ಶಿವಮೊಗ್ಗ: ಜೋಗಕ್ಕೆ ಪ್ರವಾಸಕ್ಕೆ ಬರುತ್ತಿದ್ದಂತ ಮಂಗಳೂರಿನ ಜನರಿದ್ದಂತ ಬಸ್ ಅಪಘಾತಗೊಂಡು, 15ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿತ್ತು. ಈ ವಿಷಯ ತಿಳಿದಂತ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಗಾಯಾಳುಗಳು ದಾಖಲಾಗಿದ್ದಂತ ಸಾಗರ ಉಪ ವಿಭಾಗೀಯ ಆಸ್ಪತ್ರೆಗೆ ಭೇಟಿ ನೀಡಿ, ಖುದ್ದು ಮುಂದೆ ನಿಂತು ತುರ್ತು ಚಿಕಿತ್ಸೆಯ ವ್ಯವಸ್ಥೆ ಮಾಡಿಸಿ, ಮಾನವೀಯತೆ ಮೆರೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರದ ಜೋಗ-ಕಾರ್ಗಲ್ ಸಮೀಪದ ಅರಳಗೋಡು ರಸ್ತೆಯ ತಿರುವಿನಲ್ಲಿ ಮಂಗಳೂರಿನಿಂದ ಜೋಗದ ಜಲಪಾತ ವೀಕ್ಷಣೆಗಾಗಿ ಬರುತ್ತಿದ್ದಂತ ಪ್ರವಾಸಿಗರ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಈ ಅಪಘಾತದಲ್ಲಿ 15ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಕಾರ್ಗಲ್ ಹಾಗೂ ಸಾಗರದ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಈ ವಿಷಯ ತಿಳಿದಂತ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡಲೇ ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ಭೇಟಿ ನೀಡಿ, ಬಸ್ ಅಪಘಾತದಲ್ಲಿ ಗಾಯಗೊಂಡಿದ್ದಂತ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದರು. ಅಲ್ಲದೇ ಆಸ್ಪತ್ರೆಯಲ್ಲೇ ಬೀಡು ಬಿಟ್ಟು ವೈದ್ಯರು, ವೈದ್ಯಕೀಯ ಸಿಬ್ಬಂದಿಯಿಂದ ಸೂಕ್ತ ಚಿಕಿತ್ಸೆಯ ವ್ಯವಸ್ಥೆಯನ್ನು ಮಾಡಿ, ಮಾನವೀಯತೆ ಮೆರೆದರು.
ಈ ವೇಳೆ ಮಾತನಾಡಿದಂತ ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ಖಾಸಗಿ ಬಸ್ಸಿನಲ್ಲಿ 27 ಜನರು ಮಂಗಳೂರಿನ ಪುತ್ತೂರಿನಿಂದ ಜೋಗಾಕ್ಕೆ ಬಂದಿದ್ದಾರೆ. ಅವರ ಬಸ್ ಮುಪ್ಪಾನೆ ತಿರುವಿನಲ್ಲಿ ಪಲ್ಟಿಯಾಗಿದೆ. ಇಬ್ಬರು ಮಕ್ಕಳಿದ್ದಾರೆ. ಅವರಿಗೂ ಗಂಭೀರ ಗಾಯವಾಗಿದೆ. ಓರ್ವ ಹೆಣ್ಣುಮಗಳ ಕೈ ಕಟ್ ಆಗಿದೆ ಎಂದರು.
ಈ ಅಪಘಾತದ ಬಗ್ಗೆ ಪುತ್ತೂರಿನ ಶಾಸಕರಾದಂತ ರಾಜೇಶ್ ನಾಯ್ಕ್ ಅವರು ಕರೆ ಮಾಡಿ ಸೂಕ್ತ ಚಿಕಿತ್ಸೆಗೆ ಕೋರಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿ ಗಾಯಾಳುಗಳಿಗೆ ಸಾಗರ ತಾಲ್ಲೂಕು ಆಸ್ಪತ್ರೆಯಲ್ಲಿ ನಮ್ಮ ವೈದ್ಯರು, ಸಿಬ್ಬಂದಿಯಿಂದ ಚಿಕಿತ್ಸೆ ನೀಡಲಾಗುತ್ತಿದೆ. ಈ ಅಪಘಾತದಲ್ಲಿ ಗಾಯಗೊಂಡಿದ್ದವರಿಗೆ ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ. ಅವರಿಗೆಲ್ಲ ಧನ್ಯವಾದಗಳು ಅಂತ ತಿಳಿಸಿದರು.
ಅಂದಹಾಗೇ ಮಂಗಳೂರಿನಿಂದ ಜೋಗಕ್ಕೆ 27 ಜನರಿದ್ದಂತ ಖಾಸಗಿ ಬಸ್ ನಲ್ಲಿ ಪ್ರವಾಸಕ್ಕೆ ಬರಲಾಗಿತ್ತು. ಈ ಬಸ್ ಚಾಲಕನ ನಿಯಂತ್ರಣ ತಪ್ಪಿ ಅರಳಗೋಡು ಗ್ರಾಮ ಬಳಿಯಲ್ಲಿ ಪಲ್ಟಿಯಾಗಿದ್ದರಿಂದಾಗಿ ಈ ಅಪಘಾತ ಸಂಭವಿಸಿತ್ತು. 27 ಪ್ರಯಾಣಿಕರಲ್ಲಿ 15ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಅವರನ್ನು ಆಂಬುಲೆನ್ಸ್ ಮೂಲಕ ಸಾಗರ, ಕಾರ್ಗಲ್ ಆಸ್ಪತ್ರೆಗಳಿಗೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ವರದಿ: ವಸಂತ ಬಿ ಈಶ್ವರಗೆರೆ