ಶಿವಮೊಗ್ಗ: ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದು ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ. ಮಕರ ಸಂಕ್ರಾಂತಿಯ ಪ್ರಯುಕ್ತ ನಡೆಯುವಂತ ಸಿಗಂದೂರು ಜಾತ್ರಾ ಮಹೋತ್ಸವಕ್ಕೆ ಸಾಗರ-ಹೊಸನಗರ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದಂತ ಗೋಪಾಲಕೃಷ್ಣ ಬೇಳೂರು ಅವರು ವಿದ್ಯುಕ್ತ ಚಾಲನೆ ನೀಡಿದರು.
ಶಿವಮೊಗ್ಗ ಜಿಲ್ಲೆಯ ಸಾಗರದ ಐತಿಹಾಸಿಕ ಪ್ರಸಿದ್ಧವಾದ ಶ್ರೀ ಸಿಗಂದೂರು ಚೌಡೇಶ್ವರಿ ಜಾತ್ರೆಗೆ ವಿದ್ಯುಕ್ತ ಚಾಲನೆಯನ್ನು ನೀಡಲಾಗಿದೆ. ಸಿಗಂದೂರಿನ ದೇವಿಯ ಮೂಲ ಸ್ಥಾನದಲ್ಲಿ ಪೂಜೆ, ಆ ಬಳಿಕ ಧರ್ಮ ಜ್ಯೋತಿಯನ್ನು ಬೆಳಗಿಸುವ ಮೂಲಕ ಶಾಸಕ ಗೋಪಾಲಕೃಷ್ಣ ಬೇಳೂರು ಭವ್ಯ ಶೋಭಾ ಯಾತ್ರೆಗೆ ಚಾಲನೆಯನ್ನು ನೀಡಿದರು. ಈ ವೇಳೆ ಶಿಕಾರಿಪುರ ತಾಲೂಕಿನ ಕಡೆನಂದಿಹಳ್ಳಿ ಮಠದ ರೇವಣ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಆರ್.ಎಂ.ಮಂಜುನಾಥ ಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ, ಎಂ.ಶ್ರೀಕಾಂತ್, ಹೊಳಡಕೊಪ್ಪದ ಬೀರಪ್ಪ ದಂಪತಿಗಳು, ನಿರಂಜನ್ ಕುಪ್ಪಗಡ್ಡೆ ದಂಪತಿಗಳು, ಕಲಸೆ ಚಂದ್ರಪ್ಪ, ಅನಿತಾಕುಮಾರಿ, ಅಶೋಕ ಬೇಳೂರು, ಹೊಳೆಯಪ್ಪ ಇತರರು ಹಾಜರಿದ್ದರು.
ಮೂಲ ಸ್ಥಾನದಲ್ಲಿ ಬೆಳಗಿದಂತ ಧರ್ಮ ಜ್ಯೋತಿ ಹಾಗೂ ದೇವಿಯ ಉತ್ಸವ ಮೂರ್ತಿಯನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಸುಮಾರು 2 ಕಿಲೋಮೀಟರ್ ದೂರದವರೆಗೆ ಶರಾವತಿ ಕಣಿವೆಯ ಮೂಲಕ ಸಾಗಿ, ಸಿಗಂದೂರು ಚೌಡೇಶ್ವರಿ ದೇವಿಯ ಸನ್ನಿಧಾನಕ್ಕೆ ಕರೆತರಲಾಯಿತು. ಈ ವೇಳೆ ಕೋಲಾಟ, ಕರಡಿ ಕುಣಿತ, ನವಿಲು ಕುಣಿತ ಮೊದಲಾದಂತ ವಿವಿಧ ಜಾನಪದ ಸಂಪ್ರದಾಯಗಳು ಮೆರವಣಿಗೆಗೆ ರಂಗು ನೀಡಿದವು.
ಸಿಗಂದೂರು ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮೂಲಸ್ಥಾನದಲ್ಲಿ ಪೂಜೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಶ್ರೀಕ್ಷೇತ್ರ ಕಾರ್ತಿಕೇಯ ಮಠದ ಶ್ರೀ ಯೋಗೇಂದ್ರ ಅವಧೂತರು, ಸಿಗಂದೂರು ಚೌಡಂಮ್ಮ ದೇವಿ ಜಾತ್ರೆ ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಯುತ್ತದೆ. ರಾಮಪ್ಪನವರ ನಿರಂತರ ಪ್ರಯತ್ನ, ದೇವಿಯ ಅವರಿಗಿರುವ ಅಪಾರ ನಂಬಿಕೆ ಮತ್ತು ಶಕ್ತಿ ಕ್ಷೇತ್ರದ ಅಭಿವೃದ್ಧಿಯನ್ನು ಮುನ್ನಡೆಸಿದೆ. ಈ ಕ್ಷೇತ್ರ ಮುಂಬರುವ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂಬುದಾಗಿ ಆಶಿಸಿದರು.
