ಮಂಡ್ಯ: ತಾಯಿ ಯಾವುದೋ ವಿಷಯಕ್ಕೆ ಬೈದರೆಂಬ ಕಾರಣಕ್ಕೆ ಇಬ್ಬರು ಅಪ್ರಾಪ್ತ ಸಹೋದರಿಯರು ಭಾವುಕವಾಗಿ ಪತ್ರ ಬರೆದಿಟ್ಟು ಮನೆಯಿಂದ ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಾಮಚಂದ್ರ ಎಂಬುವರ ಮಕ್ಕಳಾದ ಸುಜಾತಾ (16) ಹಾಗೂ ರುಕ್ಮಿಣಿ (14) ನಾಪತ್ತೆಯಾದ ದುರ್ದೈವಿ ಸಹೋದರಿಯರು. ತಾಯಿ ಬೈದಿದ್ದರಿಂದ ತೀವ್ರ ಮನನೊಂದಿರುವ ಈ ಇಬ್ಬರು ಹೆಣ್ಣುಮಕ್ಕಳು, ಮನೆ ಬಿಟ್ಟು ಹೋಗುವ ಮುನ್ನ ಬರೆದಿಟ್ಟಿರುವ ಪತ್ರ ಈಗ ಪೋಷಕರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಪತ್ರದಲ್ಲೇನಿದೆ? (ಡೆತ್‌ನೋಟ್)
ಮನೆ ಬಿಡುವ ಮುನ್ನ ಸಹೋದರಿಯರು ತಮ್ಮ ನೋವನ್ನು ಪತ್ರದಲ್ಲಿ ತೋಡಿಕೊಂಡಿದ್ದಾರೆ.
“ಅಮ್ಮ-ಅಪ್ಪ ಸ್ವಾರಿ… ನಿಮ್ಮ ಕಣ್ಣು ಮುಂದೆ ಸಾಯುವುದಕ್ಕೆ ಆಗಲ್ಲ. ಹೀಗಾಗಿ ನಾವು ದೂರ ಹೋಗಿ ಸತ್ತಿದ್ದೇವೆ, ಸ್ವಾರಿ…” ಎಂದು ಆಘಾತಕಾರಿ ಲೇಖನ ಬರೆದಿಟ್ಟು ಹೋಗಿದ್ದಾರೆ.
ಕಣ್ಣೀರಿಡುತ್ತಾ ಪೊಲೀಸ್ ಠಾಣೆ ಮೆಟ್ಟಿಲೇರಿದ ಪೋಷಕರು
ಮಕ್ಕಳು ಬರೆದಿಟ್ಟಿದ್ದ ಪತ್ರವನ್ನು ಓದುತ್ತಿದ್ದಂತೆ ಪೋಷಕರ ಜಗತ್ತೇ ಕತ್ತಲಾದಂತಾಗಿದೆ. ಆತಂಕದಿಂದಲೇ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ಧಾವಿಸಿದ ಪೋಷಕರು, ಮಕ್ಕಳನ್ನು ಹುಡುಕಿಕೊಡುವಂತೆ ಕಣ್ಣೀರಿಡುತ್ತಾ ಪೊಲೀಸರ ಮೊರೆ ಹೋಗಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪ್ರಾಪ್ತ ಸಹೋದರಿಯರ ಪತ್ತೆಗಾಗಿ ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ. ಮಕ್ಕಳು ಎಲ್ಲಾದರೂ ಪ್ರಾಣಕ್ಕೆ ಅಪಾಯ ತಂದುಕೊಂಡಿರಬಹುದೇ ಎಂಬ ಭಯದಿಂದ ಇಡೀ ಗ್ರಾಮಸ್ಥರು ಹಾಗೂ ಕುಟುಂಬದವರು ಕಣ್ಣೀರಲ್ಲೇ ದಿನದೂಡುತ್ತಿದ್ದಾರೆ.
BREAKING : ಗ್ಯಾರಂಟಿ ಯೋಜನೆಗಳಿಗೆ 1 ಲಕ್ಷ 50 ಸಾವಿರ ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದೇವೆ : ಸಿಎಂ ಸಿದ್ದರಾಮಯ್ಯ








