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. 2006ರ ನಂತರ ನೇಮಕವಾದ ಅನುದಾನಿತ ಉಪನ್ಯಾಸಕರಿಗೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತಂದು ಅವರ ನಿವೃತ್ತಿ ಜೀವನಕ್ಕೆ ದಾರಿ ಮಾಡಿಕೊಡಬೇಕೆಂದು ಸರಕಾರವನ್ನು ಒತ್ತಾಯಿಸಿದರು .
ಕಾರ್ಯಕ್ರಮದ ಅತಿಥಿಗಳಾದ ಎಂ.ಪಿ.ಇ ಸೊಸೈಟಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಭಟ್ ಇವರು ಮಾತನಾಡಿ ಪದವಿಯಿಂದ ಬೇರ್ಪಟ್ಟ ಪದವಿಪೂರ್ವ ಕಾಲೇಜುಗಳಿಗೆ ಕೂಡಲೇ ಹೊಸ ಅನುದಾನಿತ ಹುದ್ದೆಯನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕೆಂದು ಸರಕಾರವನ್ನು ಒತ್ತಾಯಿಸಿದರು.
ಈ ಕಾರ್ಯಕ್ರಮದಲ್ಲಿ ಕಳೆದ ಸಾಲಿನ ದ್ವಿತೀಯ ಪಿ.ಯು ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಕುಮಟಾದ ನೆಲ್ಲಿಕೇರಿ ಪಿ.ಯು ಕಾಲೇಜಿನ ಕು.ಧ್ಯಾನ ಭಟ್ ಹಾಗೂ ಹೊನ್ನಾವರ ತಾಲೂಕಿನಲ್ಲಿ ಕಲಾ ,ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಪ್ರಥಮ ,ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಸಾಧನೆ ಮಾಡಿದ ಐವರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಪ.ಪೂ ನೌಕರರ ಸಂಘ ಕಾರವಾರ ಇದರ ಅಧ್ಯಕ್ಷ ಭಾಸ್ಕರ್ ಹೆಗಡೆ ಇವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು.
ಕಾರವಾರ ಶೈಕ್ಷಣಿಕ ಜಿಲ್ಲಾ ಪದವಿಪೂರ್ವ ನೌಕರರ ಸಂಘಕ್ಕೆ ಹೊಸದಾಗಿ ಅಧ್ಯಕ್ಷರಾಗಿ ನಿಯುಕ್ತಿಗೊಂಡ . ರಮೇಶ್ ಎಸ್ ಪತ್ರೇಕರ್ ಎಲ್ಲರನ್ನೂ ಸ್ವಾಗತಿಸಿದರು. ನಿಯುಕ್ತಿಗೊಂಡ ಎಲ್ಲಾ ಪದಾಧಿಕಾರಿಗಳನ್ನು ಎಸ್ .ವಿ .ಸಂಕನೂರ್ ಇವರು ಶಾಲು ಹೊದಿಸಿ ಸನ್ಮಾನಿಸಿದರು. ಸಂಘಟನೆಯ ಉಪಾಧ್ಯಕ್ಷರಾದ .ಎಂ. ಎಚ್. ಭಟ್, ಪ್ರಾಚಾರ್ಯರು ಗಣ್ಯರಿಗೆ ಧನ್ಯವಾದವನ್ನು ಸಮರ್ಪಿಸಿದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿಗಳಾದ . ಶ್ರೀನಿವಾಸ್ ಯು. ಕೆ ಇವರು ಪ್ರತಿಭಾ ಪುರಸ್ಕಾರಕ್ಕೆ ಸಹಕರಿಸಿದರು. ಉಪನ್ಯಾಸಕ ವಿನಾಯಕ ಭಟ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿಯರಾದ ಕುಮಾರಿ ಮಾನಸ ಹಾಗೂ ಕೃತಿಕಾ ಇವರು ಪ್ರಾರ್ಥಿಸಿದರು.