ಶಿವಮೊಗ್ಗ: ಅರಣ್ಯ ಇಲಾಖೆಯಿಂದ ರೈತರಿಗೆ ನೋಟಿಸ್ ಕೊಟ್ರೆ ಸುಮ್ಮನಿರುವುದಿಲ್ಲ. ಈ ಬಗ್ಗೆ ಅರಣ್ಯ ಸಚಿವರು ನೋಟಿಸ್ ಕೊಡದಂತೆ ಸೂಚಿಸಿದ್ದಾರೆ. ಸೂಚನೆ ಮೀರಿ ನಡೆದುಕೊಂಡರೇ ಅಂತಹ ಅರಣ್ಯ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಖಡಕ್ ವಾರ್ನಿಂಗ್ ಮಾಡಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸಾಗರ ತಾಲ್ಲೂಕು ಕೆಡಿಪಿ ತ್ರೈಮಾಸಿಕ ಸಭೆಯನ್ನು ನಡೆಸಿದರು. ಸಭೆಯ ಆರಂಭದಲ್ಲೇ ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಂತ ಅವರು, ಯಾವುದೇ ರೈತರಿಗೆ ಅರಣ್ಯ ಒತ್ತುವರಿ ಸಂಬಂಧ ನೋಟಿಸ್ ನೀಡುವಂತಿಲ್ಲ. ಹೊಸದಾಗಿ ಒತ್ತುವರಿ ಮಾಡುವುದನ್ನು ತಡೆಯುವಂತೆ ನಿರ್ದೇಶಿಸಿದರು.
ಅರಣ್ಯ ಇಲಾಖೆಯಿಂದ ರೈತರಿಗೆ ನೋಟಿಸ್ ನೀಡುವ ಸಂಬಂಧ ಸಚಿವ ಈಶ್ವರ್ ಖಂಡ್ರೆ ಅವರ ಬಳಿಯಲ್ಲಿಯೂ ಚರ್ಚಿಸಲಾಗಿದೆ. ರೈತರಿಗೆ ನೋಟಿಸ್ ನೀಡದಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. ಒಂದು ವೇಳೆ ನಿಯಮ ಮೀರಿ ನೋಟಿಸ್ ನೀಡುವಂತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂಬುದಾಗಿ ಅರಣ್ಯಾಧಿಕಾರಿಗಳ ಗಮನಕ್ಕೆ ತಂದರು.
ರೈತರಿಗೆ ಯಾವುದೇ ಸಮಸ್ಯೆ ಮಾಡಬೇಡಿ. ಹೊಸ ಒತ್ತುವರಿಗೆ ಅವಕಾಶ ನೀಡಬೇಡಿ. ರೈತರಿಗೆ ಸಮಸ್ಯೆ ಮಾಡಿದ್ರೆ ನಾನು ಸುಮ್ಮನಿರುವುದಿಲ್ಲ ಎಂಬುದಾಗಿ ಎಚ್ಚರಿಕೆ ನೀಡಿದರು.
ಸಾಗರ ನಗರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸೂಚನೆ
ಸಾಗರ ನಗರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಈ ಕುರಿತಂತೆ ಕ್ರಮವಹಿಸುವಂತೆ ನಗರಸಭೆ ಆಯುಕ್ತ ಹೆಚ್.ಕೆ ನಾಗಪ್ಪ ಅವರಿಗೆ ಸೂಚಿಸಿದಂತ ಶಾಸಕರು, ಸಾಗರಕ್ಕೆ ರಾಜ್ಯ, ಹೊರ ರಾಜ್ಯ, ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ಸ್ವಚ್ಛವಾಗಿಲ್ಲದಿಲ್ಲದೇ ನಮ್ಮನ್ನೇ ಕೇಳೋದು. ಆದಷ್ಟು ನಗರವನ್ನು, ರಸ್ತೆಗಳನ್ನು ಸ್ವಚ್ಛಂದವಾಗಿ ಇರಿಸುವಂತೆ ಸೂಚಿಸಿದರು.
ಈ ಹಿಂದೆ ನೀಡಿದಂತ ಕೆಲಸ ಮುಗಿದಿಲ್ಲ. ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಬೇಕು. ಡಾಂಬಾರ್ ರಸ್ತೆ ಮಾಡಲಾಗದೇ ಇದ್ದರೇ ಕಾಂಕ್ರಿಟ್ ರಸ್ತೆ ಮಾಡಿಸಿ. ಅದಕ್ಕೆ ಎಷ್ಟೇ ಖರ್ಚಾದರೂ ಪರವಾಗಿಲ್ಲ ಎಂಬುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.
ಸಾಗರ ಸಿಟಿ ತುಂಬಾ ಅದ್ಭುತವಾಗಿರುವಂತೆ ನೋಡಿಕೊಳ್ಳಬೇಕು. ಅದಕ್ಕೆ ಏನು ನೆರವು ಬೇಕೋ ಕೇಳಿ. ನಾನು ಮಾಡೋದಕ್ಕೆ ಸಿದ್ದನಿದ್ದೇನೆ. ಸರ್ಕಾರದ ಮಟ್ಟದಲ್ಲೂ ಅನುದಾನ ತರುವಂತ ಕೆಲಸ ಮಾಡಲಿದ್ದೇನೆ. ಕೆಳದಿ ರಸ್ತೆ ಅಗಲೀಕರಣ ಆಗಬೇಕು. ಹೊಸನಗರ ರಸ್ತೆ, ನಗರಸಭೆ ಕಾಮಗಾರಿಯನ್ನು ಗಡುವಿನ ಒಳಗಾಗಿ ಮುಗಿಸಬೇಕು ಎಂದು ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದಂತ ನಗರಸಭೆ ಆಯುಕ್ತ ಹೆಚ್.ಕೆ ನಾಗಪ್ಪ ಡಿಸೆಂಬರ್ ಒಳಗೆ ರಸ್ತೆ ಅಗಲೀಕರಣ ಕಾಮಗಾರಿ ಮುಗಿಯಲಿದೆ. ಪುಡ್ ಕೋರ್ಟ್ ನಿರ್ಮಾಣ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಲಾಗುತ್ತದೆ. ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುವಂತವರೆಲ್ಲರನ್ನು ಪುಡ್ ಕೋರ್ಟ್ ನಲ್ಲಿ ಮಾರಾಟ ಮಾಡುವಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಸಾಗರ ನಗರದಲ್ಲಿ ಆಹಾರದ ಗುಣಮಟ್ಟ ಪರೀಕ್ಷೆ ನಡೆಸಬೇಕು
ಸಾಗರಕ್ಕೆ ಪ್ರವಾಸಿಗರು ಹೆಚ್ಚಾಗಿ ಬರುವ ಕಾರಣ, ಅಲ್ಲಲ್ಲಿ ಆಹಾರದ ಗುಣಮಟ್ಟದ ಬಗ್ಗೆಯೂ ದೂರುಗಳು ಕೇಳಿ ಬರುತ್ತಿವೆ. ಪ್ರವಾಸಿಗರಿಂದ ಹೆಚ್ಚು ದರ ವಸೂಲಿ ಮಾಡುತ್ತಿರುವ ಆರೋಪ ಕೂಡ ಕೇಳಿಬಂದಿದೆ. ಈ ಬಗ್ಗೆ ನಗರಸಭೆಯಿಂದ ಆಹಾರ ಪರೀಕ್ಷೆ ಮಾಡಿಸಬೇಕು ಎಂದರು. ಅದಕ್ಕೆ ನಗರಸಭೆ ಆಯುಕ್ತ ನಾಗಪ್ಪ ಅವರು ಸಾಗರದಲ್ಲಿ ಪುಡ್ ಸೇಫ್ಟಿ ಅಧಿಕಾರಿಗಳಿಲ್ಲ. ಶಿವಮೊಗ್ಗದಿಂದಲೇ ಬರಬೇಕು. ಅಲ್ಲಿಂದ ಕರೆಸಿ, ಮುಂದಿನ ವಾರ ಸಾಗರ ನಗರದಲ್ಲಿನ ಆಹಾರ ಗುಣಮಟ್ಟದ ಪರೀಕ್ಷೆಯನ್ನು ನಡೆಸಲಾಗುವುದು ಎಂದರು.
ಮಾರಿಕಾಂಬ ದೇವಸ್ಥಾನದ ಬಳಿ ಟ್ರಾಫಿಕ್ ಜಾಮ್ ಸರಿಪಡಿಸಿ
ಮಾರಿಕಾಂಬ ದೇವಸ್ಥಾನದ ಬಳಿಯಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಪಾರ್ಕ್ ಮಾಡಲಾಗುತ್ತಿದೆ. ಈ ಕಾರಣಕ್ಕೆ ಸಂಚಾರ ದಟ್ಟಣೆ ಕೂಡ ಉಂಟಾಗುತ್ತಿದೆ. ಇದರನ್ನು ಸರಿಪಡಿಸಿ. ಬೆಳಿಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ. ವಾಹನ ನಿಲುಗಡೆ ನಿಷೇಧಿತ ಪ್ರದೇಶದಲ್ಲಿ ವಾಹನ ಪಾರ್ಕಿಂಗ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂಬುದಾಗಿ ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್ ಗೆ ಸೂಚಿಸಿದರು.
