ಬೆಂಗಳೂರು: ಶಕ್ತಿ ಯೋಜನೆಯಡಿ ಹೊರ ರಾಜ್ಯದವರಿಗೂ ಟಿಕೆಟ್ ನೀಡಿ, ಅದರ ಬದಲಿಗೆ ತಮ್ಮ ಯುಪಿಐ ಖಾತೆಗೆ ಟಿಕೆಟ್ ಮೊತ್ತದ ದರವನ್ನು ಕೆಲ ಬಿಎಂಟಿಸಿ ನಿರ್ವಾಹಕರು ಪಡೆದಿದ್ದು ಬೆಳಕಿಗೆ ಬಂದಿತ್ತು. ಈ ಯುಪಿಐ ಸ್ಕ್ಯಾನರ್ ದುರುಪಯೋಗ ಪ್ರಕರಣದಲ್ಲಿ ನಾಲ್ವರು ನಿರ್ವಾಹಕರನ್ನು ಅಮಾನತುಗೊಳಿಸಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆದೇಶಿಸಿದೆ.
ಹೊರ ರಾಜ್ಯದವರಿಗೆ ಐಡಿ ಕಾರ್ಡ್ ನೋಡಿದ ನಂತ್ರ, ಅವರಿಗೆ ಶಕ್ತಿ ಯೋಜನೆಯ ಉಚಿತ ಟಿಕೆಟ್ ನೀಡುವಂತಿಲ್ಲ. ಹೀಗಿದ್ದರೂ ಬಿಎಂಟಿಸಿಯ ಕಂಡಕ್ಟರ್, ಅವರಿಗೂ ಶಕ್ತಿ ಯೋಜನೆಯ ಟಿಕೆಟ್ ನೀಡಿ, ಅವರಿಂದ ಅದರಲ್ಲಿ ಇದ್ದಂತ ಹಣವನ್ನು ತಮ್ಮ ಯುಪಿಐ ಸ್ಕ್ಯಾನರ್ ಗೆ ಹಾಕಿಸಿಕೊಂಡಿದ್ದರು.
ಬಿಎಂಟಿಸಿ ತನಿಖಾಧಿಕಾರಿಗಳು ಟಿಕೆಟ್ ಚೆಕ್ ಮಾಡಿದಂತ ಸಂದರ್ಭದಲ್ಲಿ ಹೀಗೊಂದು ಹಗರಣ ಬೆಳಕಿಗೆ ಬಂದಿತ್ತು. ಹೀಗಾಗಿ ಬಿಎಂಟಿಸಿಯ ಎಲ್ಲಾ ಘಟಕದಲ್ಲೂ ಯುಪಿಐ ಸ್ಕ್ಯಾನರ್ ದುರುಪಯೋಗದ ಬಗ್ಗೆ ಸಮಗ್ರ ತನಿಖೆಯನ್ನು ಸಂಸ್ಥೆಯು ನಡೆಸಿತ್ತು. ಈ ಸಂದರ್ಭದಲ್ಲಿ ಮೂವರು ಕಂಡಕ್ಟರ್ ಯುಪಿಐ ಸ್ಕ್ಯಾನರ್ ದುರುಪಯೋಗ ಮಾಡಿಕೊಂಡಿರೋದು ಖಚಿತಗೊಂಡಿದೆ.
ಈ ಹಿನ್ನಲೆಯಲ್ಲಿ ಬಿಎಂಟಿಸಿಯ ಈಶಾನ್ಯ ವಲಯದ ಘಟಕ ಸಂಖ್ಯೆ 23ರ ನಿರ್ವಾಹಕ ಸುರೇಶ್ ಎಂಬುವರನ್ನು ಅಮಾನತುಗೊಳಿಸಲಾಗಿದೆ. ಅವರು ಬರೋಬ್ಬರಿ 47,257 ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ ಎಂಬುದಾಗಿ ಬಿಎಂಟಿಸಿ ತಿಳಿಸಿದೆ.
ಇನ್ನೂ ದಕ್ಷಿಣ ವಲಯದ ಘಟಕ ಸಂಖ್ಯೆ 3ರ ಚಾಲಕ ಕಂ ನಿರ್ವಾಹಕರಾದಂತ ಮಂಚೇಗೌಡ ಎಂಬುವರು ಯುಪಿಐ ಸ್ಕ್ಯಾನರ್ ಬಳಸಿ ರೂ.54,358 ದುರುಪಯೋಗ ಮಾಡಿದ್ದರೇ, ಈಶಾನ್ಯ ವಲಯದ ಘಟಕ ಸಂಖ್ಯೆ 14ರ ನಿರ್ವಾಹಕ ಅಶ್ವಾಕ್ ಖಾನ್ ಅವರು 3,206 ಹಣವನ್ನು ದುರುಪಯೋಗ ಮಾಡಿಕೊಂಡಿರೋದು ತನಿಖೆಯಿಂದ ತಿಳಿದು ಬಂದಿದೆ.
ಈ ಕಾರಣದಿಂದ ನಿರ್ವಾಹಕ ಸುರೇಶ್, ಚಾಲಕ ಕಂ ನಿರ್ವಾಹಕ ಮಂಚೇಗೌಡ, ನಿರ್ವಾಹಕ ಅಶ್ವಾಕ್ ಖಾನ್ ಹಾಗೂ ಇಂದು ಸುಪ್ರಿಯಾ ಎಂಬುವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ವಿಚಾರಣೆ ಪೂರ್ಣಗೊಳ್ಳುವವರೆಗೂ ಅಮಾನತುಗೊಳಿಸಿ ಬಿಎಂಟಿಸಿ ಆದೇಶಿಸಿದೆ.
ಈ ಘಟನೆಯಿಂದ ಎಚ್ಚರಗೊಂಡಿರುವಂತ ಬಿಎಂಟಿಸಿಯು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲಾ ಘಟಕದ ವ್ಯವಸ್ಥಾಪಕರಿಗೆ ವಿವರವಾದ ಸೂಚನೆಗಳನ್ನು ಜಾರಿಗೊಳಿಸಿದೆ. ಜೊತೆಗೆ ಯುಪಿಐ ಸ್ಕ್ಯಾನರ್ ಗಳ ಬಳಕೆಯನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡುವಂತೆ, ಎಲ್ಲಾ ಚಾಲನಾ ಸಿಬ್ಬಂದಿಗಳು ನಿಗದಿತ ಟಿಕೆಟ್ ಮತ್ತು ಆದಾಯ ಸಂಗ್ರಹಣೆಯ ಕ್ರಮಗಳನ್ನು ಸಂಪೂರ್ಣವಾಗಿ ಪಾಲಿಸುವಂತೆ ನಿರ್ದೇಶಿಸಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..








