ಶಿವಮೊಗ್ಗ: ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಜನರೇಟರ್ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವಂತ ಆರೋಗ್ಯ ಇಲಾಖೆಯ ಕಚೇರಿ ಅಧೀಕ್ಷಕ ಸುನೀಲ್, ಗುತ್ತಿಗೆ ನೌಕರ ಸುರೇಶ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚಿಸಿದ್ದಾರೆ.
ಇಂದು ಸಾಗರ ನಗರದ ತಮ್ಮ ನಿವಾಸದಲ್ಲಿ ಈ ಸಂಬಂಧ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆಗೆ ಸಭೆಯನ್ನು ನಡೆಸಿದರು. ಕಾರ್ಗಲ್, ಆನಂದಪುರ ಆಸ್ಪತ್ರೆಯ ಆಂಬುಲೆನ್ಸ್ ಕೆಟ್ಟು ಹೋಗಿದೆ. ಅವುಗಳು ರಿಪೇರಿ ಆಗಿ ಬರೋವರೆಗೂ ರೋಗಿಗಳಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಲು ಸೂಚಿಸಿದರು.
ಸಾಗರ ಗ್ರಾಮಾಂತರ ಭಾಗದ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಕೊರತೆಯ ಬಗ್ಗೆಯೂ ಚರ್ಚಿಸಿದಂತ ಅವರು, ಬ್ಯಾಕೋಡು, ಲಿಂಗದಹಳ್ಳಿ, ತಾಳಗುಪ್ಪ ಆಸ್ಪತ್ರೆಗಳಲ್ಲಿನ ಈ ಸಮಸ್ಯೆ ಸರಿಪಡಿಸುವಂತೆ ಸಭೆಯಲ್ಲಿ ಹಾಜರಿದ್ದಂತ ಡಿಹೆಚ್ಓ ಡಾ.ನಟರಾಜ್ ಗೆ ಶಾಸಕ ಗೋಪಾಲಕೃಷ್ಣ ಬೇಳೂರು ನಿರ್ದೇಶಿಸಿದರು.
ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿದ್ದಂತ ಹಾಳಾಗಿದ್ದ 62.5 ಕೆವಿ ಜನರೇಟರ್ ಕಳ್ಳತನದಲ್ಲಿ ಆರೋಗ್ಯ ಇಲಾಖೆಯ ನೌಕರರೇ ಭಾಗಿಯಾಗಿರುವ ಬಗ್ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅಚ್ಚರಿ ವ್ಯಕ್ತಪಡಿಸಿದರು. ಅಲ್ಲದೇ ಡಿಹೆಚ್ಓಗೆ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಚೇರಿ ಅಧೀಕ್ಷಕ ಸುನೀಲ್, ಗುತ್ತಿಗೆ ಎಲೆಕ್ಟ್ರೀಷಿಯನ್ ಸುರೇಶ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದರು.
ಇನ್ನೂ ಸಾಗರ ತಾಲ್ಲೂಕಿನ ಆರೋಗ್ಯ ಸೇವೆಗಾಗಿ ಶೀಘ್ರದಲ್ಲೇ ಸಂಚಾರಿ ಚಿಕಿತ್ಸಾಲಯ ಘಟಕ ಆರಂಭಿಸುವುದಾಗಿ ತಿಳಿಸಿದರು.
ಈ ಸಭೆಯಲ್ಲಿ ಶಿವಮೊಗ್ಗ ಡಿಹೆಚ್ಓ, ಸಾಗರ ಟಿಹೆಚ್ಓ, ಸಾಗರ ಉಪ ವಿಭಾಗೀಯ ಆಸ್ಪತ್ರೆಯ ಎಎಂಓ ಸೇರಿದಂತೆ ಇತರೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ವಿಧಿವಶ | Satyapal Malik No More