ಬೆಂಗಳೂರು: ಯುವನಿಧಿ ಯೋಜನೆಗೆ ನೋಂದಣಿ ಆರಂಭಗೊಂಡ ಬಳಿಕ, ಯೋಜನೆಯ ಅನುಷ್ಠಾನಕ್ಕಾಗಿ, ಫಲಾನುಭವಿಗಳ ಖಾತೆಗೆ ಹಣ ಜಮಾ ಕಾರ್ಯಕ್ರಮ ಜನವರಿ.12ರಂದು ಶಿವಮೊಗ್ಗದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಬಗ್ಗೆ ಮಹತ್ವದ ಮಾಹಿತಿಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಂಚಿಕೊಂಡಿದ್ದಾರೆ. ಆ ಬಗ್ಗೆ ಮುಂದೆ ಓದಿ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಅವರು, ಕರ್ನಾಟಕ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಹಾಗೂ ಅತ್ಯಂತ ಮಹಾತ್ವಾಕಾಂಕ್ಷೆಯ “ಯುವನಿಧಿ” ಯೋಜನೆಯು ಯುವ ಜನಾಂಗದ ಉಜ್ವಲ ಭವಿಷ್ಯವನ್ನು ಕಲ್ಪಿಸುವ ಹಿತದೃಷ್ಠಿಯಿಂದ 2022-23 ನೇ ಸಾಲಿನಲ್ಲಿ ವ್ಯಾಸಂಗ ಮಾಡಿ 2023ರ ಲ್ಲಿ ತೇರ್ಗಡೆಯಾಗಿ 180 ದಿನಗಳವರೆಗೆ ಉದ್ಯೋಗ ಅವಕಾಶ ದೊರೆಯದ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3000 ಮತ್ತು ಡಿಪ್ಲೊಮಾ ಮುಗಿಸಿದವರಿಗೆ ಮಾಸಿಕ 1,500 ಆರ್ಥಿಕ ನೆರವು ನೀಡುವ ಯೋಜನೆ ಇದಾಗಿದೆ ಎಂದಿದ್ದಾರೆ.
ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀಯುತ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ ರವರು 26/12/2023 ರಂದು ಸದರಿ ಯೋಜನೆಯ ನೊಂದಣಿ ಪ್ರಕ್ರಿಯೆಗೆ ಚಾಲನೆ ಕೊಟ್ಟಿದ್ದರು ಅಂತ ತಿಳಿಸಿದ್ದಾರೆ.
ಸದರಿ ಯೋಜನೆಯ ನೊಂದಣಿ ಉಚಿತವಾಗಿದ್ದು ಈ ಯೋಜನೆಯ ನೊಂದಣಿ ಆರಂಭವಾದ ಮೊದಲ ದಿನದಿಂದ ಈ ದಿನದವರೆಗೂ 38,730 ಅರ್ಹ ಅಭ್ಯರ್ಥಿಗಳು ತಮ್ಮ ಹೆಸರುಗಳನ್ನು ಸೇವಾ ಸಿಂಧು ಪೋರ್ಟಲ್” ನಲ್ಲಿ ನೊಂದಣಿ ಮಾಡಿಕೊಂಡಿರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ಸದರಿ ಯೋಜನೆ ಅಡಿಯಲ್ಲಿ ಅರ್ಹರಾಗಿರುವ ಫಲಾನುಭವಿಗಳಿಗೆ ನಿರುದ್ಯೋಗ ಭತ್ಯೆಯನ್ನು ಡಿಬಿಟಿ ಮೂಲಕ (ಫಲಾನುಭವಿಗಳ ಖಾತೆಗೆ ನೇರವಾಗಿ ಪಾವತಿ) “ಪಾವತಿಸುವ ಪ್ರಾರಂಭೋತ್ಸವ” ಕಾರ್ಯಕ್ರಮ ಇದೇ ತಿಂಗಳ 12ರಂದು (ಶುಕ್ರವಾರ) ಶಿವಮೊಗ್ಗ ನಗರದಲ್ಲಿರುವ ಫ್ರೀಡಂ ಪಾರ್ಕ ನಲ್ಲಿ ನಡೆಯಲಿದೆ ಅಂತ ತಿಳಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಸಂಪುಟದ ಸಹೋದ್ಯೋಗಿಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ಯುವನಿಧಿ ಯೋಜನೆಗೆ ಒಳಪಡುವ ಅರ್ಹ ಫಲಾನುಭವಿಗಳು ಆದಷ್ಟು ಶೀಘ್ರ ತಮ್ಮ ತಮ್ಮ ಹೆಸರುಗಳನ್ನು ಸರ್ಕಾರದ ಸೇವಾ ಸಿಂಧು ಪೋರ್ಟಲ್ ನಲ್ಲಿ ನೊಂದಣಿ ಮಾಡಿಕೊಂಡು ಯುವನಿಧಿ ಯೋಜನೆಯ ಲಾಭವನ್ನು ಸದುಪಯೋಗಪಡಿಸಿಕೊಳ್ಳುವಂತೆ ಈ ಮೂಲಕ ಮನವಿ ಮಾಡಿದ್ದಾರೆ.
ಸದರಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಹಾಗೂ ಯುವಜನತೆಯಲ್ಲಿ ಈ ಕುರಿತು ಅರಿವು ಮೂಡಿಸಲು, ಕಾರ್ಯಕ್ರಮ ನಡೆಯುವ ದಿನದಂದು ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಆಗಮಿಸುವಂತೆ ಕೋರಿದ್ದಾರೆ.
ಗಮನಿಸಿ: ‘KSRTC ತಾಂತ್ರಿಕ ಸಹಾಯಕ ಹುದ್ದೆ’ಯ ‘ಸಂಭವನೀಯ ಆಯ್ಕೆ ಪಟ್ಟಿ’ ಪ್ರಕಟ