ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಭಾರಿ ಹಗರಣ ಸಂಬಂಧ ನಾಗೇಂದ್ರ ಅವರ ರಾಜೀನಾಮೆ ಪಡೆದರೆ ಸಾಲದು; ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸರಕಾರದ ಬೊಕ್ಕಸದ ಹಣವನ್ನು ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಚುನಾವಣೆಗೆ ಬಳಸಿಕೊಂಡಿರುವುದು ಸ್ಪಷ್ಟಗೊಂಡಿದೆ. ಆದ್ದರಿಂದ ಅವರು ರಾಜೀನಾಮೆ ಕೊಡಬೇಕು; ಅಲ್ಲದೆ, ಇನ್ನೆಷ್ಟು ಇಲಾಖೆಗಳಲ್ಲಿ ಇಂಥ ಹಗರಣ ನಡೆದಿದೆ ಎಂದು ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಸರಕಾರ ಬಂದರೆ ಎಐಸಿಸಿಗೆ ಹಣ ಹೋಗಲಿದೆ ಎಂದು ಮೊದಲಿನಿಂದಲೂ ಹೇಳಿದ್ದೆವು. ಇಲ್ಲಿಂದ ಎಟಿಎಂ ಮಾಡಿಕೊಳ್ತಾರೆ ಎಂದಿದ್ದೆವು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧಿತ 11 ಖಾತೆಗಳನ್ನು ನಿಷ್ಕ್ರಿಯಗೊಳಿಸಲು ಸರಕಾರಿ ಉನ್ನತಾಧಿಕಾರಿ ಮಂಜುನಾಥ ಪ್ರಸಾದ್ ಪತ್ರ ಬರೆದಿದ್ದಾರೆ. ಈ ಮೂಲಕ ಇದು ಹಗಲುದರೋಡೆ ಸರಕಾರ ಎಂದು ಸಾಬೀತಾಗಿರುವುದಾಗಿ ವಿವರಿಸಿದರು. ಡಿಸಿಎಂ ಮತ್ತು ಸಿಎಂ ಸೇರಿ ಈ ಹಣವನ್ನು ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಲೋಕಸಭಾ ಚುನಾವಣೆಗೆ ಬಳಸಿದ್ದಾರೆ ಎಂದು ಅವರು ಆರೋಪಿಸಿದರು.
ಇದು ಈ ದೇಶದಲ್ಲಿ ಪ್ರಥಮ. ಈ ಬಾರಿ 1,100 ಕೋಟಿ ರೂಪಾಯಿಯನ್ನು ಚುನಾವಣಾ ಆಯೋಗ ಜಪ್ತಿ ಮಾಡಿದೆ. ಆದರೆ, ಕಾಂಗ್ರೆಸ್ ಸರಕಾರವು ಸರಕಾರದ ಬೊಕ್ಕಸದಿಂದ ಹಣವನ್ನು ಚುನಾವಣೆಗೆ ಕಳಿಸಿದ್ದಾರೆ ಎಂದರೆ ಇದು ಪಿತ್ರಾರ್ಜಿತವೇ? ಒಂದು ದಿನವೂ ಅಧಿಕಾರದಲ್ಲಿ ಉಳಿಯಲು ಯೋಗ್ಯ ಸರಕಾರ ಇದಲ್ಲ ಎಂದು ಆಕ್ಷೇಪಿಸಿದರು.
ಸಿಎಂ ಕುರ್ಚಿ ಅಲುಗಾಡೀತು..
ಬಹುಶಃ ನೀವು ಒಂದೆರಡು ದಿನಗಳಲ್ಲಿ ನಾಗೇಂದ್ರರ ರಾಜೀನಾಮೆ ಪಡೆಯದಿದ್ದರೆ ನಿಮ್ಮ ಕುರ್ಚಿಯೇ ಅಲುಗಾಡಬಹುದು ಎಂದು ಛಲವಾದಿ ನಾರಾಯಣಸ್ವಾಮಿ ಅವರು ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದರು. ಇದು ಬ್ಯಾಂಕ್‍ಗಳ ವಿಚಾರ. ಇದನ್ನು ಎಸ್‍ಐಟಿ ತನಿಖೆ ಮಾಡಲು ಆಗುವುದಿಲ್ಲ. ಆದ್ದರಿಂದ ಸಿಬಿಐ ತನಿಖೆಗೆ ಕೋರಿದ್ದಾಗಿ ಸ್ಪಷ್ಟಪಡಿಸಿದರು.
ಎಸ್‍ಐಟಿ ಮಾಡಿದ್ದೇವೆ; ವರದಿ ಬರಲಿ, ನಾಗೇಂದ್ರ ಅವರು ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂಬ ಹೇಳಿಕೆ ಉದ್ಧಟತನದ ನಡೆ. ಮುಖ್ಯಮಂತ್ರಿಗಳು ಬಹಳ ಉದ್ಧಟತನದಿಂದ ನಡೆದುಕೊಂಡಿದ್ದಾರೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
BREAKING: ಕೆಇಎಯಿಂದ ‘K-CET ಪರೀಕ್ಷೆ’ ಫಲಿತಾಂಶ ಪ್ರಕಟ: ಈ ರೀತಿ ರಿಸಲ್ಟ್ ಚೆಕ್ ಮಾಡಿ
BIG NEWS: ರಾಜ್ಯ ಸರ್ಕಾರದಿಂದ ‘ಗುತ್ತಿಗೆದಾರ’ರಿಗೆ ಬಿಗ್ ಶಾಕ್: ಈ ನಿಯಮ ಪಾಲಿಸದಿದ್ರೆ ‘ಡಿಬಾರ್ ಫಿಕ್ಸ್’