ಶಿವಮೊಗ್ಗ: ಮುಂದಿನ ಅವಧಿಯವರೆಗೆ ಸಿದ್ಧರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಇರಲಿದ್ದಾರೆ. ಅದರಲ್ಲೇ ಯಾವುದೇ ಡೌಟೇ ಬೇಡ. ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ನಾನು ಸಿಎಂ ಆಕಾಂಕ್ಷಿ ಎನ್ನುವ ಹೇಳಿಕೆಗಳಿಗೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕಬೇಕು ಎಂಬುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರ ತಾಲ್ಲೂಕು ಆಡಳಿತ ಸೌಧದಲ್ಲಿನ ಗ್ಯಾರಂಟಿ ಅನುಷ್ಠಾನ ಸಮಿತಿಯ ಕಚೇರಿ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಗ್ಯಾರಂಟಿ ಯೋಜನೆಗೆ ಅನುದಾನ ಕೊರತೆಯಿಲ್ಲ. ಸಿಎಂ ಸಿದ್ಧರಾಮಯ್ಯ ಅವರು ಬಜೆಟ್ ನಲ್ಲಿ ಇದಕ್ಕಾಗಿಯೇ 3 ಲಕ್ಷದ 74 ಕೋಟಿ ಮೀಸಲಿಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಐದು ವರ್ಷ ಗ್ಯಾರಂಟಿ ಯೋಜನೆ ನಿಲ್ಲಲ್ಲ. ಮುಂದುವರೆಯಲಿದೆ ಎಂದರು.
ಜನರಿಗೆ ಗ್ಯಾರಂಟಿ ತಲುಪಿಸಲು ಅನುಷ್ಠಾನ ಸಮಿತಿ ರಚನೆ
ರಾಜ್ಯ ಸರ್ಕಾರದಿಂದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಯಾರು ಯಾರಿಗೆ ಗ್ಯಾರಂಟಿ ಯೋಜನೆಗಳು ತಲುಪಿಲ್ಲವೇ, ಸಮಸ್ಯೆಯಾಗಿದೆಯೋ ಅದನ್ನು ಸರಿ ಪಡಿಸಲು ಗ್ಯಾರಂಟಿ ಅನುಷ್ಠಾನ ಸಮಿತಿಯನ್ನು ರಾಜ್ಯ ಸರ್ಕಾರದಿಂದ ಹೆಚ್.ಎಂ ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ರಾಜ್ಯಸಮಿತಿ ರಚಿಸಲಾಗಿದೆ. ಸರ್ಕಾರದ ಮಾರ್ಗದರ್ಶನದಂತೆ ಸಾಗರದ ತಾಲ್ಲೂಕು ಕಚೇರಿಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯನ್ನು ಬಿಆರ್ ಜಯಂತ್ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ ಎಂದರು.
ಬಡವರಿಗೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವುದೇ ಈ ಸಮಿತಿಯ ಉದ್ದೇಶವಾಗಿದೆ. ಸಾಗರ ತಾಲ್ಲೂಕಿನಲ್ಲಿ 16 ಮಂದಿಯನ್ನು ಒಳಗೊಂಡಂತ ಗ್ಯಾರಂಟಿ ಅನುಷ್ಠಾನ ಸಮಿತಿಯನ್ನು ರಚಿಸಲಿದೆ. ತಾಲ್ಲೂಕಿನ ಫಲಾನುಭವಿಗಳ ಸಮಸ್ಯೆ ಸರಿ ಪಡಿಸುವಂತ ಕೆಲಸವನ್ನು ಸಮಿತಿಯ ಅಧ್ಯಕ್ಷರು, ಸದಸ್ಯರು ಮಾಡಲಿದ್ದಾರೆ ಎಂದು ಹೇಳಿದರು.
