ಶಿವಮೊಗ್ಗ: ನಾಳೆ ಸಿಗಂದೂರು ಸೇತುವೆಯನ್ನು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಲೋಕಾರ್ಪಣೆಗೊಳಿಸಲಿದ್ದಾರೆ. ಈ ಹೊತ್ತಿನಲ್ಲೇ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಂತ ಸಂದರ್ಭದಲ್ಲಿ ಈ ಕಳಸವಳ್ಳಿ-ಅಂಬಾರಗೋಡ್ಲು ಸೇತುವೆ ನಿರ್ಮಾಣಕ್ಕಾಗಿ ಬರೆದಿದ್ದಂತ ಪತ್ರ ವೈರಲ್ ಆಗಿದೆ.
ಕಳಸವಳ್ಳಿ-ಅಬಾರಗೊಡ್ಲು ಸೇತುವೆಯ ಕಾಮಗಾರಿ ಮುಕ್ತಾಯಗೊಂಡು ನಾಳೆ ಉದ್ಘಾಟನೆಯ ಹಂತಕ್ಕೆ ಬಂದು ನಿಂತಿದೆ. ಈ ಸೇತುವೆಯ ರೂವಾರಿಗಳು ಹಲವರಿದ್ದರೂ, ಈಗ ಶಾಸಕ ಗೋಪಾಲಕೃಷ್ಣ ಬೇಳೂರು ಅವರು 2008ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದಂತ ಯಡಿಯೂರಪ್ಪಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಆ ಪತ್ರ ವೈರಲ್ ಆಗಿದೆ.
ಶಾಸಕ ಗೋಪಾಲಕೃಷ್ಣ ಬೇಳೂರು ಬರೆದಿದ್ದ ಪತ್ರದಲ್ಲಿ ಏನಿದೆ.?
ಲಿಂಗನಮಕ್ಕಿ ಅಣೆಕಟ್ಟೆಯ ಶರಾವತಿ ನದಿ ಹಿನ್ನೀರಿನಿಂದಾಗಿ ಸಾಗರ ತಾಲ್ಲೂಕಿನ ತುಮರಿ, ಕುದೂರು, ಶಂಕಣ್ಣ ಶ್ಯಾನುಬೋಗ್, ಜೆನ್ನಗೊಂಡ ಹಾಗೂ ಬಾನಕುಳಿ ಹೀಗೆ ಒಟ್ಟು 5 ಗ್ರಾಮ ಪಂಚಾಯ್ತಿಗಳ ಸುಮಾರು 20 ಸಾವಿರ ಜನರು ತಾಲ್ಲೂಕು ಕೇಂದ್ರದಿಂದ ಸಂಪರ್ಕ ಕಳೆದುಕೊಂಡು ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿರುವುದು ತಮಗೆ ತಿಳಿದ ವಿಷಯವಾಗಿರುತ್ತದೆ. ಇದೇ ಭಾಗದಲ್ಲಿ ಬರುವ ಶ್ರೀ ಸಿಗಂದೂರು ಕ್ಷೇತ್ರ ಮತ್ತು ಕೊಲ್ಲೂರು ಮೂಕಾಂಬಿಕೆ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ ಎಂದಿದ್ದರು.
ಈ ಹಿನ್ನಲೆಯಲ್ಲಿ ಈ ಭಾಗದ ಜನರ ಸಮಸ್ಯೆಗಳನ್ನು ಅರಿತಿರುವ ತಾವುಗಳು ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ನಿರ್ಮಾಣಕ್ಕೆ ಈ ಸಾಲಿನ ಕರ್ನಾಟಕ ಸರ್ಕಾರದ ಬಜೆಟ್ ನಲ್ಲಿ 100 ಕೋಟಿ ರೂಪಾಯಿಗಳನ್ನು ಮಂಜೂರು ಮಾಡುವಂತೆ ಪತ್ರದಲ್ಲಿ ಮನವಿ ಮಾಡಿದ್ದರು.
ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆ ಏನು?
ದಿನಾಂಕ 25-06-2008ರಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಪತ್ರಕ್ಕೆ ಅಂದಿನ ಸಿಎಂ ಆಗಿದ್ದಂತ ಬಿಎಸ್ ಯಡಿಯೂರಪ್ಪ ತಕ್ಷಣವೇ ಪ್ರತಿಸ್ಪಂದಿಸಿದ್ದಾರೆ.
ಗೋಪಾಲಕೃಷ್ಣ ಬೇಳೂರು ಅವರ ಪತ್ರದ ಮೇಲೆ ಈ ವರ್ಷದ ಕಾಮಗಾರಿಯಲ್ಲಿ ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮಂಜೂರಾತಿಗೆ ಕಾಮಗಾರಿ ಕೈಗೊಳ್ಳುವುದು ಎಂಬುದಾಗಿ ತಿಳಿಸಿ ಸಹಿ ಮಾಡಿದ್ದಾರೆ.
ಪ್ರಸ್ತಾವನೆ ಕಳುಹಿಸಲು ಕೋರಿದ ಸಿಎಂ ಪ್ರಧಾನ ಕಾರ್ಯದರ್ಶಿ
ಬಿಎಸ್ ಯಡಿಯೂರಪ್ಪ ಅವರ ಸೂಚನೆಯ ಮೇರೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಪತ್ರಕ್ಕೆ ಟಿಪ್ಪಣಿ ಮಾಡಿರುವಂತ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ವಿ ಪ ಬಳಿಗಾರ್ ಅವರು, ಮುಖ್ಯಮಂತ್ರಿಯವರ ಆದೇಶದಂತೆ ಸೂಕ್ತ ಕ್ರಮಕ್ಕೆ ಪ್ರಸ್ತಾವನೆ ಕಳುಹಿಸಲು ಸೂಚಿಸಿದ್ದರು.
ಈ ಎಲ್ಲಾ ಬೆಳವಣಿಗೆಯ ಕಾರಣದಿಂದಾಗಿ ಸಿಗಂದೂರು ಸೇತುವೆ ನಿರ್ಮಾಣಗೊಂಡಿದೆ. ನಾಳೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ದ್ವಿಪದ ಜನರ ದಶಕಗಳ ಕನಸಿಗೆ ಲೋಕಾರ್ಪಣೆಯ ಮೂಲಕ ಸಕಾರಗೊಳಿಸಲಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ರೈತರೇ ಪಿಎಂ ಕಿಸಾನ್ 20ನೇ ಕಂತಿನ ಹಣ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ | PM Kisan Updates
Watch Video: ಇಂಗ್ಲೀಷ್ ಮೇಷ್ಟ್ರಾದ ಸಚಿವ ಡಾ.ಶರಣಪ್ರಕಾಶ ಪಾಟೀಲ: ವೀಡಿಯೋ ವೈರಲ್