ಶಿವಮೊಗ್ಗ: ಇಂದು ಇಡೀ ದಿನ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಕೋಟ್ಯಂತರ ರೂಪಾಯಿಯ ಅನುದಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ಜೋಸೆಫ್ ಚರ್ಚ್ ಗೆ ತೆರಳಿದಂತ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಹೈ ಮಾಸ್ಕ್ ದೀಪದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಈ ಬಳಿಕ ಮಾತನಾಡಿದಂತ ಅವರು ನಾನು ಧರ್ಮಾತೀತವಾಗಿ ಕೆಲಸ ಮಾಡುವ ವ್ಯಕ್ತಿ. ನಾನು ಯಾವತ್ತೂ ಇವರದ್ದು ಆ ಧರ್ಮ, ಈ ಧರ್ಮ, ಆ ಜಾತಿ, ಈ ಜಾತಿ ಅಂತ ನೋಡಿಲ್ಲ ಎಂದರು.
1 ವಾರದೊಳಗೆ ಸಾಗರದ ಜೋಸೆಫ್ ನಗರ ಚರ್ಚ್ ಆವರಣದಲ್ಲಿ ಹೈ ಮಾಸ್ಕ್ ದೀಪವನ್ನು ಅಳವಡಿಸುವ ಕಾರ್ಯವನ್ನು ಮುಕ್ತಾಯಗೊಳಿಸುವಂತೆ ಸ್ಥಳದಲ್ಲೇ ನಗರಸಭೆ ಪೌರಾಯುಕ್ತ ಹೆಚ್.ಕೆ ನಾಗಪ್ಪ ಅವರಿಗೆ ಸೂಚಿಸಿದರು.
ಇದಾದ ನಂತ್ರ ಸಾಗರದ ಜನ್ನತ್ ನಗರದಲ್ಲಿನ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಆ ಬಳಿಕ ಸಾಗರದ ಅರಳಿಕೊಪ್ಪ ಶಾಲಾ ಆವರಣದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.
ಇನ್ನೂ ಸಾಗರದ ವಾರ್ಡ್ ನಂ.25ರಲ್ಲಿನ ಮಾಲಿನಿ ಆಸ್ಪತ್ರೆಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ, ವಾರ್ಡ್ ನಂ.10ರ ಜೋಗ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಜೊತೆಗೆ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ, ಆಹಾರದ ಗುಣಮಟ್ಟವನ್ನು ಪರೀಕ್ಷಿಸಿದರು.
ನಗರಸಭೆ ಆವರಣದ ಗಾಂಧಿ ಮೈದಾನದಲ್ಲಿ ಡೇ-ನಲ್ಮ್ ಯೋಜನೆಯ ಪಿಎಂ ಸ್ವ ನಿಧಿ ಕಾರ್ಯಕ್ರಮದಡಿ ಬೀದಿ ಬದಿ ವ್ಯಾಪಾರಿಗಳಿಗೆ ಮತ್ತು ಸ್ವ ಉದ್ಯೋಗ ಕೈಗೊಳ್ಳುವ ನಿರುದ್ಯೋಗಿ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರಗಳನ್ನು ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು ಮಹಾರಾಷ್ಟ್ರದಲ್ಲಿ ನಮ್ಮ ಯೋಜನೆಗಳನ್ನು ಕಾಪಿ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಜನ ಜೀವನ ಬದಲಾಗಿದೆ ಎಂದರು.
ಬೀದಿ ಬದಿಯ ವ್ಯಾಪಾರಿಗಳು ಪುಡ್ ಕೋರ್ಟ್ ಗೆ ಶಿಫ್ಟ್ ಆಗಬೇಕು. ಸಾಗರ ನಗರದ ಮೂರು ಕಡೆಯಲ್ಲಿ ಪುಡ್ ಕೋರ್ಟ್ ನಿರ್ಮಾಣ ಮಾಡಲಾಗುತ್ತಿದೆ. ಆಹಾರ ಗುಣಮಟ್ಟಕ್ಕೆ ಒತ್ತು ನೀಡಿ. ನಿಮ್ಮ ಮಕ್ಕಳು ನಿಮ್ಮಂತೆ ಆಗಲು ಬಿಡಬೇಡಿ. ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ, ಉನ್ನತ ಮಟ್ಟಕ್ಕೆ ಬೆಳೆಯುವಂತೆ ಮಾಡಿ ಎಂದರು.
ಇದೇ ಸಂದರ್ಭದಲ್ಲಿ ಬೋಂಡ ಅಂಗಡಿ ಮಾಡಿಕೊಂಡಿದ್ದಂತ ವ್ಯಕ್ತಿಯೊಬ್ಬರು ತಮ್ಮ ಪುತ್ರನನ್ನು ಇಂಜಿನಿಯರಿಂಗ್ ಮಾಡಿಸಿರೋದಾಗಿ ತಿಳಿದು ಅವರನ್ನು ಹಾಡಿ ಹೊಗಳಿದ್ದಲ್ಲದೇ, ಹೂ ಗುಚ್ಚ ನೀಡಿ ಅಭಿನಂದಿಸಿ, ಎಲ್ಲರೂ ಇದೇ ರೀತಿ ನಿಮ್ಮ ಮಕ್ಕಳನ್ನು ಉತ್ತಮ ರೀತಿಯಲ್ಲಿ ಓದಿಸಿ ಎಂಬುದಾಗಿ ಹುರಿದುಂಬಿಸಿದರು.
ಮಧ್ಯಾಹ್ನದ ಬಳಿಕ ಸಾಗರದ ವಾರ್ಡ್ ನಂ.5ರ ಬಿಡಿ ಕ್ವಾಟ್ರಸ್ ನಲ್ಲಿ ರಸ್ತೆ ಅಭಿವೃದ್ಧಿಗೆ, ಅಣಲೆಕೊಪ್ಪ ಬಿಡಿಓ ಲೇಔಟ್ 7ನೇ ಕ್ರಾಸ್ ನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಆ ನಂತ್ರ ಚಂದ್ರಮಾವಿನಕೊಪ್ಪಲಿನ ಹಿಂದೂ ರುದ್ರಭೂಮಿಗೆ ಹೈ ಮಾಸ್ಕ್ ದೀಪ, ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಸಾಗರದ ನೆಹರೂ ಮೈದಾನದಲ್ಲಿ ಹೈ ಮಾಸ್ಕ್ ದೀಪಗಳ ಶಂಕುಸ್ಥಾಪನೆಯನ್ನು ಶಾಸಕ ಬೇಳೂರು ಗೋಪಾಲಕೃಷ್ಣ ನೆರವೇರಿಸಿದರು. ಈ ಮೂಲಕ ಇಂದು ಇಡೀ ದಿನ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಬಿಡುವಿರದಂತೆ ಸಾಗರ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಾಗರ ನಗರಸಭೆ ಪೌರಾಯುಕ್ತ ಹೆಚ್.ಕೆ ನಾಗಪ್ಪ, ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಲಲಿತಮ್ಮ, ನಾಮ ನಿರ್ದೇಶಿತ ಸದಸ್ಯ ರವಿ ಲಿಂಗನಮಕ್ಕಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಭವ್ಯ ಕೃಷ್ಣಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