ಶಿವಮೊಗ್ಗ: ಮಳೆಗಾಲ ಆರಂಭಗೊಂಡ ನಂತ್ರ ಸಾಗರ ತಾಲೂಕಿನಲ್ಲಿ ದಿನೇ ದಿನೇ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿವೆ. ಇವುಗಳ ನಿಯಂತ್ರಣ ಸಂಬಂಧ ಇಂದು ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದಂತ ಶಾಸಕ ಬೇಳೂರು ಗೋಪಾಲಕೃಷ್ಣ, ನಿಯಂತ್ರಣಕ್ಕಾಗಿ ಕೆಲ ಖಡಕ್ ಸೂಚನೆ ನೀಡಿದ್ದಾರೆ. ಆ ಬಗ್ಗೆ ಮುಂದೆ ಓದಿ.

ಇಂದು ಸಾಗರದ ಪ್ರವಾಸಿ ಮಂದಿರದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದಂತ ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಡೆಂಗ್ಯೂನಿಂದ ಆಸ್ಪತ್ರೆಯ ಸಿಬ್ಬಂದಿಯೇ ಸಾವನ್ನಪ್ಪಿದ್ದು ದುರಾದೃಷ್ಠಕರ ಸಂಗತಿಯಾಗಿದೆ. ಸಾಗರ ತಾಲೂಕಿನಲ್ಲಿ ಡೆಂಗ್ಯೂ ನಿಯಂತ್ರಣದ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.

ಡಾ.ನಾಗೇಂದ್ರಪ್ಪ ವರ್ಗಾವಣೆಗೆ ಸೂಚನೆ

ಪ್ರಸೂತಿ ತಜ್ಞ ವೈದ್ಯ ಡಾ.ನಾಗೇಂದ್ರಪ್ಪ ಅವರ ಯಡವಟ್ಟುಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಅದರೊಟ್ಟಿಗೆ ಅವರ ವಿರುದ್ಧ ದೂರುಗಳು ಜಾಸ್ತಿಯಾಗುತ್ತಿದ್ದಾವೆ. ಅವರನ್ನು ಹೊಸನಗರ ಆಸ್ಪತ್ರೆಗೆ ವರ್ಗಾವಣೆ ಮಾಡಬೇಕು. ಅಲ್ಲಿನ ಪ್ರಸೂತಿ ವೈದ್ಯರನ್ನು ಈ ಕೂಡಲೇ ಸಾಗರ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ವರ್ಗಾವಣೆ ಮಾಡಬೇಕು ಅಂತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರವಾರು ಡೆಂಗ್ಯೂ ಮಾಹಿತಿ ಪಡೆದ ಶಾಸಕರು

ಸಾಗರ ತಾಲ್ಲೂಕಿನ ಆವಿನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಡೆಂಗ್ಯೂ ಕೇಸ್ ಬಗ್ಗೆ ಅಲ್ಲಿನ ವೈದ್ಯರು ಮಾಹಿತಿಯನ್ನು ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ನೀಡಿದರು. ಅವಿನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಇಬ್ಬರಿಗೆ ಡೆಂಗ್ಯೂ ದೃಢಪಟ್ಟಿರೋದಾಗಿ ತಿಳಿಸಿದರು.

ಗೌತಮಪುರ ಪಿಹೆಚ್ ಸಿ ವೈದ್ಯರು ನಮ್ಮಲ್ಲಿ ಒಬ್ಬರಿಗೆ ಡೆಂಗ್ಯೂ ದೃಢಪಟ್ಟಿದೆ. ಆ ಬಳಿಕ ಆಸ್ಪತ್ರೆ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಡೆಂಗ್ಯೂ ನಿವಾರಕ ಔಷಧಿ ಸಿಂಪಡಿಸಲಾಗಿದೆ ಎಂಬುದಾಗಿ ಮಾಹಿತಿ ಹಂಚಿಕೊಂಡರು.

ಉಳ್ಳೂರ ಪಿಹೆಚ್ ಸಿ ವ್ಯಾಪ್ತಿಯಲ್ಲಿ ಡೆಂಗ್ಯೂ ಪರೀಕ್ಷೆ ನಡೆಸಲಾಗುತ್ತಿದೆ ಎಂಬುದಾಗಿ ಅಲ್ಲಿನ ವೈದ್ಯರು ಮಾಹಿತಿ ನೀಡಿದ್ರೇ, ಆನಂದಪುರ ಸಿಎಸ್ಸಿಯಲ್ಲಿ ಮೂರು ಡೆಂಗ್ಯೂ ಕೇಸ್ ಇದ್ದಾವೆ. ನಿಯಂತ್ರಣ ಕ್ರಮ ಕೈಗೊಳ್ಳಲಾಗುತ್ತಿದೆ ಅಂತ ವೈದ್ಯರು ಮಾಹಿತಿ ಹಂಚಿಕೊಂಡರು.

