ಶಿವಮೊಗ್ಗ : ಸಾಗರದಲ್ಲಿ ನಿವೇಶನ ಇಲ್ಲದವರಿಗೆ ನಿವೇಶನ ಜೊತೆಗೆ ಗುಂಪು ಮನೆ ನಿರ್ಮಾಣಕ್ಕೆ ಗಮನ ಹರಿಸಲಾಗುತ್ತದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಈ ಮೂಲಕ ಸಾಗರದ ನಿವೇಶನ ರಹಿತರಿಗೆ ಶಾಸಕರು ಗುಡ್ ನ್ಯೂಸ್ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರದ ನಗರಸಭೆಯಲ್ಲಿ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದೆ ಆಶ್ರಯ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರ ಅರ್ಜಿಯನ್ನು ನಿವೇಶನ ಕೊಡುವ ಸಂದರ್ಭದಲ್ಲಿ ಪರಿಗಣಿಸಲಾಗುತ್ತದೆ ಎಂದರು.
ಎಲ್ಲರಿಗೂ ಪ್ರತ್ಯೇಕ ನಿವೇಶನ ಕೊಡಲು ಕಷ್ಟಸಾಧ್ಯವಾಗಬಹುದು. ಈ ಹಿನ್ನೆಲೆಯಲ್ಲಿ ಗುಂಪು ಮನೆಗಳನ್ನು ನಿರ್ಮಿಸಿ, ಎಲ್ಲರಿಗೂ ಸೂರು ಕಲ್ಪಿಸುವ ಉದ್ದೇಶವನ್ನೂ ಹೊಂದಲಾಗಿದೆ. ಈಗಾಗಲೆ ನಿವೇಶನ ನೀಡಲು ಅಗತ್ಯವಾದ ಜಾಗವನ್ನು ಕೆಲವು ಕಡೆಗಳಲ್ಲಿ ಗುರುತಿಸಲಾಗಿದ್ದು, ಅದನ್ನು ಮಂಜೂರಾತಿಗೆ ಕಳಿಸಲಾಗುತ್ತದೆ ಎಂದು ಹೇಳಿದರು.
ಹಿಂದೆ ಕೆಲವರು ಮನೆ ಕಟ್ಟಿಕೊಳ್ಳಲು ಆಶ್ರಯ ನಿವೇಶನ ಪಡೆದಿದ್ದು ಮನೆಕಟ್ಟದೆ ನಿವೇಶನ ಹಾಗೆ ಬಿಟ್ಟಿದ್ದಾರೆ. ಆಶ್ರಯ ನಿವೇಶನ ಪಡೆದು ಯರ‍್ಯಾರು ಮನೆ ಕಟ್ಟಿಲ್ಲವೋ ಅಂತಹವರಿಗೆ ನೋಟಿಸ್ ನೀಡಲು ತಿಳಿಸಿದೆ. ಸರ್ಕಾರ ನೀಡಿದ ಉದ್ದೇಶ ಈಡೇರಿಸದೆ ಹೋದಲ್ಲಿ ಅಂತಹವರಿಗೆ ನಿವೇಶನ ಏಕೆ. ವಾಯಿದೆಯೊಳಗೆ ಮನೆ ಕಟ್ಟದೆ ಇದ್ದರೆ ಅದನ್ನು ರದ್ದುಪಡಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದರು.
ಈ ಸಂದರ್ಭದಲ್ಲಿ ಸಾಗರ ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ತಹಶೀಲ್ದಾರ್ ರಶ್ಮಿ, ಪೌರಾಯುಕ್ತ ಎಚ್.ಕೆ.ನಾಗಪ್ಪ, ಆಶ್ರಯ ಸಮಿತಿ ಸದಸ್ಯ ಮಕ್ಬೂಲ್, ಪರಿಮಳ, ಶಿವಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.