ಸಾಗರ ತಾಲ್ಲೂಕಿನಲ್ಲಿ ಅಡಕೆ ಕೊಯ್ಲು ಆರಂಭಗೊಂಡಿದೆ. ಜೊತೆ ಜೊತೆಗೆ ಕಳ್ಳತನ ಪ್ರಕರಣಗಳು ನಡೆಯುವ ಸಾಧ್ಯತೆ ಇದೆ. ಆ ಬಗ್ಗೆಯೂ ಪೊಲೀಸ್ ಇಲಾಖೆ ಕ್ರಮವಹಿಸಬೇಕು. ಕಳ್ಳತನ ನಿಯಂತ್ರಣದ ಕೆಲಸ ಮಾಡಬೇಕು. ಈ ಹಿಂದಿನ ಹಳೆಯ ಕೇಸ್ ಗಳ ತನಿಖೆ ಚುರುಕುಗೊಳಿಸಿ, ಕಳ್ಳರನ್ನು ಪತ್ತೆ ಹಚ್ಚುವ ಕೆಲಸವಾಗಬೇಕು ಎಂದರು.
ಪರಪ್ಪನವರೇ.. ನೀವು ಸ್ಟ್ರಾಂಗ್ ಇದ್ರೆ ಕೆಲಸ ಸರಿಯಾಗಿ ನಡೆಯುತ್ತೆ
ಸಾಗರ ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪರಪ್ಪ ಅವರನ್ನು ನೀವು ಇನ್ನೂ ಸ್ಟ್ರಾಂಗ್ ಆಗಬೇಕು. ಆಗ ಆಸ್ಪತ್ರೆಯ ಕೆಲಸಗಳು ಸರಿಯಾಗಿ ನಡೆಯುತ್ತವೆ. ತಾಲ್ಲೂಕಿನ ಜನತೆಗೆ ಉತ್ತಮ ವೈದ್ಯಕೀಯ ಸೇವೆ ನೀಡುತ್ತಿರುವುದಕ್ಕೆ ಶ್ಲಾಘಿಸಿದಂತ ಶಾಸಕ ಬೇಳೂರು ಗೋಪಾಲಕೃಷ್ಣ, ಇನ್ನೂ ಹೆಚ್ಚು ಹೆಚ್ಚು ಉತ್ತಮ ಸೇವೆ ನೀಡುವಂತ ಕೆಲಸವಾಗಲಿ ಎಂದರು.
ಈ ವೇಳೆ ಉತ್ತರಿಸಿದಂತ ಡಾ.ಪರಪ್ಪ ಅವರು ಸಾಗರದಲ್ಲಿ ಸದ್ಯ ಕೆಎಫ್ ಡಿ ಪಾಸಿಟಿವ್ ಬಂದಿಲ್ಲ. ಪರೀಕ್ಷೆ ನಡೆಯುತ್ತಿದೆ. ಸಾಗರ ಸಾರ್ವಜನಿಕ ಆಸ್ಪತ್ರೆಗೆ ದಿನವೊಂದಕ್ಕೆ 1,000ಕ್ಕೂ ಹೆಚ್ಚು ಹೊರ ರೋಗಿಗಳು ಭೇಟಿ ನೀಡುತ್ತಿದ್ದಾರೆ. ಅವರಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡುವಂತ ಕೆಲಸ ಮಾಡಲಾಗುತ್ತಿದೆ. ಊಟದ ಸಮಯದಲ್ಲೂ ರೋಗಿಗಳಿಗೆ ವೈದ್ಯಕೀಯ ಸೇವೆ ನೀಡುವಂತ ಕೆಲಸ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಇಷ್ಟು ರೋಗಿಗಳು ಬರ್ತಾ ಇದ್ದಾರೆ ಅಂದ್ರೆ ಖುಷಿ ಪಡಬೇಕು. ನೀವು ಸ್ಟ್ರಾಂಗ್ ಇರಬೇಕು. ಸಾಗರ ಸಾರ್ವಜನಿಕ ಆಸ್ಪತ್ರೆಗೆ 1.80 ಕೋಟಿ ನೀಡಲಾಗಿದೆ. ಎಲ್ಲಾ ಶೌಚಾಲಯವನ್ನು ದುರಸ್ಥಿ ಮಾಡಿ, ಹೊಸದಾಗಿ ಕಟ್ಟಲಾಗುತ್ತಿದೆ. ಕಿಟಕಿಗಳಿಗೆ ಮೆಸ್ ಹಾಕುವುದು ಸೇರಿದಂತೆ ಇತರೆ ಮೇಲ್ದರ್ಜೆಗೇರಿಸುವಂತ ಕೆಲಸಗಳು ಆಗುತ್ತಿವೆ. ಇನ್ನೂ ಕಾಮಗಾರಿಗಳು ತ್ವರಿತವಾಗಿ, ಮುಗಿಸುವಂತ ಕೆಲಸವಾಗಬೇಕು ಎಂದು ಸೂಚಿಸಿದರು.
