ನವದೆಹಲಿ:ನೀವು ರೈಲು ಟಿಕೆಟ್ ಬುಕ್ ಮಾಡಿದ ನಿಲ್ದಾಣಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲವೇ? ಅಥವಾ ಕೊನೆಯ ಕ್ಷಣದಲ್ಲಿ ಬೇರೆ ನಿಲ್ದಾಣದಿಂದ ರೈಲು ಹತ್ತಬೇಕೆಂದು ನಿರ್ಧರಿಸಿದ್ದೀರಾ? ಇನ್ನು ಮುಂದೆ ಚಿಂತಿಸಬೇಕಿಲ್ಲ. ಭಾರತೀಯ ರೈಲ್ವೆಯು ತನ್ನ ನಿಯಮಗಳಲ್ಲಿ ಮಹತ್ವದ ಬದಲಾವಣೆ ತಂದಿದ್ದು, ಪ್ರಯಾಣಿಕರು ರೈಲು ಹೊರಡುವ ಕೇವಲ ಅರ್ಧ ಗಂಟೆ ಮುಂಚಿತವಾಗಿ ತಮ್ಮ ಹತ್ತುವ ನಿಲ್ದಾಣವನ್ನು (Boarding Station) ಬದಲಾಯಿಸಿಕೊಳ್ಳಬಹುದು.
ಈ ಹಿಂದೆ ಬೋರ್ಡಿಂಗ್ ಸ್ಟೇಷನ್ ಬದಲಾಯಿಸಲು 24 ಗಂಟೆಗಳ ಮೊದಲು ಅರ್ಜಿ ಸಲ್ಲಿಸಬೇಕಿತ್ತು. ಆದರೆ ಈಗ ತಾಂತ್ರಿಕ ಸುಧಾರಣೆಯಿಂದಾಗಿ, ರೈಲಿನ ಚಾರ್ಟ್ ಸಿದ್ಧವಾಗುವವರೆಗೂ (ಅಂದರೆ ರೈಲು ಹೊರಡುವ 30 ನಿಮಿಷಗಳ ಮೊದಲು) ಈ ಬದಲಾವಣೆಗೆ ಅವಕಾಶ ನೀಡಲಾಗಿದೆ.
ಐಆರ್‌ಸಿಟಿಸಿ (IRCTC) ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ಲಾಗಿನ್ ಆಗಿ ‘Booking History’ ವಿಭಾಗದಲ್ಲಿ ಈ ಬದಲಾವಣೆಯನ್ನು ಸುಲಭವಾಗಿ ಮಾಡಬಹುದು.ಒಮ್ಮೆ ಬೋರ್ಡಿಂಗ್ ಪಾಯಿಂಟ್ ಬದಲಾಯಿಸಿದರೆ, ಹಳೆಯ ನಿಲ್ದಾಣದಿಂದ ಪ್ರಯಾಣಿಸುವ ಹಕ್ಕನ್ನು ನೀವು ಕಳೆದುಕೊಳ್ಳುತ್ತೀರಿ. ಒಂದು ವೇಳೆ ಹಳೆಯ ನಿಲ್ದಾಣದಿಂದಲೇ ಪ್ರಯಾಣಿಸಿದರೆ, ವಿನಾಕಾರಣ ದಂಡ ತೆರಬೇಕಾಗಬಹುದು. ಹಾಗಾಗಿ ಯೋಚಿಸಿ ಬದಲಾವಣೆ ಮಾಡಿ.
ಕೌಂಟರ್‌ನಲ್ಲಿ ಟಿಕೆಟ್ ಪಡೆದವರು ಕೂಡ ರೈಲ್ವೆ ನಿಲ್ದಾಣದ ವಿಚಾರಣಾ ಕೇಂದ್ರಕ್ಕೆ ಹೋಗಿ ಲಿಖಿತವಾಗಿ ಪತ್ರ ನೀಡುವ ಮೂಲಕ ಈ ಸೌಲಭ್ಯ ಪಡೆಯಬಹುದು.
ಬೋರ್ಡಿಂಗ್ ಸ್ಟೇಷನ್ ಬದಲಾಯಿಸುವುದು ಹೇಗೆ?
IRCTC ವೆಬ್‌ಸೈಟ್‌ಗೆ ಭೇಟಿ ನೀಡಿ: ನಿಮ್ಮ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ.
ಬುಕಿಂಗ್ ಹಿಸ್ಟರಿ: ‘My Transactions’ ಅಡಿಯಲ್ಲಿ ‘Booked Ticket History’ ಆರಿಸಿ.
ಬದಲಾವಣೆ ಮಾಡಿ: ನೀವು ಪ್ರಯಾಣಿಸಬೇಕಾದ ಟಿಕೆಟ್ ಆರಿಸಿ, ಅಲ್ಲಿ ಕಾಣುವ ‘Change Boarding Point’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ನಿಲ್ದಾಣ ಆಯ್ಕೆ: ಲಭ್ಯವಿರುವ ನಿಲ್ದಾಣಗಳ ಪಟ್ಟಿಯಲ್ಲಿ ನಿಮ್ಮ ಹೊಸ ನಿಲ್ದಾಣವನ್ನು ಆರಿಸಿ ‘OK’ ನೀಡಿ. ಕೂಡಲೇ ನಿಮ್ಮ ಮೊಬೈಲ್‌ಗೆ ಹೊಸ ಬೋರ್ಡಿಂಗ್ ಪಾಯಿಂಟ್‌ನ ಮೆಸೇಜ್ ಬರುತ್ತದೆ.








