ಮಂಡ್ಯ : ಹಲವು ದಶಕಗಳ ಹಿಂದೆ ಕೆಮ್ಮಣ್ಣು ನಾಲೆಯ ನೀರನ್ನು ಪಟ್ಟಣ ಹಾಗೂ ಹಳ್ಳಿಗಳಿಂದ ಬರುತ್ತಿದ್ದ ಜನತೆ ಕುಡಿಯುವ ನೀರನ್ನಾಗಿ ಬಳಸುತ್ತಿದ್ದರು. ಆದರೆ, ಸರ್ಕಾರದ ಅನುದಾನದ ಕೊರತೆ, ಅಧಿಕಾರಿಗಳ ಬೇಜವಾಬ್ದಾರಿತನದಿಂದ ಇಂದು ಕೆಮ್ಮಣ್ಣು ನಾಲೆಯೂ ಸೂಕ್ತ ನಿರ್ವಹಣೆ ಇಲ್ಲದೇ ಪಟ್ಟಣದ ದೊಡ್ಡ ಚರಂಡಿಯಾಗಿದ್ದು, ಜನತೆ ಮೂಗುಮುಚ್ಚಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಅಚ್ಚುಕಟ್ಟು ಪ್ರದೇಶದ ರೈತರು ಹಾಗೂ ಸಾರ್ವಜನಿಕರು ನಾಲಾ ಅಭಿವೃದ್ಧಿ ಬಗ್ಗೆ ಜನಪ್ರತಿನಿಧಿಗಳ ಬಳಿ ನೂರಾರು ಬಾರಿ ಮನವಿ, ಪ್ರತಿಭಟನೆ ಮತ್ತು ಆಗ್ರಹ ನಡೆಸಿದ್ದರು ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ, ವಿಧಾನಸಭಾ ಚುನಾವಣೆಗೂ ಮುನ್ನ ಕೆಮ್ಮಣ್ಣು ನಾಲೆಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ಶಾಸಕ ಕೆ.ಎಂ.ಉದಯ್ ಕೊಟ್ಟ ಮಾತನ್ನು ಈಡೇರಿಸುವ ಮೂಲಕ ರೈತರ ಬೆನ್ನೆಲುಬಾಗಿ ನಿಂತಿದ್ದು, ಅಂದಾಜು 90 ಕೋಟಿ ರೂ ವೆಚ್ಚದಲ್ಲಿ ಕೆಮ್ಮಣ್ಣು ನಾಲೆಯ ಆಧುನೀಕರಣ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿದರು.
ಮದ್ದೂರು ಪಟ್ಟಣದ ಕೆಮ್ಮಣ್ಣು ನಾಲೆಯ ವೃತ್ತದ ಬಳಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ನಾನು ಶಾಸಕನಾದ ಸಂದರ್ಭದಲ್ಲಿ ಉದಯ್ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡೋದಿಲ್ಲ, ಜನರ ಕೈಗೆ ಮೊದಲೇ ಸಿಗೋದಿಲ್ಲ ಎಂದು ನನ್ನ ಬಗ್ಗೆ ಟೀ ಅಂಗಡಿ, ಬಾರ್ ಗಳಲ್ಲಿ ಕುಹಕದ ಮಾತುಗಳನ್ನು ಆಡುತ್ತಿದ್ದರು. ಆದರೆ, ಕೇವಲ 2 ವರ್ಷಗಳಲ್ಲೇ ಜನತೆಗೆ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಾ ಕ್ಷೇತ್ರದ ಅಭಿವೃದ್ಧಿಗೆ 1ಸಾವಿರ ಕೋಟಿಗೂ ಅಧಿಕ ವಿಶೇಷ ಅನುದಾನವನ್ನು ತಂದು ಸಮರೋಪಾದಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ತಕ್ಕ ಉತ್ತರ ನೀಡಿದ್ದೇನೆ ಎಂದು ತಿರುಗೇಟು ನೀಡಿದರು.