ಕಡೇನಂದಿಹಳ್ಳಿ ಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಐತಿಹಾಸಿಕ ಪ್ರಸಿದ್ಧವಾದ ಸಿಗಂದೂರು ಚೌಡೇಶ್ವರಿ ಜಾತ್ರೆ ಪ್ರತಿ ವರ್ಷ ಮಕರಸಂಕ್ರಮಣದ ಸಂದರ್ಭದಲ್ಲಿ 2ದಿನಗಳ ಕಾಲ ಅತ್ಯಂತ ಸಡಗರ ಸಂಭ್ರಮದಿಂದ ನಡೆಯುತ್ತದೆ. ಭಾರೀ ಸಂಖ್ಯೆಯಲ್ಲಿ ಭಕ್ತರು ಈ ಪುಣ್ಯಕ್ಷೇತ್ರಕ್ಕೆ ಬಂದು ಪೂಜೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಶರಾವತಿ ಹಿನ್ನೀರಿನಲ್ಲಿ ಮುಳುಗಡೆಯಾದ ದೇವಿಯ ಸನ್ನಿಧಾನಕ್ಕೆ ಇಂದು ವಿದ್ಯುಕ್ತ ಪೂಜೆ ಸಲ್ಲಿಸಲಾಗಿದೆ. ಡಾ.ರಾಮಪ್ಪ ಮತ್ತು ಅವರ ಕುಟುಂಬದವರ ನಿರಂತರ ಶ್ರಮದಿಂದ ಸಿಗಂದೂರಿನಲ್ಲಿ ದೇವಿಯ ಪ್ರತಿಷ್ಠಾಪನೆಯಾಗಿ ಭಕ್ತರ ಇಷ್ಠಾರ್ಥಗಳನ್ನು ಪೂರೈಸುತ್ತಿದ್ದಾಳೆ ಎಂದು ಹೇಳಿದರು.
ಸಿಗಂದೂರು ಮಕರಸಂಕ್ರಾಂತಿಯ ಜಾತ್ರೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ಜಾತ್ರೆಗಳು ನಮ್ಮ ಸಂಸ್ಕೃತಿ ಸಂಸ್ಕಾರದ ಪ್ರತೀಕಗಳಾಗಿವೆ. ಆಧುನಿಕ ಜಗತ್ತಿಗೆ ತೆರೆದುಕೊಳಳುತ್ತಿರುವ ದಿನಮಾನದಲ್ಲಿ ದೇವರಮೇಲೆ ನಂಬಿಕೆ ಮತ್ತು ಶ್ರದ್ಧೆ ಇರಬೇಕೇ ಹೊರತು ಮೂಢನಂಬಿಕೆಗಳಲ್ಲ. ಅಂಥವುಗಳಿಂದ ನಾವು ಮೊದಲು ಹೊರಬರಬೇಕಾಗಿದೆ. ದೇವಾಲಯ ಎನ್ನುವುದು ಶ್ರದ್ಧಾ ಭಕ್ತಿಯ ಕೇಂಧ್ರವಾಗಿದೆ ಎಂದರು.
ಸಿಗಂದೂರಿನಲ್ಲಿ ನಡೆಯುವ ಜಾತ್ರೆಯನ್ನು ಒಳಗೊಂಡಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ಇಲ್ಲಿ ಭಕ್ತರು ಸುತ್ತಮುತ್ತಲ ಗ್ರಾಮಸ್ಥರು ಒಟ್ಟಾಗಿ ನಿಂತು ಕಾರ್ಯಕ್ರಮಗಳಿಗೆ ನೀಡುವ ಸಹಕಾರ ಮಾದರಿಯಾಗಿದೆ. ಸಿಗಂದೂರು ಕ್ಷೇತ್ರವನ್ನು ತುಂಬಾ ವ್ಯವಸ್ಥಿತವಾಗಿ ಕಟ್ಟುವಲ್ಲಿ ಡಾ.ರಾಮಪ್ಪನವರ ತಂಡ ಮಾಡುತ್ತಿರುವ ಕೆಲಸ ಮಾದರಿಯಾಗಿದೆ. 2ದಿನಗಳ ಈ ಜಾತ್ರೆಯಲ್ಲಿ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಎಲ್ಲಾ ರೀತಿಯ ಅನುಕೂಲಗಳನ್ನೂ ಮಾಡಿಕೊಡಲಾಗಿದೆ. ಇಡೀ ಶರಾವತಿ ಹಿನ್ನೀರಿನ ಜನತೆಗೆ ಈ ವರ್ಷದ ಸಂಕ್ರಾಂತಿ ಒಳಿತನ್ನು ತರಲಿ ಎಂಬುದಾಗಿ ಶುಭ ಹಾರೈಸಿದರು.
