ಬೆಳಗಾವಿ ಸುವರ್ಣಸೌಧ: ಬರುವ 2026ರ ಜನವರಿಯಿಂದ ಕಪ್ಪುತಲೆ ಹುಳುವಿನ ಸಮೀಕ್ಷೆಯನ್ನು ಪುನಾರಂಭಿಸಿ ಬೇಗನೇ ಪೂರ್ಣಗೊಳಿಸಿ ಪರಿಹಾರ ಕಲ್ಪಿಸುವುದಾಗಿ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕಾ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ ಅವರು ಭರವಸೆ ನೀಡಿದರು.
ಪರಿಷತ್ತಿನಲ್ಲಿ ಡಿ.09ರಂದು ಸದಸ್ಯರಾದ ಮಧು ಜಿ ಮಾದೇಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 30 (235)ರ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸಚಿವರು, ಕಪ್ಪುತಲೆಹುಳು ಬಾಧಿತ ತೆಂಗಿನ ಬೆಳೆಯ ವೈಜ್ಞಾನಿಕ ಸಮೀಕ್ಷೆಯನ್ನು ಜುಲೈ-2025ರ ಮಾಹೆಯ ಅವಧಿಯಲ್ಲಿಯೇ ಪೂರ್ಣಗೊಳಿಸಬೇಕಿತ್ತು. ಆದರೆ, ಮಳೆ ಹಾಗೂ ಇನ್ನಿತರ ಕಾರಣದಿಂದ ಸಮೀಕ್ಷೆ ಅಪೂರ್ಣವಾಗಿದೆ.
ಸಮೀಕ್ಷೆ ಕೈಗೊಳ್ಳಲು ಅನುದಾನದ ಅವಶ್ಯಕತೆ ಇರುವುದರಿಂದ ಸಮೀಕ್ಷೆಗೆ ಅಂದಾಜು 1.94 ಕೋಟಿ ರೂ ಬೇಕಿದೆ ಎಂದು ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯ ಸಹಮತಿಗೆ ಕಳುಹಿಸಿದ್ದೇವೆ.
ಜನವರಿಯಿಂದ ಮೇ ವರೆಗೂ ಹೆಚ್ಚಿನ ಉಷ್ಣಾಂಶದಿAದ ಕಪ್ಪುತಲೆ ಹಾಗೂ ಬಿಳಿನೊಣದ ಹಾನಿ ಹೆಚ್ಚಾಗಲಿದ್ದು, ಈ ಅವಧಿಯಲ್ಲಿ ಸಮೀಕ್ಷೆ ಕೈಗೊಂಡಲ್ಲಿ ನಿಖರವಾದ ಮಾಹಿತಿ ಲಭ್ಯವಾಗಲಿದೆ.
ಸಮೀಕ್ಷೆಗೆ ಸರ್ವೇಯರ್‌ಗಳನ್ನು ನಿಯೋಜಿಸಲಾಗಿದೆ. ಪ್ರತಿ ತಾಕಿಗೆ ರೂ. 10 ರಂತೆ ಗೌರವಧನ ನೀಡಲಾಗುತ್ತದೆ. ಒಟ್ಟು ಕಪ್ಪುತಲೆ ಹುಳುವಿನಿಂದ 62,044 ಹೆಕ್ಟೇರ್ ಪ್ರದೇಶವನ್ನು ಹಾಗೂ ಬಿಳಿನೊಣದಿಂದ 3,24,259 ಹೆಕ್ಟೇರ್ ಪ್ರದೇಶ ಬಾಧಿತವಾಗಿರುವುದಾಗಿ ಅಂದಾಜಿಸಲಾಗಿದೆ.
ಬಿಳಿನೊಣದ ಬಾಧೆ ಹೆಚ್ಚಾದ ಬಗ್ಗೆ ಮುಖ್ಯಮಂತ್ರಿಗಳು ಸೂಚಿಸಿದಂತೆ ಹಾಗೂ ಸಂಬAಧಪಟ್ಟ ಸ್ಥಳೀಯ ಜನಪ್ರತಿನಿಧಿಗಳ ಕೋರಿಕೆಯಂತೆ ಕಪ್ಪುತಲೆ ಹುಳುವಿನ ಜೊತೆಗೆ ಬಿಳಿನೊಣದ ಸಮೀಕ್ಷೆಯನ್ನು ಸಹ ಕೈಗೊಳ್ಳಬೇಕಾಗಿದೆ ಎಂದು ಸಚಿವರು ವಿವರಿಸಿದರು.
ಮೈಸೂರು, ತುಮಕೂರು, ಹಾಸನ, ಮಂಡ್ಯ, ಬೆಂಗಳೂರು ದಕ್ಷಿಣ, ಚಿಕ್ಕಮಗಳೂರು, ಚಿತ್ರದುರ್ಗ, ಚಾಮರಾಜನಗರ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಕಪ್ಪುತಲೆ ಹುಳುವಿನ ಬಾಧೆ ಕಾಣಿಸಿಕೊಂಡು ತೆಂಗಿನ ಇಳುವರಿ ಕುಸಿದಿದೆ. ಸಮೀಕ್ಷೆ ಪೂರ್ಣವಾಗುವವರೆಗೆ ಏನಾದರು ಪರಿಹಾರ ಕಲ್ಪಿಸಬೇಕು ಎಂದು ಸದಸ್ಯರಾದ ಮಧು ಜಿ ಮಾದೇಗೌಡ ಅವರು ಸರ್ಕಾರಕ್ಕೆ ಒತ್ತಾಯ ಮಾಡಿದರು.