ನಿದರ್ಶನಗಳ ಮೂಲಕ ಗ್ಯಾರಂಟಿ ಉಪಯೋಗದ ಮಾಹಿತಿ ತೆರೆದಿಟ್ಟ ಶಾಸಕರು
ನಾನು ರಿಪ್ಪನ್ ಪೇಟೆಗೆ ತೆರಳಿದ್ದೆನು. ಅಲ್ಲಿನ ಒಂದು ಕುಟುಂಬದ ನಿರ್ವಹಣೆ ಹೊಣೆ ಹೊತ್ತಿದ್ದಂತ ಯುವಕ ಕರೆಂಟ್ ಶಾಕ್ ನಿಂದ ಸಾವನ್ನಪ್ಪಿದ್ದನು. ದುಡಿಯುತ್ತಿದ್ದಂತ ಯುವಕ ಸಾವನ್ನಪ್ಪಿದ ನಂತ್ರ, ಅವರ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗುತ್ತಿರುವುದು ಗ್ಯಾರಂಟಿ ಯೋಜನೆಗಳಾಗಿವೆ ಎಂದರು.
ಗ್ಯಾರಂಟಿ ಯೋಜನೆಗಳನ್ನು ಯಾವುದೇ ದಲ್ಲಾಳಿಗಳು, ಮಧ್ಯವರ್ತಿಗಳು ಇಲ್ಲದೇ ಅನುಷ್ಠಾನಗೊಳಿಸಲಾಗಿದೆ. ಯಾರು ಫಲಾನುಭವಿಗಳು ಇದ್ದಾರೋ ಅವರ ಬ್ಯಾಂಕ್ ಖಾತೆಗೆ ನೇರವಾಗಿಯೇ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ನಿಜವಾಗಲೂ ಬಡವರ ಮನೆಯ ಬೆಳಕಾಗಿದ್ದಾವೆ. ಬಡವರಿಗೆ ತಲುಪಿಸುವ ಉದ್ದೇಶದಿಂದ ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆಯಾಗಿದೆ ಎಂದು ಹೇಳಿದರು.
ಶೇ.6ರಷ್ಟು ಮಂದಿಗೆ ತಲುಪಿರದೇ ಇರಬಹುದು
ರಾಜ್ಯ ಸರ್ಕಾರ ಜಾರಿಗೆ ತಂದಿರುವಂತ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ತಲುಪಿಸುವ ಕೆಲಸವಾಗುತ್ತಿದೆ. ಬಿಜೆಪಿ ಆರೋಪಿಸಿದಂತೆ ಗ್ಯಾರಂಟಿ ಯೋಜನೆಗಳು ಯಾರಿಗೂ ತಲುಪುತ್ತಿಲ್ಲ ಎಂಬುದು ಸುಳ್ಳು. ಶೇ.6ರಷ್ಟು ಜನರಿಗೆ ತಾಂತ್ರಿಕ ಕಾರಣದಿಂದ ಕೆಲವೊಂದು ಯೋಜನೆಗಳು ತಲುಪದೇ ಇರಬಹುದು. ಆದರೇ ಶೇ.94ರಷ್ಟು ಮಂದಿಗೆ ಗ್ಯಾರಂಟಿ ಯೋಜನೆಗಳು ತಲುಪುತ್ತಿದ್ದಾವೆ ಎಂದು ತಿಳಿಸಿದರು.
