ಶಿವಮೊಗ್ಗ: ಜಿಲ್ಲೆಯ ಅಡಿಕೆ ಬೆಳೆಗಾರರಿಂದ ಸರಿಯಾದ ಪ್ರಮಾಣದಲ್ಲಿ ವಿಮೆ ಹಣವನ್ನು ಕಟ್ಟಿಸಿಕೊಳ್ಳುತ್ತಿಲ್ಲ. ಹೀಗಾಗಿ ಅಡಿಕೆ ಬೆಳೆಗಾರರ ವಿಮಾ ಪರಿಹಾರದ ಸಮಸ್ಯೆ ಪರಿಹರಿಸುವಂತೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕಾ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಈ ಬಗ್ಗೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರಿಗೆ ಪತ್ರ ಬರೆದಿರುವಂತ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಸಾಗರ ವಿಧಾನಸಭಾ ವ್ಯಾಪ್ತಿಯಲ್ಲಿ 2024ನೇ ಸಾಲಿನ ಡಿಸೆಂಬರ್ ಅತ್ಯಂಕ್ಕೆ 2493.9 ಮಿ.ಮೀ ವಾಡಿಕೆ ಮಳೆ ಆಗಬೇಕಾಗಿದ್ದು, ವಾಸ್ತವವಾಗಿ 3864.7 ಮಿ.ಮೀ ಮಳೆ ಆಗಿರುತ್ತದೆ. 1370.8 ಮಿ.ಮೀ ರಷ್ಟು ಹೆಚ್ಚುವರಿ ಮಳೆ ಆಗಿರುತ್ತದೆ ಎಂದಿದ್ದಾರೆ.
ಸಾಗರ ವಿಧಾನಸಭಾ ವ್ಯಾಪ್ತಿಯಲ್ಲಿ ಅಡಿಕೆ ಬೆಳೆಯು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಅತಿವೃಷ್ಟಿಯಿಂದ ಕೊಳೆ ಹಾನಿಯಾಗಿರುತ್ತದೆ. ಅಡಿಕೆ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ರೂ.6400/- ಗಳನ್ನು ವಿಮಾ ಕಂತನ್ನು ಪಾವತಿಸಿಕೊಂಡು 2024-25ನೇ ಸಾಲಿನಲ್ಲಿ ತೋಟಗಾರಿಕಾ ಬೆಳೆಗೆ ವಿಮೆಯ ಹಣಪಾವತಿಯಲ್ಲಿ ಪ್ರತಿ ಹೆಕ್ಟೇರ್‌ಗೆ ರೂ.600/- ರಿಂದ 1100/- ವರೆಗೆ ಕೆಲವು ಗ್ರಾಮ ಪಂಚಾಯಿತಿಯಲ್ಲಿ ಅತಿ ಕಡಿಮೆ ಪಾವತಿಯಾಗಿರುತ್ತದೆ ಎಂದು ಹೇಳಿದ್ದಾರೆ.
ರೈತರು ಕಟ್ಟಿರುವ ವಿಮಾ ಕಂತಿನ ಸುಮಾರು ರೂ.5800/- ಗಳಷ್ಟು ಪ್ರತಿ ಹೆಕ್ಟೇರ್‌ಗೆ ನಷ್ಟವಾಗಿರುತ್ತದೆ. ಆದರೆ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಅಡಿಕೆ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ರೂ.67,700/- ರಿಂದ 84,000/- ವರೆಗೂ ವಿಮಾ ಪಾವತಿಯಾಗಿರುತ್ತದೆ. ಮಳೆ ಮಾಪನದ ದೋಷದಿಂದ ಹಾಗೂ ಅಗ್ರಿಕಲ್ಲರ್ ಇನ್ಸೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿ ಅವರು ಮಳೆ ಮಾಹಿತಿಯನ್ನು ಸರಿಯಾಗಿ ನೀಡದಿರುವುದರಿಂದ ಕೆಲವು ಗ್ರಾಮ ಪಂಚಾಯಿತಿಗಳಿಗೆ ಅತ್ಯಂತ ಕಡಿಮೆ ವಿಮೆ ಪಾವತಿಯಾಗಿರುತ್ತದೆ ಎಂಬುದಾಗಿ ಗಮನಕ್ಕೆ ತಂದಿದ್ದಾರೆ.
ಮಲೆನಾಡಿನ ಒಂದೇ ಕ್ಷೇತ್ರದಲ್ಲಿ ಬೇರೆ ಬೇರೆ ವಿಮಾ ಪಾವತಿಯಿಂದ ರೈತರಿಗೆ ಅನ್ಯಾಯವಾಗಿರುತ್ತದೆ. ಆದುದರಿಂದ ಸರಿಯಾದ ಮಳೆಯ ಪ್ರಮಾಣದ ವರದಿಯನ್ನು ಪಡೆದುಕೊಂಡು ಪುನರ್ ಪರಿಶೀಲಿಸಿ ರೈತರಿಗೆ ಸರಿಯಾದ ವಿಮೆ ಪಾವತಿ ಮಾಡಲು ಸಂಬಂಧಪಟ್ಟ ಇಲಾಖೆ/ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ತೋಟಗಾರಿಕಾ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರನ್ನು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಮನವಿ ಮಾಡಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು…