ನಾನು ಸಹ ಒಂದು ಸಣ್ಣ ಹಳ್ಳಿಯ ರೈತನ ಮಗನಾಗಿ ಹಟ್ಟಿದ್ದೇನೆ. ರೈತರ ಕಷ್ಟಗಳನ್ನು ತುಂಬಾ ನೋಡಿದ್ದೇನೆ ಮತ್ತು ಗಮನಿಸಿದ್ದೇನೆ. ಆದ್ದರಿಂದ ರೈತರಿಗೆ ಶಾಶ್ವತವಾಗಿ ಅನುಕೂಲವಾಗುವಂತ ನೀರಾವರಿ ಯೋಜನೆಗಳನ್ನು ಜಾರಿಗೆ ತಂದು ರೈತರ ಸಮಸ್ಯೆಗಳಿಗೆ ಪರಿಹಾರ ನೀಡಿದ್ದೇನೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕ್ಷೇತ್ರದ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕೆಮ್ಮಣ್ಣು ನಾಲೆ ಮೂಲಕ ದೇಶಹಳ್ಳಿ, ಚಾಮನಹಳ್ಳಿ, ಶಿವಪುರ, ಮದ್ದೂರು, ಚನ್ನಸಂದ್ರ, ನಗರಕೆರೆ ಸೇರಿದಂತೆ ಸುಮಾರು 13 ಗ್ರಾಮಗಳ ಅಚ್ಚುಕಟ್ಟು ಪ್ರದೇಶಕ್ಕೆ ಸೂಕ್ತ ನಿರ್ವಹಣೆ ಕೊರತೆಯಿಂದ ಸರಾಗವಾಗಿ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ 21.75 ಕಿ.ಮೀ ಉದ್ದಕ್ಕೂ ಬಾಕ್ಸ್ ಡ್ರೈನ್ ನಿರ್ಮಾಣ, 18 ಅಡ್ಡ ಮೋರಿಗಳ ನಿರ್ಮಾಣ ಹಾಗೂ ಪಟ್ಟಣದ ನಂಜಪ್ಪ ಕಲ್ಯಾಣ ಮಂಟಪದಿಂದ ಗೊರವನಹಳ್ಳಿ ರಸ್ತೆಯ ಕೆಇಬಿ ಸಬ್ ಸ್ಟೇಷನ್ ವರೆಗೆ ಅಡ್ಡ ಮೋರಿಗಳ ನಿರ್ಮಾಣ ಹಾಗೂ ನಾಲೆಯ ಎರಡು ಕಡೆ ರಸ್ತೆ ಅಭಿವೃದ್ಧಿ ಮತ್ತು ಪಟ್ಟಣದ ವ್ಯಾಪ್ತಿಯಲ್ಲಿ ಸಿಸಿ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇದರ ಜೊತೆಗೆ ಚಾಮನಹಳ್ಳಿ ಬೈರನ್ ನಾಲೆ ಮತ್ತು ವೈದ್ಯನಾಥಪುರ ನಾಲಾ ಅಭಿವೃದ್ಧಿ ಕಾಮಗಾರಿಗೆ 49.50 ಕೋಟಿ ಅಂದಾಜು ಮೊತ್ತವನ್ನು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಾಗೂ ಸೂಳೆಕೆರೆ ಅಚ್ಚುಕಟ್ಟು ಪ್ರದೇಶದ ನಾಲೆಗಳ ಅಭಿವೃದ್ಧಿಗೆ 80 ಕೋಟಿ ಗೂ ಹೆಚ್ಚಿನ ಅನುದಾನದಲ್ಲಿ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಕೆಮ್ಮಣ್ಣು ನಾಲೆಗೆ ಸಾರ್ವಜನಿಕರು ಕಲುಷಿತ ವಸ್ತುಗಳನ್ನ ಹಾಕುವುದನ್ನು ನಿಲ್ಲಿಸಬೇಕು ನಾಲೆಯ ಅಭಿವೃದ್ಧಿ ಜೊತೆಗೆ ನೀರು ಕೂಡ ಸ್ವಚ್ಚವಾಗಿರಬೇಕು ಆದ್ದರಿಂದ ಸರ್ಕಾರದಿಂದ 19 ಕೋಟಿ ರೂ. ವಿಶೇಷ ಅನುದಾನ ತಂದು ಒಳಚರಂಡಿ ನೀರು ಕೆಮ್ಮಣ್ಣು ನಾಲೆಗೆ ಸೇರದಂತೆ ಆ ಕಾಮಗಾರಿಯನ್ನು ಸಹ ನಾಲೆಯ ಅಭಿವೃದ್ಧಿ ಜೊತೆಗೆ ಮಾಡಲಾಗುವುದು ಎಂದು ಹೇಳಿದರು.
ಈಗಾಗಲೇ ಮದ್ದೂರು ಪಟ್ಟಣದ ರಸ್ತೆ ಅಗಲೀಕರಣಕ್ಕೆ ಬಜೆಟ್ ನಲ್ಲಿ ಅನುಮೋದನೆ ನೀಡಲಾಗಿದ್ದು, ಇನ್ನು ಕೆಲ ದಿನಗಳಲ್ಲೇ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡುತ್ತ ಹಂತ ಹಂತವಾಗಿ ಕ್ಷೇತ್ರದ ಸಮಗ್ರ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.
ಇದೇ ವೇಳೆ ಪುರಸಭಾ ಅಧ್ಯಕ್ಷೆ ಕೋಕಿಲ ಅರುಣ್, ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ತೈಲೂರು ಚೆಲುವರಾಜು, ಅಣ್ಣೂರು ರಾಜೀವ್, ಜಿ.ಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ್, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ, ಪುರಸಭಾ ಸದಸ್ಯರಾದ ಸಿದ್ದರಾಜು, ಕಮಲ್ ನಾಥ್, ಪ್ರಮೀಳಾ, ರತ್ನಮ್ಮ, ಸರ್ವಮಂಗಳ, ಕಾವೇರಿ ನೀರಾವರಿ ನಿಗಮದ ಇಇ ನಂಜುಂಡೇಗೌಡ, ಎಇಇ ನಾಗರಾಜ್, ಎಇ ದೀಪಕ್, ಪ್ರವೀಣ್ ಮತ್ತಿತ್ತರರು.
ವರದಿ : ಗಿರೀಶ್ ರಾಜ್, ಮಂಡ್ಯ
ಆಹಾರ ಧಾನ್ಯಗಳ ಕೃತಕ ಅಭಾವ ಸೃಷ್ಠಿಸಿದ್ರೇ ಕಠಿಣ ಕ್ರಮ: ಸಾಕಷ್ಟು ದಾಸ್ತಾನಿದೆ ಎಂದು ಕೇಂದ್ರದ ಸ್ಪಷ್ಟನೆ
BREAKING: ಭಾರತ-ಪಾಕ್ ಉದ್ವಿಗ್ನತೆ: ಮೇ.10ರವರೆಗೆ ಹಲವು ನಗರಗಳಿಗೆ ವಿಮಾನ ಹಾರಾಟ ರದ್ದುಗೊಳಿಸಿದ ಇಂಡಿಗೋ