ಸಿಎಂ ಹುದ್ದೆ ಖಾಲಿ ಇಲ್ಲ, ನಾನು ಸಿಎಂ ಎನ್ನುವ ಹೇಳಿಕೆಗೆ ಬ್ರೇಕ್ ಹಾಕಬೇಕು
ರಾಜ್ಯದಲ್ಲಿ ಮುಂದಿನ ಸಂಪೂರ್ಣ ಅವಧಿಗೆ ಸಿಎಂ ಸಿದ್ಧರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ಅದರಲ್ಲಿ ಯಾವುದೇ ಅನುಮಾನ ಬೇಡ. ನಾನು ಸಿಎಂ ಹುದ್ದೆ ಆಕಾಂಕ್ಷಿ ಎನ್ನುವುದಾಗಿ ಕಾಂಗ್ರೆಸ್ ಮುಖಂಡರು ಹೇಳಿಕೆ ಕೊಡುತ್ತಿರುವುದು ಸರಿಯಲ್ಲ. ಹೀಗೆ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು. ಕಾಂಗ್ರೆಸ್ ಹೈಕಮಾಂಡ್ ಕೂಡ ಇಂತಹ ಹೇಳಿಕೆಗಳಿಗೆ ಬ್ರೇಕ್ ಹಾಕುವಂತೆ ಆಗ್ರಹಿಸುವುದಾಗಿ ಹೇಳಿದರು.
ಶರಾವತಿ ನದಿ ನೀರು ಕುಡಿಯೋದಕ್ಕೆ ಕೊಂಡಯ್ಯಲು ನಮ್ಮ ಅಭ್ಯಂತರವಿಲ್ಲ
ನಾನು ಮಾಜಿ ಶಾಸಕರಾಗಿದ್ದಾಗಲೂ ಬೆಂಗಳೂರಿಗೆ ಶರಾವತಿ ನದಿ ನೀರನ್ನು ಕುಡಿಯೋದಕ್ಕೆ ಕೊಂಡೊಯ್ಯೋದಕ್ಕೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಈಗಲೂ ಅದಕ್ಕೆ ವಿರೋಧವಿಲ್ಲ. ಆದರೇ ಕೃಷಿಗೆ ಕೊಂಡೊಯ್ಯುವುದಾದರೇ ನನ್ನ ಆಕ್ಷೇಪವಿದೆ. ಅದಕ್ಕೆ ವಿರೋಧ ಕೂಡ ಇದೆ. ಈಗ ಬೆಂಗಳೂರು ಜನರಿಗೆ ಕುಡಿಯಲು ನೀರು ಕೊಂಡೊಯ್ಯುತ್ತಿದ್ದಾರೆ ಅಷ್ಟೇ ಎಂದರು.
ನಮ್ಮ ತಾಲ್ಲೂಕಿನ ಜನತೆಯ ಅಭಿಪ್ರಾಯವನ್ನು ನಾನು ಸಂಗ್ರಹಿಸುತ್ತೇನೆ. ಶರಾವತಿ ನದಿ ನೀರು ವಿಚಾರದಲ್ಲಿ ತಾಲ್ಲೂಕಿನ ಜನತೆಯ ನಿಲುವು ಏನು ಎಂಬುದನ್ನು ತಿಳಿದುಕೊಳ್ಳುತ್ತೇನೆ. ಆ ಬಳಿಕ ರಾಜ್ಯ ಸರ್ಕಾರಕ್ಕೆ ಜನರ ಅಭಿಪ್ರಾಯವನ್ನು ಮುಂದಿಡುವಂತ ಕೆಲಸ ಮಾಡುತ್ತೇನೆ. ಮೊದಲು ನಮ್ಮ ತಾಲ್ಲೂಕಿನ ಜನರಿಗೆ ನೀರು ಉಪಯೋಗವಾಗಬೇಕು. ಆ ನಂತ್ರ ಬೇರೆಯವರಿಗೆ ಎಂಬುದಾಗಿ ಸ್ಪಷ್ಟ ಪಡಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿಆರ್ ಜಯಂತ್ ಮಾತು
ಇದೇ ಸಂದರ್ಭದಲ್ಲಿ ಮಾತನಾಡಿದಂತ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಬಿ.ಆರ್ ಜಯಂತ್ ಅವರು ಸಾಗರ ತಾಲ್ಲೂಕಿನಲ್ಲಿ ಗೃಹ ಲಕ್ಷ್ಮೀ ಯೋಜನೆಯ ಅಡಿಯಲ್ಲಿ ಬರೋಬ್ಬರಿ 43,247 ಯಜಮಾನಿಯರು ಪ್ರತಿ ತಿಂಗಳು ರೂ.2000 ಪಡೆಯುತ್ತಿದ್ದಾರೆ. ಕೇವಲ 420 ಜನರಿಗೆ ಮಾತ್ರವೇ ತಲುಪುತ್ತಿಲ್ಲ. ಅದನ್ನು ಸರಿ ಪಡಿಸುವಂತ ಕೆಲಸ ಆಗಲಿದೆ ಎಂದರು.
