ಬೆಳಗಾವಿ ಸುವರ್ಣಸೌಧ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸುಪ್ರಸಿದ್ಧ ಧಾರ್ಮಿಕ ಸ್ಥಳ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ತುಮರಿ- ಬ್ಯಾಕೋಡು ಭಾಗದಲ್ಲಿ ಹೊಸದಾಗಿ ಪೊಲೀಸ್ ಠಾಣೆಯನ್ನು ಆರಂಭಿಸುವಂತೆ ಸದನದಲ್ಲೇ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಪಟ್ಟು ಹಿಡಿದರು. ಇದಕ್ಕೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಪುನರ್ ಪರಿಶೀಲನೆ ನಡೆಸಲಾಗುವುದು ಎಂಬುದಾಗಿ ಉತ್ತರಿಸಿದೆ.
ವಿಧಾನ ಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು, ಈಗಾಗಲೇ ಶರಾವತಿ ನದಿಗೆ ಸೇತುವೆ ಕಟ್ಟಿರುವ ಹಿನ್ನೆಲೆಯಲ್ಲಿ ಸಿಗಂದೂರು ಚೌಡೇಶ್ವರಿ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದೆ. ಕಾನೂನು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬ್ಯಾಕೋಡು ಉಪಠಾಣೆ ಕಾರ್ಯ ನಿರ್ವಹಿಸುತ್ತಿದೆ. ಸದರಿ ಉಪ ಠಾಣೆಯಲ್ಲಿ ಮೇಲ್ದರ್ಜೆಗೆ ಏರಿಸಿ ಹೊಸ ಪೊಲೀಸ್ ಠಾಣೆ ಆರಂಭಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಗೃಹ ಸಚಿವ ಪರಮೇಶ್ವರ್, ಶರಾವತಿ ನದಿಗೆ ಸೇತುವೆ ಆಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಆದರೆ ರಾಷ್ಟ್ರೀಯ ಪೊಲೀಸ್ ಆಯೋಗದ ವರದಿ ಮಾರ್ಗ ಸೂಚಿಯ ಅನ್ವಯ ಅಲ್ಲಿ ಪೊಲೀಸ್ ಠಾಣೆ ತೆರೆಯಲು ಆಗದು ಎಂದು ಹೇಳಿದರು.
ಒಂದು ಪೊಲೀಸ್ ಠಾಣೆ ತೆರಬೇಕಾದರೆ 50 ಸಾವಿರ ಜನಸಂಖ್ಯೆ ಮತ್ತು 300 ಅಪರಾಧ ಪ್ರಕರಣಗಳು ಆಗಿರಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರದ ಅಧಿಕಾರಿಗಳು ಕಾನೂನು ಚೌಕಟ್ಟಿನಲ್ಲಿ ವರದಿ ಸಲ್ಲಿಸಿದ್ದಾರೆ. ಈಗಗಾಲೇ ಶಾಸಕರು ಕೂಡ ತಮ್ಮ ಜತೆಗೆ ಮಾತುಕತೆ ನಡೆಸಿದ್ದಾರೆ. ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಈಗಿರುವ ಮಾರ್ಗ ಸೂಚಿಯನ್ನು ಸಡಿಲಿಸಬಹುದೇನೂ ಅಂತ ನೋಡಿ ಹೊಸದಾಗಿ ಪೊಲೀಸ್ ಠಾಣೆ ತೆರೆಯುವ ಬಗ್ಗೆ ಪುನರ್ ಪರೀಶಿಸಿಸುವುದಾಗಿ ಹೇಳಿದರು.
ಮುಂಬರುವ ಬಜೆಟ್ ನಲ್ಲಿ ಸಿಗಂದೂರು ಭಾಗದಲ್ಲಿ ಹೊಸ ಪೊಲೀಸ್ ಠಾಣೆ ತೆರೆಯುವ ಪರಿಶೀಲನೆ ನಡೆಸುವುದಾಗಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿನ ವಿಧಾನಸಭೆಯಲ್ಲೇ ಗೃಹ ಸಚಿವ ಡಾ.ಜಿ ಪರಮೇಶ್ವರ್ ಭರವಸೆ ನೀಡಿದರು.
ಖಾಸಗಿ ಶಾಲೆಗಳಲ್ಲಿ ಕನ್ನಡ ಕಲಿಸದೇ ಹೋದರೆ ನಿರ್ದಾಕ್ಷಿಣ್ಯ ಕ್ರಮ: ಸಚಿವ ಮಧು ಬಂಗಾರಪ್ಪ ಎಚ್ಚರಿಕೆ
ಐಪಿಎಲ್ 2026 ಹರಾಜು: ಹೀಗಿದೆ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ | IPL 2026 Auction








