ಶಿವಮೊಗ್ಗ : ಜಿಲ್ಲೆಯ ಪ್ರಸಿದ್ಧ ಸಾಗರದ ಮಾರಿಜಾತ್ರೆಯನ್ನು ಯಶಸ್ವಿಗೊಳಿಸುವಂತೆ ಪ್ರತಿಯೊಬ್ಬ ಅಧಿಕಾರಿಗಳು ಶ್ರಮಿಸಲು ಶಾಸಕ ಗೋಪಾಲಕೃಷ್ಣ ಬೇಳೂರು ಕರೆ ನೀಡಿದರು. ಅಲ್ಲದೇ ಒಂದೊಂದು ಸಮಿತಿಗೆ ತಾಲ್ಲೂಕು ಮಟ್ಟದ ಒಬ್ಬೊಬ್ಬ ಅಧಿಕಾರಿಯನ್ನು ನೇಮಕ ಮಾಡಲಾಗುತ್ತದೆ. ಅಧಿಕಾರಿಗಳು ಜಾತ್ರೆ ಯಶಸ್ಸಿಗಾಗಿ ತಮಗೆ ವಹಿಸಿರುವ ಸಮಿತಿ ಜೊತೆ ಸೇರಿ ಕೆಲಸ ಮಾಡಬೇಕೆಂದು ಸೂಚಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮಾರಿಕಾಂಬ ಜಾತ್ರೆ ಯಶಸ್ಸಿಗೆ 20 ಉಪ ಸಮಿತಿಗಳನ್ನು ರಚಿಸಲಾಗಿದೆ. ಅಧಿಕಾರಿಗಳ ಜೊತೆ ಸಮಿತಿ ಸಂಚಾಲಕರು, 20 ಸದಸ್ಯರು ಇರುತ್ತಾರೆ. ಎಲ್ಲರೂ ಸೇರಿ ಜಾತ್ರೆ ಯಶಸ್ವಿಗೊಳಿಸುವತ್ತ ಗಮನ ಹರಿಸಬೇಕಾಗಿದೆ ಎಂದರು.
ಸಾಗರದ ಮಾರಿಕಾಂಬ ದೇವಿ ಜಾತ್ರೆಗೆ ಕನಿಷ್ಟ 8 ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಮೂರು ದಿನಗಳ ಕಾಲ ಅಮ್ಮನವರ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸಲಿದ್ದು, ಸದರಿ ಸಾಲಿನಲ್ಲಿ ಬಿಸಿಲಿನಲ್ಲಿ ನಿಲ್ಲುತ್ತಾರೆ. ಅವರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಹಿಂದಿನ ಜಾತ್ರೆಯಂತೆ ವಿಐಪಿ ಪಾಸ್ ಸಂಸ್ಕೃತಿಯನ್ನು ಬಿಟ್ಟು ಪ್ರಮುಖರು ಕೆಲವರಿಗೆ ವಿಶೇಷ ಪೂಜೆಯ ಪಾಸ್ ನೀಡಲಾಗುತ್ತದೆ. ಬೆಳಗ್ಗೆ 10 ಗಂಟೆಯ ನಂತ್ರ ವಿಐಪಿ ಪಾಸ್ ಹೊಂದಿದವರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಪಾಸ್ ಹೊಂದಿರುವವರು ಸರದಿ ಸಾಲಿನಲ್ಲಿ ನಿಂತವರು ದೇವರ ದರ್ಶನ ಪಡೆದ ನಂತರ ತಾವು ದೇವಿ ದರ್ಶನ ಪಡೆಯಬಹುದು ಎಂದು ತಿಳಿಸಿದರು.