ಶಕ್ತಿ ಯೋಜನೆಯ ಅಡಿಯಲ್ಲಿ ಈವರೆಗೆ ಸಾಗರ ತಾಲ್ಲೂಕಿನಲ್ಲಿ 58 ಲಕ್ಷದ 42 ಸಾವಿರ ಮಹಿಳೆಯರು ಸರ್ಕಾರಿ ಸಾರಿಗೆ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಇದರಿಂದಾಗಿ ಉದ್ಯೋಗಸ್ತ ಮಹಿಳೆಯರ ಸಂಖ್ಯೆ ಕೂಡ ಹೆಚ್ಚಾಗಿದೆ. ಮಹಿಳೆಯರಿಗೆ ಶಕ್ತಿ ಯೋಜನೆ ನಿಜಕ್ಕೂ ಶಕ್ತಿಯನ್ನೇ ತುಂಬಿದೆ ಎಂದು ತಿಳಿಸಿದರು.
ಇನ್ನೂ ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ 24,159 ಜನರು ಸಾಗರ ತಾಲ್ಲೂಕಿನಲ್ಲಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಇನ್ನೂ ಹೆಚ್ಚಿನ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಈಗ ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸಲಾಗಿದೆ. ಸಾಗರ ತಾಲ್ಲೂಕಿನ ಜನರು ಗ್ಯಾರಂಟಿ ಯೋಜನೆಗಳು ತಲುಪುತ್ತಿಲ್ಲ ಅಂದ್ರೆ ಕಚೇರಿಗೆ ಬಂದು ದೂರು ನೀಡಬಹುದು. ಅದನ್ನು ಸಂಬಂಧಿಸಿದಂತ ಅಧಿಕಾರಿಗಳ ಗಮನಕ್ಕೆ ತಂದು, ಸರಿ ಪಡಿಸುವಂತ ಕೆಲಸ ಮಾಡಲಿದ್ದೇವೆ ಎಂದರು.
ಈ ವೇಳೆ ಸಾಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು, ಸದಸ್ಯರುಗಳಿಗೆ ಶಾಸಕರಾದಂತ ಬೇಳೂರು ಗೋಪಾಲಕೃಷ್ಣ ಅವರು ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿ, ಗ್ಯಾರಂಟಿ ಯೋಜನೆಗಳನ್ನು ಜನತೆಗೆ ತಲುಪಿಸುವಂತ ಉತ್ತಮ ಕಾರ್ಯ ನಡೆಯಲಿ ಎಂಬುದಾಗಿ ಆಶಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ, ನಗರಸಭೆ ಸದಸ್ಯೆ ಮಧು ಮಾಲತಿ, ಲಲಿತಮ್ಮ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ನಗರಸಭೆ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ನಗರಸಭೆ ನಾಮನಿರ್ದೇಶಿತ ಸದಸ್ಯ ರವಿ ಲಿಂಗನಮಕ್ಕಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರು, ಜಿಲ್ಲಾ ಸಮಿತಿಯ ಭವ್ಯ ಕೃಷ್ಣಮೂರ್ತಿ, ಅಬ್ದುಲ್ ಅಹ್ಮದ್, ನಂದಾ, ಲೋಕನಾಥ್, ಸೈಯದ್, ಅನ್ವರ್ ಪಾಶಾ, ಮಹಾಭಲೇಶ್ವರ್, ಗುರುರಾಜ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಗುರು ಶಣೈ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು