ಬೆಂಗಳೂರು: ಗೌರವಾನ್ವಿತ ರಾಜ್ಯಪಾಲರ ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧದ ಅಂಶಗಳನ್ನು ಅಳವಡಿಕೆ ಮಾಡದೇ ಆರೋಗ್ಯಕರ ಪ್ರಜಾಪ್ರಭುತ್ವ, ಸಕಾರಾತ್ಮಕ ಒಕ್ಕೂಟ ವ್ಯವಸ್ಥೆಯಡಿ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನುವು ಮಾಡಿಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
ಮಾನ್ಯ ರಾಜ್ಯಪಾಲರು ಭಾಷಣ ಮಾಡಲು ಎಲ್ಲಿಯೂ ವಿರೋಧಿಸಿಲ್ಲ. ರಾಜ್ಯ ಸರ್ಕಾರವು ಸುಳ್ಳು ಹಾಗೂ ತಪ್ಪು ಮಾಹಿತಿಯನ್ನು ಹರಡುವುದಕ್ಕೆ ಮತ್ತು ಜನಸಾಮಾನ್ಯರನ್ನು ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದನ್ನು ಮಾತ್ರ ವಿರೋಧಿಸಿದ್ದಾರೆ ಎಂದು ಅವರು ಗಮನ ಸೆಳೆದಿದ್ದಾರೆ.
ರಾಜ್ಯ ಸರ್ಕಾರವು ನಿರಂತರವಾಗಿ ಕೇಂದ್ರ ಸರ್ಕಾರದ ಯೋಜನೆಗಳ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ಈ ರೀತಿಯ ಅಪಪ್ರಚಾರಕ್ಕೆ ಸಂವಿಧಾನಾತ್ಮಕ ಹುದ್ದೆಯಲ್ಲಿರುವ ಗೌರವಾನ್ವಿತ ರಾಜ್ಯಪಾಲರನ್ನೂ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ. ಹಾಗೂ ಇದು ಸಂವಿಧಾನ ವಿರೋಧಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರದ ಎಕತೆ ಮತ್ತು ಅಖಂಡತೆಗೆ ಧಕ್ಕೆ ತರಬಲ್ಲಂತಹ ಹೇಳಿಕೆಯನ್ನು ನಾನು ಓದುವುದಿಲ್ಲ ಎಂದು ಮಾನ್ಯ ರಾಜ್ಯಪಾಲರು ಹೇಳಿರುವುದು ಸ್ವಾಗತಾರ್ಹ ಹಾಗೂ ಸರ್ಕಾರದ ಈ ರೀತಿಯ ನಡೆ ಖಂಡನೀಯ ಎಂದಿರುವ ಅವರು, ಕಾಂಗ್ರೆಸ್ ಸರ್ಕಾರಕ್ಕೆ ಜನತೆಯ ಅಭಿವೃದ್ಧಿಗಿಂತಲೂ ದ್ವೇಷದ ರಾಜಕಾರಣ ಮುಖ್ಯವಾಗಿದೆ. ಮಾನ್ಯ ರಾಜ್ಯಪಾಲರ ತೀರ್ಮಾನದ ನಂತರದಲ್ಲಾದರೂ ಕಾಂಗ್ರೆಸ್ ಸರ್ಕಾರವು ತನ್ನ ನಡೆಯನ್ನು ಸುಧಾರಿಸಿಕೊಳ್ಳುವುದು ಉತ್ತಮ ಎಂದು ತಿಳಿಸಿದ್ದಾರೆ.
ಒಕ್ಕೂಟ ವ್ಯವಸ್ಥೆಯನ್ನು ಬಲವಾಗಿ ಪ್ರತಿಪಾದಿಸುವ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ತಾನು ಅಧಿಕಾರದಲ್ಲಿದ್ದೇನೆ ಎಂಬ ಒಂದೇ ಕಾರಣಕ್ಕೆ ಸಂವಿಧಾನಕ್ಕೆ ಅಪಚಾರ ಎಸಗುವ ರೀತಿಯಲ್ಲಿ ಶಾಸನಸಭೆಯನ್ನು ಕೇಂದ್ರ ಸರ್ಕಾರದ ವಿರುದ್ಧ ದ್ವೇಷ ಸಾಧಿಸಲು ಬಳಕೆ ಮಾಡುತ್ತಿರುವ ಕ್ರಮ ಪ್ರಜಾಪ್ರಭುತ್ವಕ್ಕೆ ಎಸಗುವ ಅಪಚಾರ ಅಲ್ಲದೆ ಮತ್ತೇನಲ್ಲ.