ಈ ಬಾರಿಯ ಮಾರಿಕಾಂಬ ದೇವಿ ಜಾತ್ರೆಯ ವಸ್ತುಪ್ರದರ್ಶನ ಹರಾಜು 1.34 ಕೋಟಿ ರೂ.ಗೆ ಹೋಗಿದೆ. ಇದರಿಂದ ದೇವಸ್ಥಾನದ ವತಿಯಿಂದ ಶಾಲೆ ಮತ್ತು ಕಲ್ಯಾಣ ಮಂಟಪ ನಿರ್ಮಿಸುವ ಉದ್ದೇಶಕ್ಕೆ ಸ್ಪೂರ್ತಿ ಸಿಕ್ಕಂತಾಗಿದೆ. ಜಾತ್ರೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ಭಾಗಗಳಲ್ಲಿ ಸಿಸಿಟಿವಿ ಕ್ಯಾಮರಾವನ್ನು ಮಾರಿಕಾಂಬಾ ಸಮಿತಿಯಿಂದ ಅಳವಡಿಸಲಾಗುತ್ತದೆ. ಇದರ ಜೊತೆಗೆ ಸ್ವಚ್ಚತೆಗೆ ಆದ್ಯತೆ ನೀಡಿ ನಗರಸಭೆಯಿಂದ ಹೆಚ್ಚಿನ ಜನರನ್ನು ಸ್ವಚ್ಚತಾ ಕಾರ್ಯಕ್ಕೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಜಾತ್ರೆಗೆ ಬರುವವರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ನಮ್ಮ ಕ್ಲಿನಿಕನ್ನು ತಾತ್ಕಾಲಿಕವಾಗಿ ಜಾತ್ರೆ ನಡೆಯುವ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತದೆ. ಹೆಚ್ಚುವರಿ ಆರೋಗ್ಯ ಸಿಬ್ಬಂದಿಯನ್ನು ಜಾತ್ರೆ ಮುಗಿಯುವವರೆಗೆ ನೇಮಕ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜೊತೆಗೆ ಒಂದು ಹೆಚ್ಚುವರಿ ಅಂಬ್ಯುಲೆನ್ಸ್ ಅನ್ನು ತುರ್ತು ಸೇವೆಗೆ ನಿಯೋಜಿಸಲಾಗುತ್ತದೆ ಎಂದು ತಿಳಿಸಿದರು.
ಇನ್ನೂ ಜಾತ್ರೆ ಆರಂಭದ ಮಂಗಳವಾರ ಮತ್ತು ಬುಧವಾರ ಜಾತ್ರೆ ಹಿನ್ನೆಲೆಯಲ್ಲಿ ಪಟ್ಟಣ ವ್ಯಾಪ್ತಿಯ ಶಾಲೆಗಳಿಗೆ ರಜೆ ನೀಡಲು ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಜಾತ್ರೆಯಲ್ಲಿ ಸರಗಳ್ಳತನ ಇನ್ನಿತರೆ ಅಪರಾಧ ಕೃತ್ಯ ತಡೆಗಟ್ಟಲು ಹೆಚ್ಚುವರಿ ಕ್ರೈಂ ಬ್ರಾಂಚ್ ಸಿಬ್ಬಂದಿ ನೇಮಿಸುವ ಜೊತೆಗೆ ಹೆಚ್ಚುವರಿ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಲು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಮಾಡಲಾಗುತ್ತದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಜಾತ್ರೆ ಮುಗಿಯುವವರೆಗೂ ಮೊಕ್ಕಾಂ ಹೂಡಲಿದ್ದಾರೆ. ಅಮ್ಯೂಸ್‌ಮೆಂಟ್ ಪಾರ್ಕ್ ಹೆಚ್ಚಿನ ದರಕ್ಕೆ ಖರೀದಿ ಮಾಡಿದ್ದೇವೆ ಎಂದು ಆಟಿಕೆಗಳ ದರ ಜಾಸ್ತಿ ಮಾಡುವಂತಿಲ್ಲ. ಜಾತ್ರೆಗೆ ಬರುವ ಬಡ ಮತ್ತು ಮಧ್ಯಮ ಕುಟುಂಬದವರು ಎಲ್ಲ ಸೇವೆ ಪಡೆಯುವಂತೆ ಸಮಿತಿಯಿಂದ ದರ ನಿಗಧಿ ಮಾಡಿ ತಿಳಿಸಲಾಗುತ್ತದೆ. ಅದೇ ದರವನ್ನು ನಿಗದಿ ಮಾಡಬೇಕು ಎಂದರು..
ಈ ವೇಳೆ ಸಾಗರ ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ತಹಶೀಲ್ದಾರ್ ಚಂದ್ರಶೇಖರ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಶಿವಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಭೂಮೇಶ್ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಶ್ರೀ ಮಾರಿಕಾಂಬ ದೇವಿ ನ್ಯಾಸ ಸಮಿತಿಯ ಸದಸ್ಯರು ಸೇರಿದಂತೆ ಇನ್ನಿತರರು ಹಾಜರಿದ್ದರು.








