ಶಿವಮೊಗ್ಗ : ಕೆಲವರು ಕೆಪಿಸಿ ಜಾಗವನ್ನು ನಿಮ್ಮ ಹೆಸರಿಗೆ ಮಂಜೂರು ಮಾಡಿಸಿ ಕೊಡುತ್ತೇವೆ ಎಂದು ರೈತರಿಂದ ಹಣ ವಸೂಲಿ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಕುಂದಾಪುರ ಮೂಲದ ವ್ಯಕ್ತಿಯೊಬ್ಬ ಜನರಿಂದ ಹಣ ವಸೂಲಿ ಮಾಡುತ್ತಿದ್ದು ಸಾರ್ವಜನಿಕರು ಹಣ ಕೊಟ್ಟು ಮೋಸ ಹೋಗಬೇಡಿ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಎಂಬುದಾಗಿ ರೈತರಿಗೆ ಕಿವಿಮಾತು ಹೇಳಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಉಪವಿಭಾಗಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಹೆದ್ದಾರಿ ಪ್ರಾಧಿಕಾರ, ನಗರಸಭೆ, ಪಿಡಬ್ಲ್ಯೂಡಿ ಮತ್ತು ಮೆಸ್ಕಾಂ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಕೆಪಿಸಿ ವಶದಲ್ಲಿರುವ ಭೂಮಿಯನ್ನು ಮಂಜೂರು ಮಾಡುತ್ತಿದ್ದಾರೆ ಎನ್ನುವ ವದಂತಿ ಹಬ್ಬಿಸುತ್ತಿದ್ದು ಇದು ಸಂಪೂರ್ಣ ಸತ್ಯಕ್ಕೆ ದೂರವಾದ ಸಂಗತಿ ಎಂದು ಹೇಳಿದರು.
ಆಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ ಕೆಪಿಸಿ ಒಂದಷ್ಟು ಭೂಮಿ ವಶಪಡಿಸಿಕೊಂಡಿದೆ. ಅದನ್ನು ಪುನಃ ಸಂತ್ರಸ್ತರಿಗೆ ಕೊಡುವ ಪ್ರಸ್ತಾಪ ಸದ್ಯ ಸರ್ಕಾರದ ಎದುರು ಇಲ್ಲ. ಈ ಬಗ್ಗೆ ಮುಂದೆ ನಾನು ಪ್ರಯತ್ನ ಮಾಡುತ್ತೇನೆ. ಆದರೆ ಕೆಲವು ಬ್ರೋಕರ್‌ಗಳು ಹುಟ್ಟಿಕೊಂಡು ಜನರನ್ನು ವಂಚಿಸುತ್ತಿದ್ದಾರೆ. ಸುಳ್ಳು ಸುದ್ದಿ ನಂಬಬೇಡಿ. ತೀ.ನ.ಶ್ರೀನಿವಾಸ್ ಕೆಪಿಸಿ ವಶದಲ್ಲಿರುವ ಭೂಮಿ ಹಿಂದಿರುಗಿಸಿ ಎಂದು ಅರ್ಜಿ ಸಲ್ಲಿಸಿದ್ದಾರೆ. ಕೆಲವರು ತುಮರಿ ಭಾಗದಲ್ಲಿ ಹೋಗಿ ರೈತರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಜನರು ಸುಳ್ಳು ಸುದ್ದಿಯನ್ನು ನಂಬಬೇಡಿ. ಕುಂದಾಪುರ ಮೂಲದ ವ್ಯಕ್ತಿ ತುಮರಿ ಭಾಗದಲ್ಲಿ ಕಂಡು ಬಂದರೆ, ಹಣ ವಸೂಲಿ ಮಾಡುತ್ತಿದ್ದರೆ, ಅವನನ್ನು ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದರು.
ನಗರವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಲು ಸಿದ್ದತೆ ನಡೆಸಿದ್ದೇವೆ. ಮುಂದಿನ ಎರಡು ತಿಂಗಳಿನಲ್ಲಿ ರಸ್ತೆ ಕಾಮಗಾರಿ ಮುಗಿಸಬೇಕು. ಪೊಲೀಸ್ ಸ್ಟೇಷನ್ ಸ್ಥಳಾಂತರಿಸಿ ರಸ್ತೆ ಅಗಲೀಕರಣ ಮಾಡಲು ತಿಳಿಸಿದೆ. ಇದರ ಜೊತೆಗೆ ಮಾರ್ಕೇಟ್ ರಸ್ತೆ ಅಗಲೀಕರಣಕ್ಕೆ ಸಹ ನಿಗಾವಹಿಸಿದೆ. ರೈಲ್ವೆ ನಿಲ್ದಾಣ ರಸ್ತೆಯನ್ನು ದ್ವಿಪಥ ರಸ್ತೆಯಾಗಿ ರೂಪಿಸುವುದು, ಅಗ್ರಹಾರ, ಶಿವಪ್ಪನಾಯಕ ವೃತ್ತ, ಪೊಲೀಸ್ ಸ್ಟೇಷನ್ ವೃತ್ತವನ್ನು ಅಭಿವೃದ್ದಿಪಡಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಾಗರ ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಲೋಕೇಶ್, ರಾಕೇಶ್, ದೇವರಾಜ್, ಗೋಪಿನಾಥ್, ಶಾಸಕರ ವಿಶೇಷ ಕರ್ತವ್ಯಾಧಿಕಾರಿ ರಮೇಶ್ ಟಿ.ಪಿ. ಇನ್ನಿತರರು ಹಾಜರಿದ್ದರು.
‘ಸಚಿವ ಸ್ಥಾನ’ಕ್ಕಾಗಿ ಅಗತ್ಯ ಬಿದ್ದರೇ ವರಿಷ್ಟರನ್ನು ಭೇಟಿಯಾಗಲು ದೆಹಲಿಗೆ ತೆರಳುವೆ: ಶಾಸಕ ಗೋಪಾಲಕೃಷ್ಣ ಬೇಳೂರು
ಶಿವಮೊಗ್ಗ: ನ.9ರಂದು ಕಾಗೋಡು ತಿಮ್ಮಪ್ಪಗೆ ಮಲೆನಾಡು ಲೋಹಿಯಾ ಪ್ರಶಸ್ತಿ ಪ್ರದಾನ – ಸಂತೋಷ್ ಸದ್ಗುರು
ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿ ‘ನಾಯಕತ್ವ ಗುಣ’ ಬೆಳೆಸಿಕೊಳ್ಳಲು ‘NSS’ ಸಹಕಾರಿ: ಶಾಸಕ ಗೋಪಾಲಕೃಷ್ಣ ಬೇಳೂರು