ಈ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದಂತ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿಯ ಅನುವಂಶಿಕ ಧರ್ಮದರ್ಶಿ ಡಾ.ರಾಮಪ್ಪ ಅವರು, ಸಿಗಂದೂರಿನ ಶರಾವತಿ ಹಿನ್ನೀರಿನ ಸೇತುವೆ 450ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಈ ಸೇತುವೆ ನಿರ್ಮಾಣವಾಗಲು ಭಗವಂತನ ಕೃಪೆಯೇ ಬಹಳಾ ಮುಖ್ಯವಾದುದು. ಈ ದೇವಾಲಯ ಇಷ್ಟು ಅಭಿವೃದ್ಧಿ ಆಗುವಲ್ಲಿ ಎಲ್ಲರ ಸಹಕಾರವೂ ಇದೆ ಎಂದರು.
ಶರಾವತಿ ಹಿನ್ನೀರಿನ ಜನರ ಮುಳುಗಡೆ ಸಂದರ್ಭದ ಸಂಕಷ್ಟ ಅನುಭವಿಸಿದವರಿಗೇ ಗೊತ್ತು. ನಮ್ಮ ಹಾಗೇಯೇ ಅದೆಷ್ಟೋ ಕುಟುಂಬಗಳು ಮುಳುಗಡೆಯಲ್ಲಿ ಬದುಕನ್ನೇ ಕಳೆದುಕೊಂಡರು. ಅಂದು ಕಷ್ಟಪಟ್ಟು ದೇವಾಲಯವನ್ನು ಸಿಗಂದೂರಿನಲ್ಲಿ ಸ್ಥಾಪಿಸಿ ಮುನ್ನಡೆಸಿದ ಸಲುವಾಗಿ ತಾಯಿಯ ಕೃಪೆಯಿಂದ ಯಶಸ್ವಿಯಾಗಿ ಧರ್ಮಕಾರ್ಯಗಳು ನಡೆಯುತ್ತಿವೆ. ದೇವಾಲಯಕ್ಕೆ ತಮ್ಮ ಸಂಕಷ್ಟವನ್ನು ಹೇಳಿಕೊಂಡು ಬರುವ ಎಲ್ಲರನ್ನೂ ತಾಯಿ ಅನುಗ್ರಹಿಸುತ್ತಿದ್ದಾಳೆ. 2ದಿನಗಳ ಈ ಜಾತ್ರೆಯಲ್ಲಿ ಎಲ್ಲರೂ ಸಹಕರಿಸಿ ಯಶಸ್ವಿಗೊಳಿಸಬೇಕು ಎಂಬುದಾಗಿ ಕರೆ ನೀಡಿದರು.
ಶ್ರೀ ಕ್ಷೇತ್ರ ಸಿಗಂದೂರು ದೇವಾಲಯದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯೆ ಅನಿತಾಕುಮಾರಿ, ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ತುಮರಿ ಗ್ರಾಮ ಪಂಚಾಯತ್ ಅಧ್ಯಕ್ಷ ದೇವಕಿ ರಾಮಚಂದ್ರ, ಹೊಳೆಯಪ್ಪ, ಚೇತನ್‌ರಾಜ್ ಕಣ್ಣೂರು, ಸೋಮಶೇಖರ್ ಲಾವಿಗೆರೆ, ಟಿ.ವಿ.ಪಾಂಡುರಂಗ, ಚಂದ್ರಮೂರ್ತಿ, ಸುರೇಂದ್ರ ನಾಯಕ್ ಇತರರು ಉಪಸ್ಥಿತರಿದ್ದರು.
ಶಿವಮೊಗ್ಗ: ಸಾಗರದ ಉಳ್ಳೂರಲ್ಲಿ ಅಕ್ರಮವಾಗಿ ‘ಮರ ಕಡಿತಲೆ’ ಮಾಡಿದವರ ವಿರುದ್ಧ ಕೇಸ್ ದಾಖಲು
ರಾಜ್ಯದ ‘ಗಿಲೆನ್-ಬಾರಿ ಸಿಂಡ್ರೋಮ್’ ಪೀಡಿತರಿಗೆ ಗುಡ್ ನ್ಯೂಸ್: ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆಗೆ ಅವಕಾಶ
BIG Alert: ನಿಮಗೂ ಈ ರೀತಿಯಾಗಿ ‘WhatsApp ಮೆಸೇಜ್’ ಬಂದಿದ್ಯಾ? ಕ್ಲಿಕ್ ಮಾಡಿದ್ರೆ ‘ಬ್ಯಾಂಕ್ ಖಾತೆ’ಯೇ ಖಾಲಿ ಎಚ್ಚರ!