ಈ ಸಂದರ್ಭದಲ್ಲಿ ಆನಂದಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಅನ್ನೋ ದೂರು ಕೇಳಿ ಬರುತ್ತಿದೆ. ಕಡ್ಡಾಯವಾಗಿ ವೈದ್ಯರು ರೋಗಿಗಳ ಸೇವೆಗೆ ಸಕಾಲದಲ್ಲಿ ಸಿಗುವಂತಾಗಬೇಕು. ಡೆಂಗ್ಯೂ ನಿಯಂತ್ರಣ ಕ್ರಮವನ್ನು ಕೈಗೊಳ್ಳಬೇಕು ಎಂಬುದಾಗಿ ಎಚ್ಚರಿಸಿದರು.

ಅರಲಗೋಡು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಓರ್ವ ವ್ಯಕ್ತಿಗೆ ಡೆಂಗ್ಯೂ ದೃಢಪಟ್ಟರೇ, ತಾಳಗುಪ್ಪ ಪಿಹೆಚ್ ಸಿ ವ್ಯಾಪ್ತಿಯ ಹಿರೇಮನೆಯಲ್ಲಿ ಒಬ್ಬರಿಗೆ ಆಲಹಳ್ಳಿಯಲ್ಲಿ ಇಬ್ಬರಿಗೆ ಡೆಂಗ್ಯೂ ದೃಢಪಟ್ಟಿದೆ ಅಂತ ವೈದ್ಯರು ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಗಮನಕ್ಕೆ ತಂದರು.

ಕಾಗೋಡು ಪಿಹೆಚ್ ಸಿ ವ್ಯಾಪ್ತಿಯಲ್ಲಿ ಒಬ್ಬರಿಗೆ, ಕಾರ್ಗಲ್-ಲಿಂಗದಹಳ್ಳಿಯಲ್ಲಿ ವ್ಯಾಪ್ತಿಯಲ್ಲಿ ಹೆಚ್ಚು ಕೇಸ್ ಡೆಂಗ್ಯೂ ವರದಿಯಾಗಿದೆ. ಲಿಂಗದಹಳ್ಳಿಯಲ್ಲಿ 8 ಡೆಂಗ್ಯೂ ವರದಿಯಾಗಿದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮರಸದಲ್ಲಿ 8 ಕೇಸ್ ಇದೆ ಎಂಬುದಾಗಿ ವೈದ್ಯರು ತಿಳಿಸಿದರು.

ಡೆಂಗ್ಯೂ ನಿಯಂತ್ರಣಾಧಿಕಾರಿಗೆ ಈ ಖಡಕ್ ಸೂಚನೆ ಕೊಟ್ಟ ಶಾಸಕರು

ಸಾಗರ ತಾಲೂಕಿನ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಬೇಕು. ಡೆಂಗ್ಯೂ ನಿಯಂತ್ರಣ ಕ್ರಮಗಳನ್ನು ಪರಿಶೀಲಿಸಬೇಕು. ಹೆಚ್ಚು ಡೆಂಗ್ಯೂ ಕೇಸ್ ಗಳು ಇರುವಂತ ಪ್ರದೇಶಗಳಲ್ಲಿ ಪಿಡಿಓಗಳ ಮೂಲಕ ಡೆಂಗ್ಯೂ ನಿಯಂತ್ರಣ ಔಷಧವನ್ನು ಸಿಂಪಡಿಸೋ ಕೆಲಸ ಮಾಡಬೇಕು. ಡೆಂಗ್ಯೂ ಪ್ರಕರಣಗಳು ಮತ್ತೆ ಹೆಚ್ಚಳವಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಅಂತ ಸೂಚಿಸಿದರು.

ಸಾಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ವರದಿ ಆದಷ್ಟು ಬೇಗ ನೀಡುವಂತೆ ತಾಕೀತು

ಸಾಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷಾ ವರದಿ ಲೇಟ್ ಆಗುತ್ತಿರುವುದಕ್ಕೆ ಆಡಳಿತ ವೈದ್ಯಾಧಿಕಾರಿ ಡಾ.ಪರಪ್ಪನವನ್ನು ತರಾಟೆಗೆ ತೆಗೆದುಕೊಂಡಂತ ಶಾಸಕ ಬೇಳೂರು ಗೋಪಾಲಕೃಷ್ಣ. ಆದಷ್ಟು ಬೇಗ ವರದಿ ನೀಡುವಂತೆ ಸೂಚಿಸಿದರು. ಲ್ಯಾಬ್ ಪರೀಕ್ಷೆ ಬೇಗ ನಡೆಸಬೇಕು. ಗಂಟೆಗಟ್ಟಲೇ ವರದಿಯನ್ನು ನೀಡೋದಕ್ಕೆ ಕಾಯಿಸಬಾರದು. ಆದಷ್ಟು ಬೇಗ ನೀಡುವಂತೆ ತಿಳಿಸಿದರು.