ಸಂವಿಧಾನ ಹಾಗೂ ಒಕ್ಕೂಟ ವ್ಯವಸ್ಥೆಯನ್ನು ಪ್ರತಿಪಾದಿಸುತ್ತಿರುವ ಕಾಂಗ್ರೆಸ್ ಸರ್ಕಾರ ಸತತವಾಗಿ ಕೇಂದ್ರ ಸರ್ಕಾರದ ವಿರುದ್ಧ ವಿಷಕಾರುತ್ತ ರಾಜ್ಯದ ಜನತೆಗೆ ದ್ರೋಹ ಮಾಡುತ್ತಿದೆ. ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಗೆ ನಿರಂತರ ಅಪಚಾರ ಎಸಗುತ್ತ ಬಂದಿದೆ. ಕಳೆದ 32 ತಿಂಗಳ ಅವಧಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ಹಿತ ಕಾಪಾಡದೆ ನಿರಂತರವಾಗಿ ಕೇಂದ್ರದ ಎನ್.ಡಿ.ಎ ಸರ್ಕಾರದ ವಿರುದ್ಧ ವಿಧಾನ ಮಂಡಲದಲ್ಲಿ ನಿರ್ಣಯಗಳನ್ನು ಕೈಗೊಂಡು ಒಕ್ಕೂಟ ವ್ಯವಸ್ಥೆಯನ್ನು ಭಗ್ನಗೊಳಿಸಲು ಷಡ್ಯಂತ್ರ ರೂಪಿಸುತ್ತಾ ಬಂದಿದೆ ಎಂದು ಆಕ್ಷೇಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಕಳೆದ ಎಂಟು ಅಧಿವೇಶನಗಳಲ್ಲಿ 5 ಬಾರಿ ಕೇಂದ್ರ ಸರ್ಕಾರದ ವಿರುದ್ಧ ವಿಧಾನ ಮಂಡಲದಲ್ಲಿ ಐದು ನಿರ್ಣಯಗಳನ್ನು ಅಂಗೀಕರಿಸಿ ರಾಜ್ಯದ ಜನತೆ ನೀಡಿರುವ ಜನಾದೇಶದ ಬಹುಮತವನ್ನು ದುರುಪಯೋಗ ಮಾಡುತ್ತಾ ಬಂದಿದೆ. ಗ್ಯಾರಂಟಿ ಯೋಜನೆಗಳ ನೆಪದಲ್ಲಿ ರಾಜ್ಯದ ಅಭಿವೃದ್ಧಿಯನ್ನು ಬದಿಗೊತ್ತಿ ಸರ್ಕಾರದ ಆರ್ಥಿಕ ಸಾಮಥ್ರ್ಯ ಕುಸಿದು ಹೋಗಿದ್ದು ಯಾವುದೇ ಕ್ಷಣದಲ್ಲಿ ರಾಜ್ಯದ ಬೊಕ್ಕಸ ದಿವಾಳಿ ಆಗುವ ಲಕ್ಷಣಗಳಿವೆ. ಹೀಗಾಗಿ ಕೇಂದ್ರ ಸರ್ಕಾರದ ಮೇಲೆ ಸುಳ್ಳು ಆಪಾದನೆ ಮಾಡುತ್ತಾ ರಾಜ್ಯದ ಜನರಲ್ಲೂ ದ್ವೇಷ ಬಿತ್ತುವ ಕೆಲಸ ಮಾಡುತ್ತಿದೆ. ವಿಬಿ ಜಿ ರಾಮ್ ಜಿ ಯೋಜನೆ ವಿರುದ್ಧ ವಿಧಾನ ಮಂಡಲದಲ್ಲಿ ವಿಶೇಷ ಚರ್ಚೆಗೆ ಅಧಿವೇಶನ ಕರೆದು ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಹುಯಿಲು ಎಬ್ಬಿಸಲು ಹುನ್ನಾರ ನಡೆಸಿದೆ ಎಂದು ಟೀಕಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದಿರಬಹುದು. ಆದರೆ ನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟ ಕರ್ನಾಟಕದಲ್ಲಿ 19 ಸ್ಥಾನಗಳನ್ನು ಗೆದ್ದಿದೆ ಎಂಬುದನ್ನು ಕಾಂಗ್ರೆಸ್ ಮರೆಯಬಾರದು. ತನಗಿರುವ ಬಹುಮತ ಮನಬಂದಂತೆ ರಾಜ್ಯ ನಡೆಸಲು ಅಲ್ಲ ಎಂಬುದನ್ನು ಕಾಂಗ್ರೆಸ್ ಪಕ್ಷ ಮನದಟ್ಟು ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
BREAKING: ರಾಜ್ಯದಲ್ಲಿ ಮತ್ತೊಂದು ಭೀಕರ ಅಗ್ನಿ ಅವಘಡ: ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಗುಜರಿ ಅಂಗಡಿ
‘ಇ-ಹಾಜರಾತಿ’ ಪರಿಗಣಿಸದೇ ‘ಗ್ರಾಮ ಪಂಚಾಯ್ತಿ ಸಿಬ್ಬಂದಿ ವೇತನ’ ಪಾವತಿಸಿ: ರಾಜ್ಯ ಸರ್ಕಾರ ಆದೇಶ








