ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರಿಗೆ ನಾಲ್ಕು ತಿಂಗಳಿನಿಂದ ಗೌರವಧನ ಪಾವತಿಯಾಗಿಲ್ಲ ಎಂಬುದಾಗಿ ಸುದ್ದಿ ಮಾಧ್ಯಮಗಳ ಮೂಲಕ ಗಮನಕ್ಕೆ ಬಂದಿದೆ. ಅವರಿಗೆ ಕೂಡಲೇ ಗೌರವಧನ ಪಾವತಿ ಮಾಡುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಪತ್ರ ಬರೆದು ಬಿಜೆಪಿಯ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಪತ್ರ ಬರೆದಿರುವಂತ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಗೆ ಕಳೆದ ನಾಲ್ಕು ತಿಂಗಳನಿಂದ ಗೌರವ ಧನ ಪಾವತಿಯಾಗದೇ ಇರುವ ವಿಷಯವು ವಾರ್ತಾ ಮತ್ತು ಪತ್ರಿಕಾ ಮಾಧ್ಯಮದಲ್ಲಿ ಪ್ರಸಾರವಾಗಿರುವುದು ನನ್ನ ಗಮನಕ್ಕೆ ಬಂದಿದ್ದು, ಇದೊಂದು ವಿಷಾದನೀಯ ಸಂಗತಿಯಾಗಿದೆ. ಪುಟ್ಟ ಮಕ್ಕಳನ್ನು ಪಾಲನೆ ಮಾಡುತ್ತಾ ಅವರಿಗೆ ವಿದ್ಯೆಯನ್ನು ಕಲಿಸುವ ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರು ಕೂಲಿ ಕೆಲಸ ಮಾಡಿಕೊಂಡು ಬದುಕು ದೂಡುವಂತಾಗಿರುವುದು ಮಾತ್ರ ವಿಪರ್ಯಾಸವೇ ಸರಿ ಎಂದಿದ್ದಾರೆ.
ಗೌರವಧನವನ್ನೇ ನಂಬಿಕೊಂಡು ಜೀವನ ಮಾಡುತ್ತಾ ಬಂದಿರುವ ಇವರಿಗೆ ಕಳೆದ ನಾಲ್ಕು ತಿಂಗಳಿನಿಂದ ಸರ್ಕಾರ ಗೌರವಧನ ನೀಡದೇ ಇವರ ಕುಟುಂಬ ನಿರ್ವಹಣೆಯು ತುಂಬಾ ಕಷ್ಟಕರವಾಗಿದ್ದು. ಮಕ್ಕಳ ಲಾಲನೆ ಪಾಲನೆ, ಮನೆಯ ಬಾಡಿಗೆ, ಜೊತೆಗೆ ವಿವಿಧ ಕಾರಣಗಳಿಗೆ ಬ್ಯಾಂಕುಗಳಿಂದ ಪಡೆದ ಸಾಲ, ಮನೆಯ ಖರ್ಚು ವೆಚ್ಚಗಳನ್ನು ಸರ್ಕಾರ ನೀಡುವ ಗೌರವಧನದಲ್ಲಿಯೇ ನಿಭಾಯಿಸುವಂತಹ ಪರಿಸ್ಥಿತಿ ಇವರಿಗಿದೆ. ಸರ್ಕಾರವು ಸರಿಯಾದ ಸಮಯದಲ್ಲಿ ಇವರಿಗೆ ಗೌರವಧನವನ್ನು ಪಾವತಿಸದೇ. ಹೊಟ್ಟೆಗೆ ಹಿಟ್ಟಿಲ್ಲ ಎನ್ನುವಂತ ಸ್ಥಿತಿಯನ್ನು ನಿರ್ಮಾಣ ಮಾಡಿಕೊಟ್ಟಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕೊಡಗು ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರಿಗೆ ನಾಲ್ಕು ತಿಂಗಳಿನಿಂದ ಗೌರವಧನ ಪಾವತಿಯಾಗದೇ ಇರುವ ಕಾರಣ ಅನಿವಾರ್ಯವಾಗಿ ಕೂಲಿ ಕೆಲಸ ಮಾಡದೆ ಬೇರೆ ದಾರಿಯಿಲ್ಲದ ದುಸ್ಥಿತಿ ಎದುರಾಗಿದೆ ಹಾಗೂ ಭಾನುವಾರ ಮತ್ತು ಇತರೆ ರಜೆ ದಿನಗಳಂದು ಕಾಫಿ ತೋಟಗಳಿಗೆ ಹೋಗಿ ಕೂಲಿ ಕೆಸ ಮಾಡಿ ಬದುಕು ದೂಡುತ್ತಿದ್ದಾರೆ ಎಂಬ ವಿಷಯವು ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಪ್ರಸಾರವಾಗಿರುತ್ತದೆ ಎಂದು ಹೇಳಿದ್ದಾರೆ.
ಅಂಗನವಾಡಿ, ಸಹಾಯಕಿಯರಿಗೆ ಇಂತಹ ದುಸ್ಥಿತಿ ಎದುರಾಗಿರುವುದನ್ನು… ನೋಡಿದರೇ.. ಅಂಗನವಾಡಿ ನೌಕರರಿಗೆ ಗೌರವ ಧನವನ್ನು ನೀಡವುದಕ್ಕೂ ಸಾಧ್ಯವಿಲ್ಲದಂತಹ ದುಸ್ಥಿತಿ ಸರ್ಕಾರಕ್ಕೇ ಬಂದೊದಗಿದೆಯೇ ಎನ್ನುವಂತಹ ದೊಡ್ಡ ಸಂಶಯ ಎದುರಾದಂತಿದೆ. ರಾಜ್ಯದ ಅಂಗನವಾಡಿ ಕಾರ್ಯಕರ್ತರಿಗೆ ಗೌರವಧನ ಪಾವತಿಯಲ್ಲಿ ವಿಳಂಬವಾಗುತ್ತಿರುವ ಸಮಸ್ಯೆಯನ್ನು ತಮ್ಮ ಗಮನಕ್ಕೆ ತರಬಯಸುತ್ತಾ, ಆದಷ್ಟು ಶೀಘ್ರವಾಗಿ ಈ ಸಮಸ್ಯೆಯನ್ನು ಪರಿಹರಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹ ಪೂರ್ವಕವಾಗಿ ಕೋರಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್ | Arvind Kejriwal
ಭಾಗ್ಯಲಕ್ಷ್ಮಿ ಯೋಜನೆಯ ‘ಸೀರೆ ವಿತರಣೆ’ಯಲ್ಲಿ ಅಕ್ರಮ: ‘SIT ತನಿಕೆ’ಗೆ ಕೋರಿ ಸಿಎಂಗೆ ‘ರಮೇಶ್ ಬಾಬು’ ಪತ್ರ