ಟಿಹೆಚ್ಓಗೆ ತರಾಟೆ, ವೈದ್ಯೆ ಡಾ.ಶ್ರೀದೇವಿಗೆ ವಾರ್ನಿಂಗ್
ಬಾವಿಗೆ ಬಿದ್ದು ಮೂರು ದಿನವಾಗಿದ್ದಂತ ವ್ಯಕ್ತಿಯೊಬ್ಬರ ಮೃತದೇಹವನ್ನು ಆಸ್ಪತ್ರೆಗೆ ತರೋದಕ್ಕೆ ಸಾಧ್ಯವಾಗಲ್ಲ. ಇಲ್ಲಿಗೆ ಬಂದು ಮರಣೋತ್ತರ ಪರೀಕ್ಷೆ ಮಾಡೋದಕ್ಕೆ ಶಾಸಕರ ಆಪ್ತ ಸಹಾಯಕ ಸೂಚಿಸಿದರೂ ಹೋಗದಂತ ಡಾ.ಶ್ರೀದೇವಿ ನಡೆಯ ಬಗ್ಗೆ ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ಭರತ್ ಅವರನ್ನು ಶಾಸಕ ಬೇಳೂರು ಗೋಪಾಲಕೃಷ್ಣ ತರಾಟೆಗೆ ತೆಗೆದುಕೊಂಡರು.
ಕೂಡಲೇ ಶಿವಮೊಗ್ಗ ಜಿಲ್ಲಾ ಆಡಳಿತ ವೈದ್ಯಾಧಿಕಾರಿ ಡಾ.ನಟರಾಜ್ ಅವರಿಗೆ ದೂರವಾಣಿ ಕರೆ ಮಾಡಿದಂತ ಅವರು, ತಾಲ್ಲೂಕು ಆಡಳಿತ ವೈದ್ಯಾಧಿಕಾರಿಗಳು, ನಮ್ಮ ಆಪ್ತ ಸಹಾಯಕರು ಸ್ಥಳಕ್ಕೆ ತೆರಳಿ ಮರಣೋತ್ತರ ಪರೀಕ್ಷೆ ನಡೆಸಿ ಅಂತ ಹೇಳಿದ್ರೂ ಡಾ.ಶ್ರೀದೇವಿ ಹೋಗಿಲ್ಲ. ಅವರಿಗೆ ಕೆಲಸ ಮಾಡೋದಕ್ಕೆ ಇಂಟ್ರೆಸ್ಟ್ ಇಲ್ಲ ಅನ್ನಿಸುತ್ತಿದೆ. ನಮಗೆ ಅಂತವರು ಬೇಡ. ಅವರನ್ನು ತೆಗೆದು ಬೇರೆಡೆ ಹಾಕಿ. ಜೊತೆಗೆ ನೋಟಿಸ್ ನೀಡಿ ಎಂಬುದಾಗಿ ಸೂಚಿಸಿದರು.
ಕೃಷಿ ಇಲಾಖೆ, ನಗರೋತ್ಥಾನ ಇಲಾಖೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದಂತ ಅವರು, ಇಲಾಖೆಯ ಪ್ರಗತಿ ಪರಿಶೀಲನೆಯ ಮಾಹಿತಿಯನ್ನು ಪಡೆದರು. ಉತ್ತಮ ರೀತಿಯಲ್ಲಿ ಕೆಲಸ ಮಾಡುವಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಸೂಚಿಸಿದರು.
ಈ ಸಭೆಯಲ್ಲಿ ಸಾಗರ ಉಪವಿಭಾಗಾಧಿಕಾರಿ ಯತೀಶ್.ಆರ್, ತಹಶೀಲ್ದಾರ್-2 ಚಂದ್ರಶೇಖರ್, ಸಾಗರ ನಗರಸಭಾ ಪೌರಾಯುಕ್ತ ಎಚ್.ಕೆ. ನಾಗಪ್ಪ, ತಾಲ್ಲೂಕು ಪಂಚಾಯಿತಿ ಇಓ ಗುರುಕೃಷ್ಣ ಶೆಣೈ, ಸಾಗರ ಡಿವೈಎಸ್’ಪಿ ಗೋಪಾಲಕೃಷ್ಣ ನಾಯಕ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಬಿ.ಆರ್. ಜಯಂತ್ ಹಾಜರಿದ್ದರು. ಅಲ್ಲದೇ ಈ ಸಭೆಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು