ಶಿವಮೊಗ್ಗ: ಸಾಗರದಲ್ಲಿ ಕೆಲವು ಸೈಬರ್‌ಗಳಲ್ಲಿ ನಕಲಿ ಕಾರ್ಮಿಕರ ಕಾರ್ಡ್ ಮಾಡಿಕೊಡುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ನಕಲಿ ಕಾರ್ಡ್ ಮಾಡಿಕೊಡುವವರು ಮತ್ತು ನಕಲಿ ಕಾರ್ಡ್ ಮಾಡಿಸಿಕೊಳ್ಳುವವರನ್ನು ಜೈಲಿಗೆ ಕಳಿಸಲಾಗುತ್ತದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಎಚ್ಚರಿಕೆ ನೀಡಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ನಗರಸಭೆ ರಂಗಮಂದಿರದಲ್ಲಿ ಶ್ರಮಜೀವಿ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪದಾಧಿಕಾರಿಗಳ ಪದಗ್ರಹಣ, ಟೀಶರ್ಟ್ ವಿತರಣೆ, ಹಿರಿಯ ಕಾರ್ಮಿಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದಂತ ಅವರು, ಸರ್ಕಾರ ಕಾರ್ಮಿಕರಿಗೆ ನೀಡುವ ಸೌಲಭ್ಯ ನೈಜ ಕಾರ್ಮಿಕರಿಗೆ ತಲುಪಬೇಕು. ಕಾರ್ಮಿಕರಿಗೆ ವಂಚನೆಯಾಗುವುದನ್ನು ಸಹಿಸಿಕೊಳ್ಳುವುದಿಲ್ಲ. ತಾಲ್ಲೂಕಿನಲ್ಲಿ ಕಾರ್ಮಿಕ ಸ್ನೇಹಿ ಅಧಿಕಾರಿಗಳಿಗೆ ಮಾತ್ರ ಅವಕಾಶ ಇದ್ದು, ಕಾರ್ಮಿಕರನ್ನು ಶೋಷಣೆ ಮಾಡುವ ಅಧಿಕಾರಿಯನ್ನು ಬೇರೆಡೆ ಕಳಿಸಲಾಗುತ್ತದೆ. ಕಾರ್ಮಿಕರಿಗೆ ಎಂತಹ ಸಮಸ್ಯೆ ಬಂದರೂ ನಿಮ್ಮ ಕುಟುಂಬದವನಾಗಿ ಅದನ್ನು ಬಗೆಹರಿಸಲು ಬೇಳೂರು ನಿಮ್ಮ ಜೊತೆ ಇರುತ್ತಾನೆ. ಗೋಪಾಲಕೃಷ್ಣ ಬೇಳೂರು ಮನೆಗೆ ಬಾಗಿಲು ಇಲ್ಲ. ಬೆಳಿಗ್ಗೆ 7ರಿಂದ 10ರವರೆಗೆ ನಮ್ಮ ಮನೆಬಾಗಿಲು ತೆರೆದಿರುತ್ತದೆ. ಮುಖಂಡರ ಸಹಕಾರ ಇಲ್ಲದೆಯೂ ನನ್ನನ್ನು ಭೇಟಿಯಾಗಿ ನಿಮ್ಮ ಸಮಸ್ಯೆ ಕುರಿತು ಪರಿಹಾರ ಕಂಡುಕೊಳ್ಳಿ ಎಂದರು.
ಸಂತೋಷ್ ಲಾಡ್ ಕಾರ್ಮಿಕ ಸಚಿವರಾದ ಮೇಲೆ ಕಾರ್ಮಿಕ ಇಲಾಖೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಕಾರ್ಮಿಕ ಪರವಾದ ಅನೇಕ ಯೋಜನೆಗಳು ಜಾರಿಗೆ ತರಲಾಗಿದೆ. ಸಾಗರ ತಾಲ್ಲೂಕು ಒಂದರಲ್ಲೆ ಸುಮಾರು 10ಸಾವಿರಕ್ಕೂ ಹೆಚ್ಚಿನ ಕಾರ್ಮಿಕರು ಇದ್ದು ನೀವು ಸಂಘಟಿತರಾಗಿ ನಿಮ್ಮ ಹಕ್ಕುಗಳನ್ನು ಸಂಘಟನೆ ಮೂಲಕ ಪಡೆಯುವಂತೆ ಆಗಬೇಕು. ಸರ್ಕಾರ ಕಾರ್ಮಿಕರಿಗೆ ನೀಡುತ್ತಿದ್ದ ವಿಮಾಮೊತ್ತವನ್ನು ಐದರಿಂದ ಎಂಟು ಲಕ್ಷ ರೂ.ಗೆ ಏರಿಸಿದೆ. ಪ್ರತಿಯೊಬ್ಬ ಕಾರ್ಮಿಕರು ವಿಮೆ ಮಾಡಿಸಿಕೊಳ್ಳಬೇಕು. ಕುಟುಂಬಕ್ಕೆ ಆಧಾರವಾಗಿರುವ ನಿಮಗೆ ಹೆಚ್ಚು ಕಡಿಮೆಯಾದರೆ ಕುಟುಂಬ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ. ಕಾರ್ಮಿಕರ ಮಕ್ಕಳು ಉನ್ನತ ಸ್ಥಾನಕ್ಕೆ ಹೋಗಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಎಂದು ಹೇಳಿದರು.
ಈ ವೇಳೆ ಸಂಘದ ಅಧ್ಯಕ್ಷ ರಾಮಚಂದ್ರ ಮೇಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗಣಪತಿ ಮಂಡಗಳಲೆ, ಲಲಿತಮ್ಮ, ಸೈಯದ್ ಜಾಕೀರ್, ರಮೇಶ್ ಕೆಳದಿಪುರ, ರಾಮಪ್ಪ, ಮೈಲಪ್ಪ, ಕೃಷ್ಣಮೂರ್ತಿ, ಹೊಸಂತೆ ಗಣಪತಿ, ಕೆರೆಯಪ್ಪ ಇನ್ನಿತರರು ಹಾಜರಿದ್ದರು. ಅನನ್ಯ ಪ್ರಾರ್ಥಿಸಿದರು. ಅಣ್ಣಪ್ಪ ಮೇಸ್ತಿç ಸ್ವಾಗತಿಸಿದರು. ಸತೀಶ್ ಅಂಗಡಿ ಪ್ರಾಸ್ತಾವಿಕ ಮಾತನಾಡಿದರು. ಹರೀಶ್ ನಿರೂಪಿಸಿದರು.