ವೈದ್ಯರು, ಸಿಬ್ಬಂದಿಗೆ ಈ ಕಿವಿಮಾತು ಹೇಳಿದ ಶಾಸಕರು

ಮಳೆಗಾಲ ಆರಂಭಗೊಂಡ ನಂತ್ರ ಸಾಗರ ತಾಲೂಕಿನಾಧ್ಯಂತ ಡೆಂಗ್ಯೂ ಕೇಸ್ ಹೆಚ್ಚಳವಾಗುತ್ತಿವೆ. ಈ ಸಮಯದಲ್ಲಿ ಯಾವುದೇ ಆರೋಗ್ಯ ಇಲಾಖೆಯ ವೈದ್ಯರು, ಸಿಬ್ಬಂದಿಗೆ ರಜೆ ಇಲ್ಲ. ಸಾರ್ವಜನಿಕರ ಪರವಾಗಿ ಕೆಲಸ ಮಾಡಿ. ಜನಸೇವೆಗೆ ಒತ್ತು ನೀಡಿ. ತಾಲೂಕು ಆಸ್ಪತ್ರೆಯಲ್ಲಿ ಜನರಿಗೆ ಯಾವುದೇ ಕೊರತೆ ಆಗಬಾರದು. ರೋಗಿಗಳ ಸಮಸ್ಯೆ ಸರಿಪಡಿಸೋ ಕೆಲಸ ಮಾಡಬೇಕು ಎಂದರು.

ಕೆಲಸಕ್ಕೆ ಲೇಟಾಗಿ ಬಂದ್ರೆ ನೋಟೀಸ್ ನೀಡಲು ಸೂಚನೆ

ಯಾವುದೇ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಕೆಲಸಕ್ಕೆ ತಡವಾಗಿ ಬಂದ್ರೆ ನೋಟಿಸ್ ನೀಡಬೇಕು. ಸಾಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ತಡವಾಗಿ ಕೆಲಸಕ್ಕೆ ಹಾಜರಾಗುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ಸರಿ ಪಡಿಸೋ ಕೆಲಸ ಮಾಡಬೇಕು. ಸಮಯಕ್ಕೆ ಸರಿಯಾಗಿ ಬಾರದ ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗೆ ಮುಲಾಜಿಲ್ಲದೇ ನೋಟಿಸ್ ನೀಡುವಂತೆ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಆದೇಶಿಸಿದರು.

ಸಾಗರ ನಗರದಲ್ಲೇ ಅತೀ ಹೆಚ್ಚು ಡೆಂಗ್ಯೂ ಕೇಸ್ ಪತ್ತೆ

ಸಾಗರ ನಗರ ವ್ಯಾಪ್ತಿಯಲ್ಲಿ ಜೂನ್.1ರಿಂದ 141 ಜನರಿಗೆ ಪರೀಕ್ಷೆಯಲ್ಲಿ ಡೆಂಗ್ಯೂ ದೃಢಪಟ್ಟಿದೆ. ಇವರಲ್ಲಿ 95 ಮಂದಿ ಗುಣಮುಖರಾಗಿದ್ದಾರೆ. ಇನ್ನೂ 46 ಜನರು ಮಾತ್ರವೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ಆಡಳಿತ ವೈದ್ಯಾಧಿಕಾರಿ ಡಾ.ಪರಪ್ಪ ಅವರು ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಗಮನಕ್ಕೆ ತಂದರು.

ಈ ವೇಳೆ ಸಾಗರದಲ್ಲಿ ಡೆಂಗ್ಯೂ ಕೇಸ್ ನಿಯಂತ್ರಣ ಕ್ರಮವಾಗಬೇಕು. ಸೊಳ್ಳೆಗಳ ನಿಯಂತ್ರಣಕ್ಕೆ ನಗರ ವ್ಯಾಪ್ತಿಯಲ್ಲಿ ಔಷಧಿ ಸಿಂಪಡಿಸೋ ಕೆಲಸವಾಗಬೇಕು. ಯಾವುದೇ ಕಾರಣಕ್ಕೂ ಮತ್ತಷ್ಟು ಡೆಂಗ್ಯೂ ಪ್ರಕರಣ ಹೆಚ್ಚಾಗದಂತೆ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದರು.

ವರದಿ: ವಸಂತ ಬಿ ಈಶ್ವರಗೆರೆ

ಜನಸಾಮಾನ್ಯರಿಗೆ ʻದುಬಾರಿ ದುನಿಯಾʼ : ದವಸ, ಧಾನ್ಯಗಳು ಸೇರಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆ |

ಎಲ್ಲಾ ಡಿಪ್ಲೋಮಾ ಸೆಮಿಸ್ಟರ್ ಪರೀಕ್ಷೆ ಡಿಪ್ಲೋಮಾ ಫಲಿತಾಂಶ ಪ್ರಕಟ, ಈ ರೀತಿ ರಿಸಲ್ಟ್‌ ನೋಡಿ

Share.
Exit mobile version